’ರಾಜ್ಯೋತ್ಸವ ಪ್ರಶಸ್ತಿ ನನಗೆ ಮೊದಲೇ ಬಂದಿತ್ತು ಎಂಬುದು ಲೇಖನ ಬರೆದ ಪುಣ್ಯಾತ್ಮನಿಗೆ ತಿಳಿದಿಲ್ಲ’ ಎಂದಿದ್ದಾರೆ ಸಾಣೇಹಳ್ಳಿ ಸ್ವಾಮೀಜಿ
“ಗಣಪತಿಯನ್ನು ಪೂಜಿಸುವುದು ನಮ್ಮ (ಶರಣ) ಸಂಸ್ಕೃತಿಯಲ್ಲ, ಅದಕ್ಕೆ ಬದಲಾಗಿ ವಾಸ್ತವಕ್ಕೆ ತಕ್ಕುದಾಗಿ ವಚನಗಳನ್ನು ಪಠಿಸಬೇಕು” ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ನೀಡಿದ ಹೇಳಿಕೆಯನ್ನು ವಿರೋಧಿಸುವ ಭರದಲ್ಲಿ ನಿಂದನಾತ್ಮಕ, ಆಧಾರರಹಿತ ಲೇಖನವನ್ನು ’ವಿಶ್ವವಾಣಿ’ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
“ಸ್ವಾಮೀಜಿಗಳಾದವರು ಇಂಥ ಉಪದ್ವ್ಯಾಪಿ ಮತ್ತು ಅನರ್ಥಕಾರಿ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಜನರ ನಂಬಿಕೆಗಳಿಗೆ ಧಕ್ಕೆ ತರುವ ಹುಡುಗಾಟಿಕೆ ಶೋಭೆ ತರುವುದಿಲ್ಲ. ಸಾಣೇಹಳ್ಳಿ ಸ್ವಾಮೀಜಿ ನಾಟಕ ಮಾಡಿಕೊಂಡು ಆರಾಮಿರಲಿ. ದೇವರ ತಂಟೆ ಬೇಡ” ಎಂದು ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟ ಬರೆದಿದ್ದರು. ಇದಕ್ಕೆ ಅನೇಕ ಜನರು ಪ್ರತಿಕ್ರಿಯಿಸಿ, “ರೇಪಿಸ್ಟ್ ಸ್ವಾಮೀಜಿಯೊಬ್ಬನ ಪಾದಪೂಜೆ ಮಾಡುವ ವ್ಯಕ್ತಿ, ಬಸವ ತತ್ವದಲ್ಲಿ ನಡೆಯುತ್ತಿರುವ ಸಾಣೇಹಳ್ಳಿ ಶ್ರೀಗಳಿಗೆ ಬುದ್ಧಿ ಹೇಳುವಷ್ಟು ದೊಡ್ಡವನಾದನಾ?” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಶ್ವೇಶ್ವರ ಭಟ್ಟ ಅವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ’ವಿಶ್ವವಾಣಿ’ಯಲ್ಲಿ ಇಂದು (ನವೆಂಬರ್ 4) ಸ್ವಾಮೀಜಿಯವರ ಕುರಿತು ನಿಂದನಾತ್ಮಕ ಲೇಖನವೊಂದನ್ನು ಪಬ್ಲಿಷ್ ಮಾಡಲಾಗಿದೆ. ಅದರಲ್ಲಿ ಸ್ವಾಮೀಜಿಯವರ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ.
“ಪ್ರಗತಿಪರ ಚಿಂತಕರ ಹಾಟ್ ಫೇವರೇಟ್ ನಿಜಗುಣಾನಂದರು ರಾಜ್ಯೋತ್ಸವ ಪ್ರಶಸ್ತಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಂತೆಯೇ ಎಚ್ಚೆತ್ತು ತಮಗೂ ಸಾಣೆ ಹಿಡಿದುಕೊಳ್ಳಲು ಮುಂದಾದಂತೆ ತೋರುತ್ತದೆ” ಎಂದೆಲ್ಲ ತುಚ್ಛೀಕರಿಸಿ, ಲಿಂಗಾಯತ ಧರ್ಮದ ಸಾಣೇಹಳ್ಳಿ ಸ್ವಾಮೀಜಿಯವರನ್ನು ಅವಹೇಳನ ಮಾಡಲಾಗಿದೆ.
