ನಿರ್ದೇಶಕ ಪ್ರೇಮ್ ‘ಮಿಡ್ಲ್ ಕ್ಲಾಸ್ ಡಾರ್ಲಿಂಗ್’ ರಮೇಶ್ ಅರವಿಂದ್ ಕೈಗೆ ಲಾಂಗ್ ಕೊಟ್ಟಿದ್ದೇಕೆ?

Date:

ನಟ, ನಿರ್ದೇಶಕ ‘ಜೋಗಿ’ ಪ್ರೇಮ್ ಸಿನಿಮಾ ಮಾಡುತ್ತಾರೆ ಅಂದರೆ, ಸುದ್ದಿ ಹಾಗೂ ಸದ್ದು ತುಸು ಹೆಚ್ಚೇ ಇರುತ್ತೆ. ಸುದ್ದಿಯಾಗಲಿ ಎಂದೇ ಅವರು ಸಿನಿಮಾ ಮಾಡುವಾಗ ಗಿಮಿಕ್ ಮಾಡುತ್ತಾರೆ. ಈಗಲೂ ಅಂಥದ್ದೊಂದು ಗಿಮಿಕ್ ಮಾಡಿದ್ದಾರೆ. ತಮ್ಮ ನಿರ್ದೇಶನದ ‘ಕೆಡಿ’ ಚಿತ್ರದಲ್ಲಿ ರಮೇಶ್ ಅರವಿಂದ್ ಕೈಗೆ ಲಾಂಗ್ ಕೊಟ್ಟಿದ್ದಾರೆ.

ಕನ್ನಡ ಸಿನಿಮಾ ಹೀರೋಗಳು ಲಾಂಗ್ ಹಿಡಿಯುವುದು ಹೊಸ ವಿಷಯವೇ ಅಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ಒಂದು ಕಾಲದಲ್ಲಿ ಬಿಡುಗಡೆಯಾಗುತ್ತಿದ್ದ ಪ್ರತಿ ಚಿತ್ರದಲ್ಲೂ ಹೀರೋಗಳು ಲಾಂಗ್ ಹಿಡಿದಿರುತ್ತಿದ್ದರು. ಚಿತ್ರದ ನಾಯಕ ಹಳ್ಳಿಯಿಂದ ನಗರಕ್ಕೆ ಬರುವುದು, ಪರಿಸ್ಥಿತಿಗಳ ಒತ್ತಡಕ್ಕೆ ಸಿಲುಕಿ ರೌಡಿಯಾಗುವುದು ಕಾಮನ್ ಆಗಿಬಿಟ್ಟಿತ್ತು. ಹಳ್ಳಿಯಿಂದ ಬಂದವರನ್ನೆಲ್ಲ ಚಿತ್ರರಂಗದವರು ಹೀಗ್ಯಾಕೆ ರೌಡಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಜನ ಜಿಗುಪ್ಸೆ ವ್ಯಕ್ತಪಡಿಸುವ ಮಟ್ಟಕ್ಕೆ ಈ ಟ್ರೆಂಡ್ ಬೆಳೆಯಿತು. ಹಾಗೇ ಅದು ಅವಸಾನ ಕಂಡಿತು. ಸತತ ಸಿನಿಮಾಗಳ ಸೋಲಿನಿಂದ ಕಂಗೆಟ್ಟಂತೆ ಕಾಣುವ ನಿರ್ದೇಶಕ ಪ್ರೇಮ್, ಈಗ ಮತ್ತೆ ಆ ಟ್ರೆಂಡ್‌ ಅನ್ನು ಜನರಿಗೆ ನೆನಪಿಸಲೋ ಎಂಬಂತೆ ರಮೇಶ್ ಅರವಿಂದ್ ಕೈಗೆ ಲಾಂಗ್ ಕೊಟ್ಟಿದ್ದಾರೆ.

ರಮೇಶ್ ಅರವಿಂದ್ ಲಾಂಗ್ ಹಿಡಿದಿರುವುದು ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರಕ್ಕಾಗಿ. ಆಕ್ಷನ್ ಚಿತ್ರಗಳಿಗೆ ಹೆಸರಾದ ಧ್ರುವ ಸರ್ಜಾ ಅದರ ಹೀರೋ. ಅದರಲ್ಲಿ ರಮೇಶ್ ಅರವಿಂದ್ ಕೂಡ ನಟಿಸುತ್ತಿದ್ದಾರೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ ಸಿನಿಮಾಗಳನ್ನು ನೋಡಿದರೆ, ಅವರಿನ್ನೂ ಯಾವ ಕಾಲದಲ್ಲಿದ್ದಾರೆ ಎನ್ನಿಸುತ್ತದೆ. ಚಿತ್ರಗಳ ಮೌಲ್ಯ, ಗುಣಮಟ್ಟದ ಮಾತು ಒತ್ತಟ್ಟಿಗಿರಲಿ, ಅವರು ನಿರ್ದೇಶಿಸಿದ ಮೊದಲ ಮೂರು ಚಿತ್ರಗಳು- ಕರಿಯ, ಎಕ್ಸ್‌ಕ್ಯೂಸ್ ಮಿ, ಜೋಗಿ- ಬಿಟ್ಟರೆ, ಮತ್ಯಾವ ಚಿತ್ರವೂ ಯಶಸ್ಸು ಕಂಡಿಲ್ಲ. ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುವುದು, ಒಳ್ಳೆಯ ಕಥೆ ಮಾಡುವುದು ಬಿಟ್ಟು ಕೇವಲ ಗಿಮಿಕ್ ಮಾಡುವ ಕಡೆ, ಪ್ರಚಾರ ಗಿಟ್ಟಿಸಿಕೊಳ್ಳುವ ಕಡೆ ಗಮನ ಕೊಡುತ್ತಿರುವುದೇ ಅವರ ಚಿತ್ರಗಳು ಸೋಲಲು ಕಾರಣ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗಿಮಿಕ್ ಮಾಡಿ ಹೇಗೆ ಪ್ರಚಾರ ಪಡೆದುಕೊಳ್ಳಬೇಕು ಎಂಬ ವಿಚಾರದಲ್ಲಿ ಪ್ರೇಮ್‌ಗೆ ಉಪೇಂದ್ರ ಆದರ್ಶ. ಉಪೇಂದ್ರ ರೀತಿಯಲ್ಲೇ ನಿರ್ದೇಶಕರಾಗಿದ್ದ ಪ್ರೇಮ್, ಹೀರೋ ಕೂಡ ಆದರು. ಆದರೆ, ಅವರು ನಾಯಕ ನಟನಾದ ಯಾವ ಚಿತ್ರವೂ ಸಾಧಾರಣ ಮಟ್ಟದ ಯಶಸ್ಸನ್ನೂ ಕಾಣಲಿಲ್ಲ. ಸುದೀಪ್ ಹಾಗೂ ಶಿವರಾಜ್‌ಕುಮಾರ್ ಅವರಂಥ ಸ್ಟಾರ್‌ಗಳನ್ನು ಹಾಕಿಕೊಂಡು ‌ʼವಿಲನ್ʼ ಎನ್ನುವ ಸಿನಿಮಾ ನಿರ್ದೇಶಿಸಿದರೂ ಪ್ರೇಮ್‌ಗೆ ಸಕ್ಸಸ್ ಅನ್ನುವುದು ಕನಸಾಗಿಯೇ ಉಳಿಯಿತು. ನಿರ್ದೇಶನದಲ್ಲೂ ನಟನೆಯಲ್ಲೂ ಎರಡೂ ಕಡೆ ವಿಫಲರಾಗಿರುವ ಪ್ರೇಮ್, ಯಾವ ರೀತಿಯಲ್ಲಾದರೂ ಯಶಸ್ಸು ಕಾಣಲೇಬೇಕು ಎನ್ನವು ತಹತಹದಲ್ಲಿದ್ದಾರೆ. ಬೇಡಿಕೆಯಲ್ಲಿರುವ ಧ್ರುವ ಸರ್ಜಾ ಅವರನ್ನು ಹಾಕಿಕೊಂಡಾದರೂ ಯಶಸ್ಸು ಕಾಣಬೇಕೆನ್ನುವ ಹಂಬಲದಲ್ಲಿರುವ ಪ್ರೇಮ್ ‘ಕೆಡಿ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಬೇರೆ ಘೋಷಿಸಿದ್ದಾರೆ.

