ನಾಡು-ನುಡಿಯ ಸೇವೆಯಲ್ಲಿಯ ಜೀವನದ ಸಾರ್ಥಕತೆಯಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ಎಲ್ಲರೂ ಭಾಗಿಯಾಗುವ ಅಗತ್ಯವಿದೆ. ನುಡಿ ಹಬ್ಬ ಎಲ್ಲರೂ ಸಂಭ್ರಮದಿಂದ ಆಚರಿಸೋಣ ಎಂದು ಶಾಸಕ ಶರಣು ಸಲಗರ ಹೇಳಿದರು.
ಬಸವಕಲ್ಯಾಣದ ರಥ ಮೈದಾನದಲ್ಲಿನ ಸಭಾ ಭವನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ‘ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಹಲವು ಪ್ರತಿಭಾವಂತರಿದ್ದಾರೆ. ಅವರೆಲ್ಲರೂ ಸೇರಿ ಕನ್ನಡ ನಾಡನ್ನು ಕಟ್ಟಿದ್ದಾರೆ. ಕನ್ನಡ ಕಟ್ಟಿದ ಚೇತನರು ನಿತ್ಯ ಪ್ರಾತಃಸ್ಮರಣಿಯರು. ಅವರ ಕೊಡುಗೆ, ಬರಹ ಓದುವ ಮೂಲಕ ಕನ್ನಡ ಸಂಸ್ಕೃತಿ ಬೆಳೆಸಬೇಕು” ಎಂದರು.
“ತಾಲೂಕು ಆಡಳಿತದಿಂದ ಜರುಗುವ ಪ್ರತಿಯೊಂದು ಸಮಾರಂಭಗಳಲ್ಲಿ ತಾಲೂಕಿನ ಒಂದೊಂದು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಭಾಷಣ ಮಾಡಿಸುವ ಮೂಲಕ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ” ನೀಡಿದರು
ಸಮಾರಂಭ ಉದ್ಘಾಟಿಸಿದ ಸಹಾಯಕ ಆಯುಕ್ತ ಪ್ರಕಾಶ ಕುದರಿ ಮಾತನಾಡಿ, “ಕನ್ನಡ ನೆಲ-ಜಲಕ್ಕಾಗಿ ನಾವೆಲ್ಲ ಒಂದಾಗಬೇಕು. ಕನ್ನಡದ ಅಭಿಮಾನಕ್ಕಾಗಿ ಭಾಷೆಯನ್ನು ಬೆಳೆಸಬೇಕು. ನಮ್ಮ ಪತ್ರ ಬರಹಗಳು ಕಡ್ಡಾಯವಾಗಿ ಕನ್ನಡದಲ್ಲಿರಲಿ. ಗಡಿ ಪ್ರದೇಶದ ಶಾಲೆಗಳಲ್ಲಿ ಕನ್ನಡಕ್ಕೆ ಒತ್ತು ನೀಡಬೇಕಾಗಿದೆ. ಬಸವಕಲ್ಯಾಣದ ಎಲ್ಲ ಅಂಗಡಿ ಮುಗ್ಗಟ್ಟುಗಳ ಫಲಕಗಳು ಕನ್ನಡದಲ್ಲಿರಲಿ” ಎಂದು ಹೇಳಿದರು.
ಕನ್ನಡ ಬೌದ್ಧಿಕ ಲೋಕ ಅನನ್ಯ:
ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ವಿಶೇಷ ಉಪನ್ಯಾಸ ನೀಡಿ, “ಸಾಂಸ್ಕೃತಿಕ ನೆನಪು, ಲೋಕ ದೃಷ್ಟಿ, ತಿಳುವಳಿಕೆ ಇಲ್ಲವೇ ಅರಿವು ಈ ಮೂರು ಆಯಾಮಗಳು ತಾಯಿ ನುಡಿಗಿರುತ್ತದೆ. ಜಾಗತೀಕರಣದ ಸಂದರ್ಭದಲ್ಲಿ ಬಂಡವಾಳಶಾಹಿ ಬಂಡವಾಳಶಾಹಿ, ನವ ವಸಾಹತುಶಾಹಿ ಹುಟ್ಟಿಸಿದ ಭ್ರಮೆಯಿಂದ ಕನ್ನಡಕ್ಕೆ ಅಪಾಯವಿದೆ. ಸ್ಥಳೀಯ ಜ್ಞಾನ ಭಾಷೆಯ ಮೂಲಕ ಜಾಗತೀಕರಣ ತಂದೊಡ್ಡುವ ಬಿಕ್ಕಟ್ಟು ಎದುರಿಸಬೇಕು” ಎಂದರು.
“ಕನ್ನಡಕ್ಕೆ ಕೇವಲ ಭೌಗೋಳಿಕ ನಕಾಶೆಯಿಲ್ಲ. ಅದು ಬೌದ್ಧಿಕ, ವೈಚಾರಿಕ ಮತ್ತು ಸಾಂಸ್ಕೃತಿಕ ನಕಾಶೆಯನ್ನು ರೂಪಿಸಿದೆ. ಮಾನವೀಯತೆ, ಜಾತ್ಯತೀತ ಧೋರಣೆ, ಪರಧರ್ಮ ಸಹಿಷ್ಣುತೆ, ಸಮನ್ವಯತೆ, ಸೌಹಾರ್ದತೆ, ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನಗಳು ಕನ್ನಡ ಸಾಹಿತ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಶೋಧ ಹಾಗೂ ನಿಲುವುಗಳಾಗಿವೆ. ಕವಿರಾಜ ಮಾರ್ಗಕಾರನಿಂದ ಪಂಪ, ವಚನಕಾರರು ಆಧುನಿಕ ಲೇಖಕರೆಲ್ಲರೂ ತಮ್ಮ ಬಹುಧ್ವನಿ, ಬಹುತ್ವದ ತಾತ್ವಿಕತೆಯನ್ನು ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ” ಎಂದು ನುಡಿದರು.
ಬಸವಕಲ್ಯಾಣದಲ್ಲಿ ‘ಕನ್ನಡ ಭವನ’ ‘ಪತ್ರಿಕಾಭವನ’ದ ಅಗತ್ಯವಿದೆ:
“ಈ ನೆಲಕ್ಕೆ, ಕನ್ನಡ ಭಾಷೆಗೆ ಅಸ್ಮಿತೆ ತಂದುಕೊಟ್ಟ ವಚನಗಳು ಬಹುತ್ವದ ಆಯಾಮ ನಿರ್ವಚಿಸಿವೆ. ಈ ನೆಲದ ಬಹುಸಾಂಸ್ಕೃತಿಕತೆಯನ್ನು ಬಹುಧ್ವನಿತ್ವವನ್ನು ಕಥನಿಸಿವೆ. ‘ಪರಧನ, ಪರದೈವ, ಪರಸ್ತ್ರೀ ಒಲ್ಲೆ’ ‘ಪರಸ್ತ್ರೀಯನ್ನು ತಾಯಿಯೆಂಬೆ’ ಎಂಬುದು ಕನ್ನಡವು ಲೋಕಕ್ಕೆ ಅರುಹಿದ ಬಹುದೊಡ್ಡ ನೈತಿಕ ಸಿದ್ಥಾಂತವಾಗಿದೆ. ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬುದು ಕನ್ನಡದ ತಾತ್ವಿಕತೆಯಾಗಿದೆ. ಅನ್ನದ ಭಾಷೆಯಾಗದೇ ಬರೀ ಅಭಿಮಾನದ ಭಾಷೆಯಾಗಿಯೇ ಉಳಿದಿರುವುದರಿಂದ ಪದವಿಯಲ್ಲಿ ಐಚ್ಛಿಕ ಕನ್ನಡ ಓದುವವರ ಸಂಖ್ಯೆ ಗಣನೀಯ ಕಡಿಮೆಯಾಗಿದೆ. ಸ್ನಾತಕೋತ್ತರ ಕನ್ನಡದಲ್ಲಿ ವಿದ್ಯಾರ್ಥಿಗಳ ಇಳಿಕೆ ಕನ್ನಡಕ್ಕೆ ಒದಗಿದ ಕುತ್ತಾಗಿದೆ. ಕನ್ನಡ ಕಟ್ಟುವಿಕೆಯಲ್ಲಿ ಕ್ರಿಯಾಶೀಲರಾಗಲು ಕಲ್ಯಾಣದಲ್ಲಿ ‘ಕನ್ನಡ ಭವನ’ ‘ಪತ್ರಿಕಾಭವನ’ದ ಅಗತ್ಯವಿದೆ. ಕನ್ನಡ ಪ್ರಾಧ್ಯಾಪಕರಿಲ್ಲದೆ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳು, ಅಧ್ಯಾಪಕರಿಲ್ಲದೇ ಗಡಿ ಶಾಲೆಗಳು ಸೊರಗುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.
ಜ್ಞಾನಪ್ರೀಯ ಶಾಲೆಯ ವಿದ್ಯಾರ್ಥಿನಿ ಗಂಗೋತ್ರಿ ಸೂರ್ಯಕಾಂತ ಬೇಲೂರೆ ಅವರ ಭಾಷಣ ಗಮನ ಸೆಳೆಯಿತು.
ತಾ.ಪಂ ಇ.ಓ. ಮಹಾದೇವ ಬಾಬಳಗಿ, ಪೌರಾಯುಕ್ತ ಮನೋಜಕುಮಾರ ಕಾಂಬಳೆ, ಬಿಇಓ ಸಿ.ಜಿ. ಹಳ್ಳದ, ಸಿಪಿಐ ಅಲೀಸಾಬ್, ಕಸಾಪ ಅಧ್ಯಕ್ಷ ಶಾಂತಲಿಂಗ ಮಠಪತಿ, ಸರ್ಕಾರಿ ನೌಕರರ ಅಧ್ಯಕ್ಷ ಮಲ್ಲಿಕಾರ್ಜುನ ಮೇತ್ರೆ ಮೊದಲಾದವರು ಇದ್ದರು.
ನಗರದ ಕೋಟೆಯಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತದಿಂದ ಸಭಾ ಭವನದವರೆಗೆ ಕನ್ನಡ ಭುವನೇಶ್ವರಿಯ ಮೆರವಣಿಗೆ ಮಾಡಲಾಯಿತು. ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು , ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಕನ್ನಡಾಭಿಮಾನಿಗಳು ವಿವಿಧ ಕಲಾತಂಡಗಳು, ಪಾಲ್ಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕರ್ನಾಟಕವು ಸರ್ವಜನಾಂಗದ ಶಾಂತಿಯ ನಾಡು : ಉಸ್ತುವಾರಿ ಸಚಿವ ಈಶ್ವರ ಖಂಡ್ರೆ
ಅರ್ಜುನ ಕನಕ, ಡಾ. ಜೈಶೇನಪ್ರಸಾದ, ಶ್ರೀಕಾಂತ ಉಡುಪಾ, ಡಾ. ಶಿವಲೀಲಾ ಪಠಪತಿ, ಎ.ಜಿ. ಪಾಟೀಲ, ಪ್ರತಾಪ ಸೂರ್ಯವಂಶಿ, ಪತ್ರಕರ್ತ ಉದಯಕುಮಾರ ಮುಳೆ, ರಾಜೇಂದ್ರ ಗೋಖಲೆ, ಲೋಕೇಶ್ ಮೋಳಕೇರಿ, ಪಿ. ಜಿ ಹಿರೇಮಠ ಸೇರಿ ವಿವಿಧ ಕ್ಷೇತ್ರದ ಐವತ್ತು ಸಾಧಕರನ್ನು ಸನ್ಮಾನಿಸಿದರು. ತಹಸೀಲ್ದಾರ ಶಾಂತಗೌಡ ಬಿರಾದಾರ ಸ್ವಾಗತಿಸಿದರು. ಶಿವಕುಮಾರ ಜಡಗೆ ನಿರೂಪಿಸಿರು. ಅನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತ್ತು.