ಸಿನಿಮಾ ರಂಗದಲ್ಲಿ ಮಿಂಚಿ ಹಿಂದೆ ಸರಿದಿದ್ದ ಹಲವಾರು ನಟ-ನಟಿಯರು ಮತ್ತೆ ಚಿತ್ರರಂಗಕ್ಕೆ ಪುನರಾಗಮನ ಮಾಡುತ್ತಿದ್ದಾರೆ. ಅವರೆಲ್ಲರೂ ಹೊಸ ಉತ್ಸಾಹಗಳೊಂದಿಗೆ ಸಿನಿರಂಗಕ್ಕೆ ಮರಳುತ್ತಾರೆ. ಅಂತಹವರಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಭಾರೀ ಸದ್ದು ಮಾಡಿದ್ದ ನಟಿ ಮಹಾಲಕ್ಷ್ಮಿ ಕೂಡ ಒಬ್ಬರು.
ಮಹಾಲಕ್ಷ್ಮಿ ಅವರು 1980ರಿಂದ 1991ರವರೆಗೆ ಸಿನಿರಂಗದಲ್ಲಿ ಮಿಂಚಿದ್ದರು. ಕನ್ನಡವೂ ಸೇರಿದಂತೆ ದಕ್ಷಿಣದ ನಾನಾ ಭಾಷೆಗಳ ಸಿನಿಮಾದಲ್ಲಿ ನಟಿಸಿ, ಸಿನಿಮಾ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ, 30 ವರ್ಷಗಳ ಬಳಿಕ ಕನ್ನಡದ ‘ಟಿಆರ್‌ಪಿ ರಾಮ’ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
“ನೀವು ನಿಮ್ಮ ವೃತ್ತಿಯನ್ನು ಪ್ರೀತಿಸಿದಾಗ, ನೀವು ಹಲವು ವರ್ಷಗಳ ಅಂತರದ ಬಳಿಕ ಆ ವೃತ್ತಿಗೆ ಮರಳಿದಾಗಲೂ ನಿಮ್ಮಲ್ಲಿ ಅದೇ ಪ್ರೀತಿ ಮತ್ತು ಪ್ರಾಮಾಣಿಕತೆ ತುಂಬಿರುತ್ತದೆ” ಎನ್ನುವ ಮಹಾಲಕ್ಷ್ಮಿ ಅವರ ಟಿಆರ್‌ಪಿ ರಾಮ ಚಿತ್ರವು ಈ ವಾರ ಬಿಡುಗಡೆಯಾಗಲಿದೆ. “ಚಿತ್ರವನ್ನು ಪ್ರೇಕ್ಷಕರೊಂದಿಗೆ ವೀಕ್ಷಿಸಲು ನಾನು ಕಾತರದಿಂದ ಕಾಯುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
“ನನ್ನ ಕುಟುಂಬಕ್ಕೆ ಆದ್ಯತೆ ನೀಡಲು ನಾನು ಚಿತ್ರರಂಗದಿಂದ ದೂರ ಸರಿದಿದ್ದೆ. ಈಗ ಚಲನಚಿತ್ರಗಳಿಗೆ ಮರಳುತ್ತಿದ್ದೇನೆ. ಟಿಆರ್‌ಪಿ ರಾಮ ಸಿನಿಮಾದ ನಿರ್ಮಾಪಕರು ಒಳ್ಳೆಯ ಪಾತ್ರಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ, ನಾನು ಅದನ್ನು ಒಪ್ಪಿಕೊಂಡೆ. ನಟನೆ ಒಂದು ವೃತ್ತಿಯಾಗಿದೆ. ಅದರ ಭಾಗವಾಗಿರಲು ನಾನು ಯಾವಾಗಲೂ ಬಯಸುತ್ತೇನೆ” ಎಂದು ಅವರು ಹೇಳಿಕೊಂಡಿದ್ದಾರೆ.
ಮೂರು ದಶಕಗಳ ಕಾಲ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಇಂದಿನ ಪೀಳಿಗೆಯಲ್ಲಿ ಜನಪ್ರಿಯವಾಗಿರುವ ಚಲನಚಿತ್ರಗಳ ಬಗ್ಗೆ ಅವರು ಉತ್ತಮ ಗ್ರಹಿಕೆಯನ್ನು ಹೊಂದಿದ್ದಾರೆ. “ಆಗ (80ರ ದಶಕ), ನಾವು ಕೆಲವು ಉತ್ತಮ ಕಥಾಹಂದರವನ್ನು ಹುಡುಕುತ್ತಿದ್ದೆವು. ಸ್ತ್ರೀ-ಕೇಂದ್ರಿತ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆಕಾಣುತ್ತಿದ್ದವು. ಇಂದಿಗೂ ಅದು ಮುಂದುವರೆದಿದೆ. ಆದಾಗ್ಯೂ, ಇಂದಿನ ಕಾಲಕ್ಕೆ ತಕ್ಕಂತೆ ಕತೆಗಳು ವಿಕಸನಗೊಂಡಿವೆ” ಎಂದು ಮಹಾಲಕ್ಷ್ಮಿ ಹೇಳುತ್ತಾರೆ.
“ಟಿಆರ್‌ಪಿ ರಾಮ ಸಿನಿಮಾದಲ್ಲಿ ನನಗೆ ಗಟ್ಟಿಗಿತ್ತಿ ತಾಯಿಯ ಪಾತ್ರವನ್ನು ನಿರ್ದೇಶಕರು ರೂಪಿಸಿದ್ದಾರೆ. ತಾಯಿ ತನ್ನ ಮಗನನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾಳೆ. ಚಿತ್ರದಲ್ಲಿ ಕಾಣಿಸುವ ನೋಟದಿಂದಾಗಿ ಪ್ರೇಕ್ಷಕರು ನನ್ನ ಪಾತ್ರವನ್ನು ಋಣಾತ್ಮಕವೆಂದು ಗ್ರಹಿಸಬಹುದು. ಆದರೆ, ಪ್ರೇಕ್ಷಕರ ಆಸಕ್ತಿಯನ್ನು ಖಂಡಿತವಾಗಿ ಕೆರಳಿಸುವ ದೃಶ್ಯಗಳು ಹೆಚ್ಚಾಗಿವೆ” ಎಂದು ಅವರು ಹೇಳಿದ್ದಾರೆ.