ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಮೂರನೇ ಅಚ್ಚರಿ ಫಲಿತಾಂಶ ನೀಡಿದೆ. ಈಗಾಗಲೇ ಪ್ರಬಲ ತಂಡಗಳಾದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಅಫ್ಘಾನಿಸ್ತಾನ ಮತ್ತೊಂದು ಪ್ರಬಲ ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ.
ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ವಿಶ್ವಕಪ್ ಟೂರ್ನಿಯ 30ನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 242 ರನ್‌ಗಳ ಸವಾಲನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ನಾಯಕ ಹಶ್ಮತುಲ್ಲಾ ಶಾಹಿದಿ (ಅಜೇಯ 58), ರಹಮತ್ ಶಾ(62), ಅಜ್ಮತುಲ್ಲಾ ಒಮರ್ಜಾಯ್ (ಅಜೇಯ 73) ಹಾಗೂ ಇಬ್ರಾಹಿಂ ಜದ್ರಾನ್ (39) ಅವರ ಸಂಘಟನಾತ್ಮಕ ಬ್ಯಾಟಿಂಗ್‌ನಿಂದ 45.2 ಓವರ್‌ಗಳಲ್ಲಿ ಗುರಿ ಸಾಧಿಸಿತು.
ನಾಲ್ಕು ಸೋಲು ಕಂಡಿರುವ ಶ್ರೀಲಂಕಾಕ್ಕೆ ಸೆಮಿಫೈನಲ್ ಕನಸು ಇನ್ನು ಮುಂದೆ ಕಷ್ಟಕರವಾಗಲಿದೆ. ಅಫ್ಘಾನ್ ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಇದೇ ರೀತಿಯ ಅಚ್ಚರಿ ಫಲಿತಾಂಶಗಳನ್ನು ನೀಡಿದರೆ ನಾಲ್ಕರ ಘಟ್ಟಕ್ಕೆ ದಾಪುಗಾಲಿಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ಸುದ್ದಿ ಓದಿದ್ದೀರಾ? ಪಾಕ್ ಕಳಪೆ ಪ್ರದರ್ಶನಕ್ಕೆ ಹೊಣೆ ಹೊತ್ತ ಇಂಜಮಾಮ್-ಉಲ್-ಹಕ್
ಟಾಸ್ ಗೆದ್ದ ಅಫ್ಘಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಅಫ್ಘಾನಿಸ್ತಾನ ಬೌಲರ್‌ಗಳ ದಾಳಿಗೆ ತತ್ತರಿಸಿದ ಶ್ರೀಲಂಕಾ ಆಟಗಾರರು ಬಿರುಸಿನ ಆಟವಾಡದೆ 49.3 ಓವರ್‌ಗಳಲ್ಲಿ ಆಲೌಟ್ ಆಗಿ 241 ರನ್‌ಗಳಷ್ಟನ್ನೇ ಗಳಿಸಲು ಸಾಧ್ಯವಾಯಿತು.
ಪಾತುಂ ನಿಸ್ಸಾಂಕ(46), ಕುಸಾಲ್ ಮೆಂಡಿಸ್(39), ಸದೀರ ಸಮರವಿಕ್ರಮ(36) ಹಾಗೂ ಮಹೇಶ್ ತೀಕ್ಷಣ (29) ರನ್ ಗಳಿಸಿ ಗೌರವಾನ್ವಿತ ಮೊತ್ತದ ಪಾಲುದಾರರಾದರು.
ಅಫ್ಘಾನ್ ತಂಡದ ಫಜಲ್ಹಕ್ ಫಾರೂಕಿ 34/4, ಮುಜೀಬ್ ಉರ್ ರೆಹಮಾನ್ 38/2 ವಿಕೆಟ್ ಗಳಿಸಿ ಯಶಸ್ವಿ ಬೌಲರ್‌ಗಳೆನಿಸಿದರು.