ಇಂತಹ ಸಲ್ಲದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಶ್ರೀಗಳು, “ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಅನ್ನೋ ಮಾತನ್ನು ಹೇಳಿದ್ದೆ. ನಮ್ಮ ಸಂಸ್ಕೃತಿ ಎಂದರೆ ಲಿಂಗಾಯತ ಸಂಸ್ಕೃತಿ, ಶರಣ ಸಂಸ್ಕೃತಿ. ಆದರೆ ಕೆಲವು ಮಹಾನುಭಾವರು ಒಂದು ದೊಡ್ಡ ಲೇಖನವನ್ನೇ ಬರೆದು ನಮ್ಮ ಬಗ್ಗೆ ಇಲ್ಲದ ಪದಗಳನ್ನು ಬಳಕೆ ಮಾಡಿದ್ದಾರೆ. ನಿಜಗುಣಾನಂದ ಸ್ವಾಮೀಜಿಯವರು ಇಂತಹ ಮಾತಾಡಿ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದು, ಮುಂದೆ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಳ್ಳಲು ಸಾಣೇಹಳ್ಳಿ ಸ್ವಾಮೀಜಿ ಹೀಗೆ ಮಾಡಿದ್ದಾರೆಂದು ಬರೆದಿದ್ದಾರೆ. ಪಾಪ, ಆ ಲೇಖನ ಬರೆದಿರುವ ಪುಣ್ಯಾತ್ಮನಿಗೆ ರಾಜ್ಯೋತ್ಸವ ಪ್ರಶಸ್ತಿ ಮೊದಲು ಬಂದಿದ್ದು ಪಂಡಿತಾರಾಧ್ಯ ಸ್ವಾಮೀಜಿಯವರಿಗೆ ಎಂಬುದು ಗೊತ್ತಿಲ್ಲ ಅಂತ ಕಾಣುತ್ತೆ” ಎಂದು ಕುಟುಕಿದ್ದಾರೆ. (ನಾಟಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಸಾಣೇಹಳ್ಳಿ ಸ್ವಾಮೀಜಿಯವರಿಗೆ 2004ರಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ)
“ಪ್ರಚಾರಕ್ಕೆ ಬರಲೆಂದು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಬರೆದಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನಾವು ಇಂದಿಲ್ಲ, ವಿದ್ಯಾರ್ಥಿ ದೆಸೆಯಿಂದಲೂ ಕೊಡುತ್ತಾ ಬಂದಿದ್ದೇವೆ. ಸ್ವಾಮೀಜಿಗಳಾದ ಮೇಲೂ ಕೊಟ್ಟಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ. (ಈ ವರ್ಷದ ಗಣೇಶ ಉತ್ಸವದ ಸಂದರ್ಭದಲ್ಲಿಯೇ ಸ್ವಾಮೀಜಿಯವರು ಈ ಹೇಳಿಕೆಯನ್ನು ನೀಡಿದ್ದರು- ವಿಡಿಯೊ ನೋಡಲು ’ಇಲ್ಲಿ ಕ್ಲಿಕ್’ ಮಾಡಿರಿ)
“ನಮ್ಮನ್ನು ಬಲ್ಲವರಿಗೆಲ್ಲರಿಗೂ ಗೊತ್ತಿದೆ. ನಾವು ಯಾವುದೇ ಗಣಪತಿ ಉತ್ಸವಗಳಿಗೆ ಹೋಗಲ್ಲ. ಯಾವುದೇ ಗಣಪತಿ ಪೂಜೆಯನ್ನು ನಾವು ಮಾಡುವುದಿಲ್ಲ. ಕಾರಣವೇನು? ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂಬುದು ಶರಣರ ಸಂದೇಶ. ಆ ಸಂದೇಶಕ್ಕೆ ತಕ್ಕನಾಗಿ ನಮ್ಮ ಬದುಕನ್ನು, ನಮ್ಮ ಸುತ್ತ ಇರುವವರ ಬದುಕನ್ನು ಕಟ್ಟಬೇಕು ಎನ್ನುವುದು ನಮ್ಮ ಕಲ್ಪನೆ ಮತ್ತು ಕನಸು. ಆದರೆ ನಮ್ಮನ್ನು ಅರ್ಥಮಾಡಿಕೊಳ್ಳದೆ ಇರುವ ಅವಿವೇಕಿಗಳು ಏನೋ ಬರೆದರೆಂದು ನಾವು ಸಮಾಧಾನ ಕಳೆದುಕೊಂಡುಬಿಟ್ಟರೆ ಗತಿಯೇನು? ಅಂಥವರಿಗೆ ಸರಿಯಾಗಿ ಉತ್ತರ ಕೊಡುವ ವಿವೇಕ ಬೇಕು. ಗಣಪತಿಯನ್ನು ವಿರೋಧ ಮಾಡಿದ ಸಾಕಷ್ಟು ನಿದರ್ಶನಗಳು ಶರಣರ ವಚನಗಳಲ್ಲಿ ಕಾಣಬಹುದು” ಎಂದು ತಿಳಿಸಿದ್ದಾರೆ.