ಈಗ ‘ಕೆಡಿ’ ಎನ್ನುವ ಹೆಸರಿನ ಸಿನಿಮಾ ಮಾಡುತ್ತಿರುವ ಪ್ರೇಮ್ ಈ ಹಿಂದೆ ‘ಡಿಕೆ’ ಎನ್ನುವ ಸಿನಿಮಾ ಮಾಡಿ ಅದರಲ್ಲಿ ತಾವೇ ಹೀರೋ ಆಗಿದ್ದರು. ಅದರ ನಿರ್ಮಾಪಕರೂ ಕೂಡ ಅವರೇ ಆಗಿದ್ದರು. ಅದರಲ್ಲಿ ‘ಸೇಸಮ್ಮ’ ಎನ್ನುವ ಅಭಿರುಚಿಹೀನ ಹಾಡನ್ನು ಒಂದಷ್ಟು ದಿನ ಪಡ್ಡೆಗಳು ಮೆಲುಕು ಹಾಕುತ್ತಿದ್ದರು. ಸಿನಿಮಾ ಥಿಯೇಟರ್‌ಗಳಿಂದ ಎತ್ತಂಗಡಿಯಾದ ನಂತರ ಆ ಹಾಡು ಯಾರಿಗೂ ನೆನಪಿಲ್ಲ. ಆ ಸಿನಿಮಾವಂತೂ ನೆನಪಿಟ್ಟುಕೊಳ್ಳಲು ಕಾರಣಗಳೇ ಇಲ್ಲ. ಅಂಥ ಪ್ರೇಮ್ ಈಗ ಹೊಸ ಪ್ರಚಾರ ತಂತ್ರ ಹುಡುಕಿದ್ದಾರೆ. ಅದುವೇ ರಮೇಶ್ ಅರವಿಂದ್ ಕೈಗೆ ಲಾಂಗ್ ಕೊಟ್ಟಿರುವುದು.

ಈ ಸುದ್ದಿ ಓದಿದ್ದೀರಾ: ಪಾಪ, ನವರಸ ನಾಯಕ ಜಗ್ಗೇಶಿ ತಮ್ಮ ನವರಸಗಳನ್ನೆಲ್ಲ ಹುಲಿ ಉಗುರಿನ ಲಾಕೆಟ್‌ನಲ್ಲಿ ಇಟ್ಟಿದ್ದರಂತೆ!

ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಮೇಶ್ ಅರವಿಂದ್ ಕನ್ನಡ ಚಿತ್ರರಂಗದಲ್ಲಿ ಮಿಡ್ಲ್ ಕ್ಲಾಸ್ ಡಾರ್ಲಿಂಗ್ ಎಂದೇ ಹೆಸರಾದವರು. ಶಿವರಾಜ್‌ಕುಮಾರ್ ಸಮವಯಸ್ಕರಾದ ರಮೇಶ್ ಅರವಿಂದ್ ಅವರನ್ನು ಒಂದು ಕಾಲದಲ್ಲಿ ಶಿವರಾಜ್‌ಕುಮಾರ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಎಂದೇ ಭಾವಿಸಲಾಗಿತ್ತು. ಆದರೆ, ಆಕ್ಷನ್, ಗ್ರಾಮೀಣ ಕಥೆಗಳು, ಕಾದಂಬರಿ ಆಧಾರಿತ- ಹೀಗೆ ಎಲ್ಲ ರೀತಿಯ ಚಿತ್ರಗಳಲ್ಲಿ ನಟಿಸಿದ ಶಿವರಾಜ್‌ಕುಮಾರ್ ಎಲ್ಲ ವರ್ಗದ ಪ್ರೇಕ್ಷಕರನ್ನು ತಲುಪಿದರು. ಆದರೆ, ರಮೇಶ್ ಅರವಿಂದ್ ಒಂದೇ ರೀತಿಯ ಚಿತ್ರಗಳಲ್ಲಿ ನಟಿಸುವ ಮೂಲಕ ನಗರಕೇಂದ್ರಿತ ಪ್ರೇಕ್ಷಕರನ್ನು ಮೀರಿ ಹೋಗಲಾಗಲಿಲ್ಲ. ಇತ್ತೀಚೆಗೆ ‘ಶಿವಾಜಿ ಸುರತ್ಕಲ್‌’ನಂಥ ಸಸ್ಪೆನ್ಸ್ ಚಿತ್ರದಲ್ಲಿ ನಟಿಸಿದರೂ ಅವರು ಮಿಡ್ಲ್ ಕ್ಲಾಸ್ ಪ್ರೇಕ್ಷಕರ ಪಾಲಿಗೆ ಡಾರ್ಲಿಂಗ್ ಆಗಿಯೇ ಉಳಿದಿದ್ದಾರೆ. ಆದರೆ, ವಿದ್ಯಾವಂತರೂ ಬುದ್ಧಿವಂತರೂ ಆಗಿರುವ ರಮೇಶ್ ಅರವಿಂದ್, ತಮ್ಮ ಮಾತಿನ ಜಾಣ್ಮೆಯಿಂದ ಟಿವಿ ಶೋಗಳ ಮೂಲಕ ಸಿನಿಮಾಗಳಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಅಂಥ ರಮೇಶ್ ಅರವಿಂದ್ ಕೈಗೆ ಪ್ರೇಮ್ ಲಾಂಗ್ ಕೊಟ್ಟಿದ್ದಾರೆ. ಅದೇನು ಸಿನಿಮಾದಲ್ಲಿಯೂ ಅವರು ಲಾಂಗ್ ಹಿಡಿದು ಶತ್ರುಗಳ ರುಂಡ ಮುಂಡಗಳನ್ನು ಚೆಂಡಾಡುತ್ತಾರೋ ಇಲ್ಲಾ ಕೇವಲ ಪೋಸ್ಟರ್‌ನಲ್ಲಿ ಮಾತ್ರ ಜನರ ಕುತೂಹಲ ಕೆರಳಿಸಲು ಪ್ರೇಮ್ ಹಾಗೆ ಮಾಡಿದ್ದಾರೋ.. ಅಂತೂ ‘ಕೆಡಿ’ ಚಿತ್ರದ ಆ ಪೋಸ್ಟರ್ ಈಗ ಗಾಂಧಿನಗರದಲ್ಲಿ ಚರ್ಚೆಯ ವಸ್ತುವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಸ್ಲಿಮರನ್ನು ಉಗ್ರರು ಎಂಬಂತೆ ಬಿಂಬಿಸಲಾಗಿದೆ – ಸ್ನೇಹಿತರೂ ದೂರವಾಗುತ್ತಿದ್ದಾರೆ; ಬಾಲಿವುಡ್‌ ಗಾಯಕ ಅಲಿ ಬೇಸರ

ಪ್ರಸ್ತುತ ಜಗತ್ತಿನಲ್ಲಿ ಮುಸ್ಲಿಮನಾಗಿರುವುದು ಒಬ್ಬಂಟಿ ಭಾವ ಮೂಡಿಸಿತ್ತಿದೆ. ಮುಸ್ಲಿಮರನ್ನು ಉಗ್ರರೆಂದು ಬಿಂಬಿಸಲಾಗುತ್ತಿದೆ....

ಮಹಾರಾಜ್ | ಸಾಮಾಜಿಕ ಕ್ರಾಂತಿಯ ಕಥನವೂ, ಚಿತ್ರರಂಗದ ಕರ್ಮ ಸಿದ್ಧಾಂತದ ಗುರಾಣಿಯೂ

ಮಹಾರಾಜ್ ಸಿನಿಮಾ, "ಧರ್ಮವನ್ನು ಅಪವ್ಯಾಖ್ಯಾನ ಮಾಡಲಾಗಿದೆ. ಧರ್ಮಗ್ರಂಥಗಳಲ್ಲಿ ಇಲ್ಲದ ಅನಾಚಾರಗಳನ್ನೆಲ್ಲ ಜಾರಿಗೆ...

ತಂಗಲಾನ್ ಟ್ರೈಲರ್ ಬಿಡುಗಡೆ: ಆಗಸ್ಟ್‌ 15ರಿಂದ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದೆ ಕೋಲಾರದ ಕಥೆ ‘ತಂಗಲಾನ್’

ತಮಿಳು ಚಿತ್ರರಂಗದ ಅತ್ಯದ್ಭುತ ನಿರ್ದೇಶಕ ಪ ರಂಜಿತ್ ನಿರ್ದೇಶನದ ನಟ ವಿಕ್ರಮ್...

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಇಡಿ ಸಮನ್ಸ್

ಸುಕೇಶ್ ಚಂದ್ರಶೇಖರ್ ಅವರ ಸುಮಾರು 200 ಕೋಟಿ ರೂಪಾಯಿ ಅಕ್ರಮ ಹಣ...