ಸಿಎಂ ಸಿದ್ದರಾಮಯ್ಯ ಅವರದ್ದು ವೈಯಕ್ತಿಕ ಅಭಿಪ್ರಾಯ. ಸಿಎಂ ಆಗಿ ಯಾರು ಮುಂದುವರಿಯಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಒಂದು ವೇಳೆ ಹೈಕಮಾಂಡ್ ನನಗೆ ಹೇಳಿದರೆ ನಾನು ಕೂಡ ಮುಖ್ಯಮಂತ್ರಿ ಆಗಲು ಸಿದ್ಧ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
“ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಐದು ವರ್ಷ ಪೂರ್ಣವಾಗಿ ಸರ್ಕಾರ ಪೂರೈಸಲಿದ್ದು, ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವೆ” ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮೈಸೂರಿನಲ್ಲಿ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು.
“ನನ್ನ ಹೇಳಿಕೆ ಕೂಡ ವೈಯಕ್ತಿಕ ಅಭಿಪ್ರಾಯ ಮಾತ್ರ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಅಂದರೆ ನಾನೂ ಸಿದ್ಧ. ಯಾರು ಮುಂದುವರಿಯಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ. ಎಲ್ಲರಿಗೂ ಅವರವರ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ, ಇದರಲ್ಲಿ ತಪ್ಪಿಲ್ಲ” ಎಂದು ತಿಳಿಸಿದರು.
“ಅಧಿಕಾರ ಹಂಚಿಕೆ ಬಗ್ಗೆ ದೆಹಲಿಯಲ್ಲಿ ನಾಲ್ವರು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ. ಅವರನ್ನು ಹೊರತುಪಡಿಸಿ ಬೇರೆ ಯಾರೇ ಮಾತನಾಡಿದರೂ ಅದಕ್ಕೆ ಬೆಲೆ ಇಲ್ಲ” ಎಂದರು.