“ಹೀಗೆ ಬರೆದ ಮಹಾನುಭಾವರಿಗೆ ಜನರು ಆನ್‌ಲೈನ್‌ನಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದನ್ನು ನಾವು ಗಮನಿಸಿದ್ದೇವೆ. ಇದನ್ನೆಲ್ಲ ಏಕೆ ಹೇಳುತ್ತಿದ್ದೇವೆ ಎಂದರೆ- ನಮ್ಮನ್ನೆಲ್ಲ ಇನ್ನೂ ಕಂದಾಚಾರಗಳಲ್ಲಿ ಮುಳುಗಿಸುವಂತಹ ಪುರೋಹಿತಶಾಹಿ ಪರಂಪರೆ ಈ ನಾಡಿನಲ್ಲಿ ಬಹುದೊಡ್ಡದಾಗಿದೆ. ಒಂದು ದೇವಸ್ಥಾನ ಕಟ್ಟಿದ ತಕ್ಷಣವೇ ಅಲ್ಲಿ ಜನ ಸೇರುತ್ತಾರೆ, ಪುಣ್ಯ ಸಿಗುತ್ತದೆ ಎಂದು ಭಾವಿಸುತ್ತಾರೆ. ನಿಜವಾಗಿಯೂ ಯಾರಿಗಾದರೂ ಆ ಪುಣ್ಯ ಲಭ್ಯವಾಗಿದೆಯಾ? ಯಾವ ದೇವರು ಕೂಡ ಇಂದಿನವರೆಗೆ ವರವನ್ನೂ ಕೊಟ್ಟಿಲ್ಲ, ಶಾಪವನ್ನೂ ಕೊಟ್ಟಿಲ್ಲ. ಈ ಸತ್ಯದ ಅರಿವು ಮೌಢ್ಯದ ಕೂಪದಲ್ಲಿ ಮುಳುಗಿದಂಥವರಿಗೆ ಅರ್ಥವಾಗುವುದು ತುಂಬಾ ಕಷ್ಟ. ಇನ್ನೊಬ್ಬರ ತಲೆ ಬೋಳಿಸುವ ಕೆಲಸವನ್ನು ಮಾಡುತ್ತಿರುತ್ತಾರೆಯೇ ಹೊರತಾಗಿ ಬೇರೆಯವರ ವಿಚಾರವನ್ನು ಅರ್ಥ ಮಾಡಿಕೊಂಡು ಒಪ್ಪಿಕೊಳ್ಳುವಂತಹ ಮನಸ್ಥಿತಿ ಅವರಿಗೆ ಇರುವುದಿಲ್ಲ. ಹಾಗಾಗಿಯೇ ಏನೋನೋ ಹೇಳುವಂತಹದ್ದು, ಬರೆಯುವಂತಹದ್ದು ಸಹಜ. ಅವರೆಲ್ಲರಿಗೂ ಕೂಡ ಶರಣರ ವಚನ ಸಾಹಿತ್ಯದ ಪರಿಚಯವಾಗಿದ್ದರೆ ವೈಚಾರಿಕ ಪ್ರಜ್ಞೆ ಇದ್ದಿದ್ದರೆ, ವಿವೇಕ ಉದಯವಾಗಿದ್ದರೆ ಆ ರೀತಿಯ ಪದಗಳನ್ನು ಬಳಕೆ ಮಾಡಲು ಸಾಧ್ಯವಿರಲಿಲ್ಲ” ಎಂದು ಹೇಳಿದ್ದಾರೆ.