- ‘ಅನ್ಯಾಯವಾಗಿದ್ದರೆ ನ್ಯಾಯ ಒದಗಿಸಿಕೊಡುತ್ತೇವೆ’
- ಸಿಬಿಐ ತನಿಖೆಗೆ ಒತ್ತಾಯಿಸಿರುವ ರಮೇಶ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಅವರು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಕೊಟ್ಟರೆ ಅದರ ಆಧಾರದ ಮೇಲೆ ಪೊಲೀಸರಿಂದ ತನಿಖೆ ಮಾಡಿಸುತ್ತೇವೆ. ಅನ್ಯಾಯವಾಗಿದ್ದರೆ ನ್ಯಾಯ ಒದಗಿಸಿಕೊಡುತ್ತೇವೆ” ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ತುಮಕೂರಿನಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಡಿಸಿಎಂ ಡಿ ಕೆ ಶಿವಕುಮಾರ್ ಹನಿಟ್ರ್ಯಾಪ್ ಮೂಲಕ ನನ್ನ ಸಿಡಿ ಮಾಡಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಮಾಡಿದರೆ ಸತ್ಯಾಂಶ ಹೊರ ಬರಲಿದೆ’ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬರ ಪರಿಹಾರ ಕೊಟ್ಟಿಲ್ಲ
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು, “ರಾಜ್ಯ ಬರದಿಂದ ತತ್ತರಿಸಿದ್ದರೆ, ಕೇಂದ್ರದಿಂದ ಬಂದಿದ್ದ ಅಧ್ಯಯನ ತಂಡದ ಅಧಿಕಾರಿಗಳಿಗೆ ಇಲ್ಲಿನ ಬರ ಕಾಣಿಸಿಲ್ಲ. ‘ಹಸಿರು ಚೆನ್ನಾಗಿದೆ’ ಎಂದು ಬರೆದುಕೊಂಡು ಹೋಗಿ ವರದಿ ನೀಡಿದ್ದಾರೆ. ಇವರಿಗೆ ಕಣ್ಣು ಕಾಣಿಸುವುದಿಲ್ಲವೆ” ಎಂದು ಪ್ರಶ್ನಿಸಿದರು.
“ಬೆಳೆ ನಷ್ಟವನ್ನು ಅಂದಾಜಿಸಿ ₹17 ಸಾವಿರ ಕೋಟಿ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಈವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಶೇ 65ರಷ್ಟು ಮಳೆ ಕೊರತೆಯಾಗಿದ್ದು, ಸುಮಾರು ₹37 ಸಾವಿರ ಕೋಟಿ ಮೊತ್ತದಷ್ಟು ಬೆಳೆ ನಷ್ಟವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶರವೇಗದಲ್ಲಿ ಸಾವಿನತ್ತ ಧಾವಿಸಿದೆ RTI!
ಗಡಿಯಲ್ಲಿ ಕಟ್ಟೆಚ್ಚರ
“ಮಹಾರಾಷ್ಟ್ರದಲ್ಲಿ ಮರಾಠರ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ನಿಗಾ ವಹಿಸಲಾಗಿದೆ” ಎಂದು ವಿವರಿಸಿದರು.