- ‘ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ, ಬಿಜೆಪಿಯವರು ಸುಮ್ಮನೇ ಮಾತನಾಡುತ್ತಾರೆ’
- ಕೆಲಸ ಇಲ್ಲದೇ ಇರೋರು ಸಿಎಂ ಬದಲಾವಣೆ ವಿಚಾರ ಮಾತನಾಡುತ್ತಾರೆ: ಗರಂ
ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ನಮ್ಮ ಸರ್ಕಾರ ಸಂಪೂರ್ಣ ಐದು ವರ್ಷ ಪೂರೈಸಲಿದೆ. ಈಗ ನಾನೇ ಸಿಎಂ ಆಗಿದ್ದೇನೆ. ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹೊಸಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ನಂತರ ಮಾಧ್ಯಮದವರು ಕೇಳಿದ, ಸಿಎಂ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.
“ಡಿಸಿಎಂ ಆಯ್ಕೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ಐದು ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ. ನಾನು ಸಿಎಂ ಆಗಿ ಮುಂದುವರಿಯಲಿದ್ದೇನೆ” ಎನ್ನುವ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ಒಂದು ರೀತಿಯಲ್ಲಿ ಪೂರ್ಣ ವಿರಾಮ ಹಾಕಿದಂತೆ ಕಾಣುತ್ತಿದಾರೆ. ಅವರ ಮಾತಿನ ಧಾಟಿ ಮಾರ್ಮಿಕವಾಗಿಯೇ ಇರುವುದನ್ನು ಗಮನಿಸಬಹುದು.
ಸಿಎಂ ಬದಲಾವಣೆ ವಿಚಾರಕ್ಕೆ ಇದೇ ವೇಳೆ ಗರಂ ಆದ ಸಿದ್ದರಾಮಯ್ಯ, ಸ್ವಪಕ್ಷೀಯ ಶಾಸಕರ ವಿರುದ್ಧ ಹರಿಹಾಯ್ದರು. ”ಕೆಲಸ ಇಲ್ಲದೇ ಇರೋರು ಸಿಎಂ ಬದಲಾವಣೆ ವಿಚಾರ ಮಾತನಾಡುತ್ತಾರೆ. ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲಾ. ಹೀಗಾಗಿ ಮಾತನಾಡುತ್ತಾರೆ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ʻಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲʼ ಎಂದು ಸಿಎಂ ಯಾರನ್ನು ಹೆದರಿಸುತ್ತಿದ್ದಾರೆ?
“ರಾಜ್ಯದ ಜನ ನಮಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದಾರೆ. ಐದು ವರ್ಷ ಸುಭದ್ರ ಸರ್ಕಾರ ಕೊಡುತ್ತೇವೆ. ಬಿಜೆಪಿಯವರು ಭ್ರಮನಿರಸರಾಗಿದ್ದಾರೆ. ಅವರಿಗೆ ಅಧಿಕಾರ ಇಲ್ಲದೆ ಇರಲು ಆಗಲ್ಲ. ಮತ್ತೆ ಆಪರೇಷನ್ ಮಾಡೋಕೆ ಪ್ರಯತ್ನ ಮಾಡುತ್ತಾರೆ. ಅದು ಸಾಧ್ಯವಾಗಲ್ಲ” ಎಂದರು.
ಸರ್ಕಾರ ಬೀಳುತ್ತದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರಲ್ಲ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ, “ಅವರು ಸೋತಿದ್ದಾರೆ, ಬೇರೆ ಕೆಲಸ ಇಲ್ಲದೆ ಬಾಯಿಗೆ ಬಂದಂಗೆ ಮಾತನಾಡುತ್ತಾರೆ” ಎಂದು ತಿರುಗೇಟು ನೀಡಿದರು.
ಹೈಕಮಾಂಡ್ ನಿರ್ಧಾರ
“ಸರ್ಕಾರದಲ್ಲಿ ಮೂರು ಉಪಮುಖ್ಯಮಂತ್ರಿಗಳು ಇರಲಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಪ್ರಾದೇಶಿಕ ಪಕ್ಷ ಅಲ್ಲ. ಇಂತಹ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದರು.
