‘ನನ್ನ ಸ್ವಾಮಿ’ (ಮೈ ಲಾರ್ಡ್) ಎಂದು ಹೇಳುವುದನ್ನು ನಿಲ್ಲಿಸಿ, ನನ್ನ ಅರ್ಧದಷ್ಟು ಸಂಬಳವನ್ನು ನಿಮಗೆ ಕೊಡುತ್ತೇನೆ ಎಂದು ವಕೀಲರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೇಳಿರುವ ಪ್ರಸಂಗ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ.
ಕೋರ್ಟ್ ಕಲಾಪಗಳ ವೇಳೆ ವಕೀಲರು ಪದೇ ಪದೇ ‘ಮೈ ಲಾರ್ಡ್’ ಮತ್ತು ‘ಯುವರ್ ಲಾರ್ಡ್‌ಶಿಪ್ಸ್’ ಎಂದು ಸಂಬೋಧಿಸುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಮೈ ಲಾರ್ಡ್’ ಎಂದು ಎಷ್ಟು ಬಾರಿ ಹೇಳುತ್ತೀರಿ? ನೀವು ಇದನ್ನು ಹೇಳುವುದನ್ನು ನಿಲ್ಲಿಸಿದರೆ, ನನ್ನ ಸಂಬಳದಲ್ಲಿ ಅರ್ಧದಷ್ಟು ನಿಮಗೆ ನೀಡುತ್ತೇನೆ ಎಂದು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಅವರು ವಕೀಲರಿಗೆ ಹೇಳಿದ್ದಾರೆ.
“ವಕೀಲರು, ವಾದ ಮಂಡಿಸುವ ಸಮಯದಲ್ಲಿ ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್‌ಶಿಪ್’ ಎಂದು ಕರೆಯುತ್ತಾರೆ. ಇದು ವಸಾಹತುಶಾಹಿ ಯುಗದ ಗುಲಾಮಗಿರಿಯ ಸಂಕೇತವಾಗಿದೆ” ಎಂದು ಅವರು ಹೇಳಿದ್ದಾರೆ.
“‘ಮೈ ಲಾರ್ಡ್ ಎಂದು ಕರೆಯುವುದರ ಬದಲು ‘ಸರ್’ ಎಂದು ಏಕೆ ಬಳಸಬಾರದು” ಎಂದು ನ್ಯಾಯಮೂರ್ತಿ ನರಸಿಂಹ ಹೇಳಿದ್ದಾರೆ.
2006ರಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾವು ಯಾವುದೇ ವಕೀಲರು ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಮತ್ತು ‘ಯುವರ್ ಲಾರ್ಡ್‌ಶಿಪ್’ ಎಂದು ಸಂಬೋಧಿಸಬಾರದು ಎಂದು ನಿರ್ಣಯವನ್ನು ಅಂಗೀಕರಿಸಿತ್ತು. ಆದರೂ, ಈ ಎರಡು ಪದಗಳ ಬಳಕೆ ಇಂದಿಗೂ ಮುಂದುವರೆದಿದೆ.