ರಾಜಕೀಯವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಮುಗಿಸಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ರಮೇಶ್ ಜಾರಕಿಹೊಳಿ ಮತ್ತು ಹಳೇ ಮೈಸೂರು ಭಾಗದ ಟೀಂ ಕೆಲಸ ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ಡಿ.ಕೆ.ಶಿವಕುಮಾರ್ ಅವರ ಕೈ-ಕಾಲು ಹಿಡಿಯಲು ರಮೇಶ್ ಜಾರಕಿಹೊಳಿ ಬಂದಿದ್ದರು. ಕಾಲು ಹಿಡಿಯಲು ಬಂದಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ರಮೇಶ್ ಜಾರಕಿಹೊಳಿ ಅಧಿಕಾರ ಕಳೆದುಕೊಂಡು ಹುಚ್ಚನಂತಾಡುತ್ತಿದ್ದಾನೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕ ರವಿ ಗಣಿಗ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಒಕ್ಕಲಿಗರ ನಾಯಕತ್ವ ಮುಗಿಸಲು ಹೊರಟಿದ್ದಾರೆ. ನೂರು ಜನ ರಮೇಶ್ ಜಾರಕಿಹೊಳಿ ಬಂದರೂ ಡಿ.ಕೆ. ಶಿವಕುಮಾರ್ ಅವರನ್ನು ಟಚ್ ಮಾಡಲು ಆಗಲ್ಲ. ಏಳು ಜನ್ಮ ಎತ್ತಿದರೂ ಡಿ.ಕೆ.ಶಿವಕುಮಾರ್ರನ್ನು ಮತ್ತೆ ಜೈಲಿಗೆ ಕಳಿಸಲು ಆಗಲ್ಲ ಎಂದು ಕೆಂಡವಾದರು.
ಡಿ.ಕೆ. ಶಿವಕುಮಾರ್ ಸಿಡಿ ಮಾಸ್ಟರ್ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಬೆಡ್ ಮೇಲೆ ನಾವು ಮಲಗಲು ಹೋಗಿದ್ವಾ? ಸಿಡಿ ಮಾಡಿದವನು ಯಾರೋ, ತೋರಿಸಿರೋನು ಯಾರೋ, ಹೀಗೆ ಮಾತನಾಡಿ ಮಾತನಾಡಿಯೇ ಅವರು ಮಾಜಿ ಆಗಿರುವುದು, ನಾವು ಅಧಿಕಾರಕ್ಕೆ ಬಂದಿರುವುದು.
ರಾಜ್ಯದಲ್ಲಿ ಬರ ಇದೆ, ಜನರ ಬಳಿಗೆ ಹೋಗಬೇಕು. ಅದನ್ನು ಬಿಟ್ಟು ಡಿಸಿಎಂ ಅವರನ್ನು ಜೈಲಿಗೆ ಕಳುಹಿಸುತ್ತೇನೆ, ಅವರನ್ನ ಮಾಜಿ ಮಾಡುತ್ತೇನೆ ಅನ್ನುವುದನ್ನು ಬಿಡಬೇಕು. ಹುಚ್ಚರಂತೆ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. 137ಜನ ಶಾಸಕರು ಎಲ್ಲರ ಜೊತೆ ಇದ್ದೇವೆ. ನಾವೆಲ್ಲ ಸಂತೋಷವಾಗಿದ್ದೇವೆ. ವಿರೋಧ ಪಕ್ಷದವರಿಗೆ ಅಧಿಕಾರವಿಲ್ಲ, ಇದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಪ್ರತಿದಿನ ಒಂದೊಂದು ಏನೇನೊ ಹೇಳುತ್ತಿದ್ದಾರೆ ಎಂದರು.
ಡಿ.ಕೆ. ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ಹೆಸರು ಕೆಡಿಸುತ್ತಿದೆ. ಡಿಕೆ ಆ್ಯಂಡ್ ಕಂಪನಿ ಆಪರೇಷನ್ ಕಮಲ ಮಾಡುತ್ತಿದ್ದಾರೆ ಅಂತಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಕಮಲ ಆಗಲು ಸಾಧ್ಯವಿಲ್ಲ. ನಂಬರ್ ಹೆಚ್ಚು ಬೇಕು, ಮಹಾರಾಷ್ಟ್ರ ಮಾದರಿಯಲ್ಲಿದರೆ ಸರ್ಕಾರ ಬದಲಾಗುವುದು. ಅತೀ ಶೀಘ್ರದಲ್ಲಿ ಡಿ.ಕೆ. ಶಿವಕುಮಾರ್ ಮಾಜಿ ಮಂತ್ರಿ ಆಗಲಿದ್ದಾರೆ. ಹೈಕೋರ್ಟ್ ಹಿನ್ನಡೆಯಿಂದ ಅವರು ಮಾಜಿ ಅಗಲಿದ್ದಾರೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದರು.