ದಸರಾ ಹಬ್ಬಕ್ಕೆ ತವರೂರಿಗೆ ಬಂದಿದ್ದ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದ ಅಳಿಯ ಮಾವನೊಂದಿಗೆ ಜಗಳವಾಡಿ, ಮಾವನನ್ನು ಕಲ್ಲು ಎತ್ತಿಹಾಕಿ ಕೊಂದು ತಾನು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದ ಈರಪ್ಪ ಶರಣಪ್ಪ (60) ಕೊಲೆಯಾದ ದುರ್ದೈವಿ. ಆತ್ಮಹತ್ಯೆ ಮಾಡಿಕೊಂಡ ಅಳಿಯ ಗೋರಖನಾಥ ಗಾಯಕವಾಡ (32) ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ಮೂಲದ ಗೋರಖನಾಥ ಹೆಂಡತಿಗೆ ಕರೆದುಕೊಂಡು ಹೋಗಲು ಚಿಂತಪಳ್ಳಿ ಗ್ರಾಮಕ್ಕೆ ಬಂದಿದ್ದಾನೆ. ದೀಪಾವಳಿ ನಂತರ ಕರೆದುಕೊಂಡು ಹೋಗುವಂತೆ ಮಾವ ತಿಳಿಸಿದ್ದಾರೆ. ಇದಕ್ಕೆ ಕೋಪಗೊಂಡ ಅಳಿಯ ಪತ್ನಿ ಹಾಗೂ ಮಾವನೊಂದಿಗೆ ಜಗಳವಾಡಿದ್ದಾನೆ.
ಹೊಲಕ್ಕೆ ಹೋಗಿದ್ದ ಮಾವನ ಹಿಂದೆ ಹೋದ ಅಳಿಯ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ. ಅಲ್ಲಿಂದ ಊರಿಗೆ ಬಂದ ಅಳಿಯ ಗೋರಖನಾಥ ಉದ್ದೇಶಪೂರ್ವಕವಾಗಿ ವಿದ್ಯುತ್ ತಂತಿ ಹಿಡಿದುಕೊಂಡಿದ್ದಾನೆ. ಪರಿಣಾಮ ವಿದ್ಯುತ್ ತಗುಲಿ ಕಟ್ಟಡದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶರವೇಗದಲ್ಲಿ ಸಾವಿನತ್ತ ಧಾವಿಸಿದೆ RTI!
“ಆರು ತಿಂಗಳ ಹಿಂದೆ ಮದುವೆಯಾದ ಗೋರಖನಾಥ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದನು, ಈ ಕಾರಣಕ್ಕೆ ಪತ್ನಿ ತವರು ಮನೆಗೆ ಬಂದಿದ್ದಳು. ಮತ್ತೆ ಕರೆಯಲು ಬಂದ ಅಳಿಯ ಗೋರಖನಾಥ ಮಾವನಿಗೆ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ಸುಲೇಪೇಟ್ ಪೊಲೀಸ್ ಠಾಣೆ ಪಿಎಸ್ ಐ ನಂದಿನಿ ಈದಿನ.ಕಾಮ್‌ಗೆ ತಿಳಿಸಿದ್ದಾರೆ.