ಗಣಿಗಾರಿಕೆಗೆ ಸಂಬಂಧಿಸಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, “ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತದೆ. ಯಾವುದೇ ವರ್ಗದ ಗಣಿಗಾರಿಕೆ ಕಾನೂನುಬದ್ಧವಾಗಿ ಪರವಾನಗಿ ತೆಗೆದುಕೊಂಡಲ್ಲಿ, ಎಲ್ಲ ಸಂಬಂಧಪಟ್ಟ ಇಲಾಖೆಗಳಿಂದ ಸಂಪೂರ್ಣ ಸಹಕಾರ ದೊರೆಯಲಿದೆ” ಎಂದು ಹೇಳಿದರು.
“ಅರಣ್ಯ ಇಲಾಖೆಯೊಂದಿಗೆ ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗಿದ್ದು, ಎ, ಬಿ, ಸಿ ಅಥವಾ ಯಾವುದೇ ವರ್ಗದ ಗಣಿಗಾರಿಕೆಗೆ ತೊಂದರೆ ನೀಡದಂತೆ ಸೂಕ್ತ ನಿರ್ದೇಶನ ನೀಡಲಾಗಿದೆ. ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ಪರ್ಯಾಯ ಕ್ರಮಗಳ ಬಗ್ಗೆಯೂ ತಿಳಿಸಲಾಗಿದೆ. ನಾವು ಹಿಂದೆ ಅಕ್ರಮ ಗಣಿಗಾರಿಕೆ ಬಗ್ಗೆ ಹೋರಾಟ ನಡೆಸಿದ್ದೆವು. ಅಕ್ರಮ ಗಣಿಗಾರಿಕೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ” ಎಂದು ತಿಳಿಸಿದರು.
ಮಹಿಳಾ ಪದವಿ ಕಾಲೇಜು ಮತ್ತು ಮಹಿಳಾ ಪೊಲೀಸ್ ಠಾಣೆ-ಪರಿಶೀಲಿಸಿ ಕ್ರಮ
“ಹೊಸಪೇಟೆಯ ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಗ್ರಂಥಾಲಯ ಕಟ್ಟಡಗಳು ಸೇರಿದಂತೆ ಒಟ್ಟು 36 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಗಿದೆ. ಸುಸಜ್ಜಿತ ವ್ಯವಸ್ಥೆಗಳುಳ್ಳ ಈ ಕಟ್ಟಡಗಳಿಂದ ಸುಮಾರು 3 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ಕಾಮಗಾರಿಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾಗಿದೆ” ಎಂದರು.
ವಿಜಯನಗರ ಜಿಲ್ಲೆಗೆ ಮಹಿಳಾ ಪದವಿ ಕಾಲೇಜು ಹಾಗೂ ಮಹಿಳಾ ಪೊಲೀಸ್ ಠಾಣೆಯ ಅವಶ್ಯಕತೆಯಿರುವ ಬಗ್ಗೆ ಮಾಧ್ಯಮದವರು ತಿಳಿಸಿದ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡುತ್ತಾ, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಂಪಿ ಉತ್ಸವ
“ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ, “ಕಳೆದ ಸಾಲಿನಲ್ಲಿ ಜನವರಿ ಮಾಹೆಯಲ್ಲಿ ಹಂಪಿ ಉತ್ಸವ ಆಚರಿಸಲಾಗಿದೆ. ಈ ಸಾಲಿನಲ್ಲಿಯೂ ಜನವರಿ ಮಾಹೆಯಲ್ಲಿ ಆಚರಿಸಲಾಗುವುದು. ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆಯಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹಂಪಿ ವಿಶ್ವವಿದ್ಯಾಲಯವು ಅನುದಾನ ಕೋರಿದ ಮೇರೆಗೆ ಅನುದಾನವನ್ನು ಕೂಡಲೇ ಒದಗಿಸಲಾಗುವುದು. ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದರು.