ರಾಜಕೀಯ ಪಕ್ಷಗಳು ‘ಇಂಡಿಯಾ’ ಎಂಬ ಸಂಕ್ಷಿಪ್ತ ರೂಪ ಬಳಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮುಂದೆ ಪ್ರತಿಕ್ರಿಯಿಸಿರುವ ಭಾರತೀಯ ಚುನಾವಣಾ ಆಯೋಗವು (ಇಸಿಐ) ರಾಜಕೀಯ ಮೈತ್ರಿಗಳನ್ನು ನಿಯಂತ್ರಿಸುವ ಅಧಿಕಾರ ತನಗೆ ಇಲ್ಲ ಎಂದು ಹೇಳಿದೆ.
ಜನಪ್ರತಿನಿಧಿ ಕಾಯಿದೆ- 1951ರ ಅಡಿ “ರಾಜಕೀಯ ಪಕ್ಷ”ವೊಂದರ ವ್ಯಕ್ತಿಗಳನ್ನು ಅಥವಾ ಸಂಘ ಸಂಸ್ಥೆಗಳ ಒಕ್ಕೂಟಗಳನ್ನು ನೋಂದಾಯಿಸುವ ಅಧಿಕಾರ ಮಾತ್ರ ತನಗೆ ಇದೆ ಎಂದು ಅದು ಹೇಳಿದೆ.
ರಾಜಕೀಯ ಮೈತ್ರಿಯನ್ನು ಜನಪ್ರತಿನಿಧಿ ಕಾಯಿದೆ ಅಥವಾ ಸಂವಿಧಾನದ ಅಡಿ ನಿಯಂತ್ರಿತ ಘಟಕವಾಗಿ ಗುರುತಿಸಲಾಗಿಲ್ಲ ಎಂದು ಆಯೋಗವು ತಿಳಿಸಿದೆ.
ಜನಪ್ರತಿನಿಧಿ ಕಾಯಿದೆ, 1951ರ (ಆರ್‌ಪಿ ಕಾಯಿದೆ) ಸೆಕ್ಷನ್ 29 ಎ ಪ್ರಕಾರ ರಾಜಕೀಯ ಪಕ್ಷದ ಸಂಸ್ಥೆಗಳು ಅಥವಾ ವ್ಯಕ್ತಿಗಳ ಸಂಘಗಳನ್ನು ನೋಂದಾಯಿಸುವ ಅಧಿಕಾರವನ್ನು ತಾನು ಹೊಂದಿದ್ದು ರಾಜಕೀಯ ಮೈತ್ರಿಯನ್ನು ಜನಪ್ರತಿನಿಧಿ ಕಾಯಿದೆ ಅಥವಾ ಸಂವಿಧಾನದ ಅಡಿ ನಿಯಂತ್ರಿಸಬಹುದಾದ ಘಟಕವಾಗಿ ಗುರುತಿಸಲಾಗಿಲ್ಲ ” ಎಂದು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಪಾಪ, ನವರಸ ನಾಯಕ ಜಗ್ಗೇಶಿ ತಮ್ಮ ನವರಸಗಳನ್ನೆಲ್ಲ ಹುಲಿ ಉಗುರಿನ ಲಾಕೆಟ್‌ನಲ್ಲಿ ಇಟ್ಟಿದ್ದರಂತೆ!
ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಕುರಿತು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಗಿರೀಶ್ ಭಾರದ್ವಾಜ್ ಎಂಬುವವರು, ‘ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂಬ ಸಂಕ್ಷಿಪ್ತ ರೂಪವನ್ನು ಬಳಸುವ ಮೂಲಕ, ಕೆಲ ರಾಜಕೀಯ ಪಕ್ಷಗಳು ಅನಗತ್ಯವಾಗಿ ದೇಶದ ಹೆಸರಿನ ಲಾಭ ಪಡೆದುಕೊಳ್ಳುತ್ತಿವೆ’ ಎಂದು ದೂರಿದ್ದರು.
ಈ ರೀತಿಯ ಹೆಸರಿಟ್ಟುಕೊಳ್ಳುವುದು “2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಶಾಂತಿಯುತ, ಪಾರದರ್ಶಕ ಮತ್ತು ನ್ಯಾಯಸಮ್ಮತವಾದ ಮತ ಚಲಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ‘ಇಂಡಿಯಾ’ ಎಂಬ ಸಂಕ್ಷಿಪ್ತ ರೂಪ ಬಳಕೆ ಮಾಡುವುದಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಬೇಕು ಹಾಗೂ ‘ಇಂಡಿಯಾ’ ಅಕ್ಷರಗಳನ್ನು ಮುದ್ರಿಸಿರುವ ರಾಷ್ಟ್ರ ಧ್ವಜದ ಬಳಕೆಯನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಈ ಕುರಿತು ಆಗಸ್ಟ್‌ನಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್ 26 ವಿರೋಧ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಇಸಿಐ ಪ್ರತಿಕ್ರಿಯೆಯನ್ನೂ ಕೋರ್ಟ್ ಕೇಳಿತ್ತು. ಪ್ರಕರಣದ ಸಂಬಂಧ ಮಂಗಳವಾರ ಹೈಕೋರ್ಟ್ ವಿಚಾರಣೆ ನಡೆಸಲಿದೆ.