ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಮ್ಸ್ ನಿರ್ದೇಶಕ ಬಿ ಎಸ್ ಬೊಮ್ಮನಹಳ್ಳಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಗದಗ ಜಿಲ್ಲಾ ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ಸುರೇಶ ವೈ ಚಲವಾದಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು “ಜಿಮ್ಸ್‌ನ 450 ಹಾಸಿಗೆಯುಳ್ಳ ನೂತನ ಆಸ್ಪತ್ರೆಯ ಉದ್ಘಾಟನೆಗೆ ನವೆಂಬರ್ 3ರಂದು ಆಗಮಿಸಿದ ಮುಖ್ಯಮಂತ್ರಿಯವರನ್ನು ಬರಮಾಡಿಕೊಳ್ಳಲು ದಲಿತ ಸಮುದಾಯದ ಸಿಬ್ಬಂದಿಗಳು ಡಾ ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರ ಹಿಡಿದು ಸ್ವಾಗತಿಸುತ್ತಿದ್ದ ವೇಳೆ ಜಿಮ್ಸ್ ನಿರ್ದೇಶಕ ಬಸವರಾಜ ಎಸ್ ಬೊಮ್ಮನಳ್ಳಿ ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿಗಳಿಗೆ ಯಾವುದೇ ಕಾರಣಕ್ಕೂ ಅಂಬೇಡ್ಕರ್ ಭಾವಚಿತ್ರ ನೀಡಕೂಡದು ನಮ್ಮ ಆಸ್ಪತ್ರೆಯ ಉದ್ಘಾಟನೆಯ ನಂತರ ನೀವು ಯಾವುದಾದರೂ ಭಾವಚಿತ್ರ ನೀಡಿ ಎಂದು ದಲಿತ ಸಿಬ್ಬಂದಿಗಳಿಗೆ ತಡೆಹಿಡಿದು ಪೊಲೀಸ್ ಸಿಬ್ಬಂದಿಗಳಿಂದ ಆಸ್ಪತ್ರೆಯ ದಲಿತ ಸಿಬ್ಬಂದಿಗಳನ್ನು ಹೊರಹಾಕಿಸಿರುವುದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಷ ವ್ಯಕ್ತಪಡಿಸಿದರು.
“ಬೊಮ್ಮನಳ್ಳಿಯವರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಮೀಸಲಾತಿಯಿಂದಲೇ ಉನ್ನತ ಮಟ್ಟದ ಅಧಿಕಾರ ವಹಿಸಿಕೊಂಡಿರುವುದನ್ನು ಪ್ರಜ್ಞೆಯಲ್ಲಿಟ್ಟುಕೊಂಡು ನೌಕರಿ ಮಾಡಬೇಕು. ಇಂತಹ ಸಂಕುಚಿತ ಮನೋಭಾವನೆಯನ್ನು ಹೊಂದಿರುವ ಅಧಿಕಾರಿಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ ಅವರು ಸೇವೆಯಿಂದ ಅಮಾನತುಗೊಳಿಸಿ ದಲಿತರ ಹಿತ ಕಾಪಾಡುವಲ್ಲಿ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ರಾಜ್ಯದ ಮುಖ್ಯಮಂತ್ರಿಯವರು ಬರುವ ಸಂದರ್ಭದಲ್ಲಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ನೀಡುತ್ತಿರುವ ಸಿಬ್ಬಂದಿಗಳನ್ನು ಆಚೆ ಹಾಕಿದ್ದು, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ದಲಿತ ಸಿಬ್ಬಂದಿಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ಇಂತಹ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿರಲು ಯೋಗ್ಯರಲ್ಲ. ಅಂತಹವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಬೇಕು. ಇಂತಹ ಕೀಳು ಮಟ್ಟದ ಅಧಿಕಾರಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅರ್ಹರಲ್ಲ. ಇಂತಹವರನ್ನು ಶಾಶ್ವತವಾಗಿ ಸೇವಾ ನಿವೃತ್ತಿಯಲ್ಲಿಡಬೇಕು” ಎಂದು ಖಾರವಾಗಿ ಮಾತನಾಡಿದರು.
ಬಹಿರಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿಯೇ ಈ ರೀತಿ ಜಾತಿವಾದಿತನ ಪ್ರದರ್ಶನ ಮಾಡುವ ಇವರು ಜಿಮ್ಸ್‌ನಲ್ಲಿ ಕೆಲಸ ಮಾಡುವ ದಲಿತ ಸಿಬ್ಬಂದಿಗಳಿಗೆ ಸಾಕಷ್ಟು ನೂವುಗಳನ್ನು ಕೊಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇಂತಹ ಜಾತಿವಾದಿ ನಿರ್ದೇಶಕನನ್ನು ಜಿಲ್ಲಾಡಳಿತ ಅಮಾನತುಗೊಳಿಸದೇ ಹೋದಲ್ಲಿ ದಲಿತ ಸಮುದಾಯ ಜಿಲ್ಲಾದ್ಯಂತ ತೀವ್ರ ಪ್ರತಿಭಟನೆ ಮಾಡಲು ಸಿದ್ಧವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಪ್ರಜ್ಞಾವಂತಿಕೆ ಬೆಳೆದಂತೆ ಪರಂಪರೆಯ ಮೇಲಿನ ಪ್ರೀತಿಯೂ ಬೆಳೆಯಬೇಕು
ಈ ಸಂದರ್ಭದಲ್ಲಿ ಜಿಲ್ಲಾ ದಲಿತ ಯುವ ಮುಖಂಡ ರಮೇಶ ಕಡೇಮನಿ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಪೂಜಾರ, ಪ್ರಧಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ, ಶ್ರೀಕಾಂತ ಪೂಜಾರ, ಅಪ್ಪು ಹಿತ್ತಲಮನಿ, ಶಿವಾನಂದ ಅಳವಂಡಿ, ಪಕ್ಕೀರೇಶ ಹಾದಿಮನಿ, ರಾಜು ರಂಗಣ್ಣವರ, ಸಂಜೀವ ದೊಡ್ಡಮನಿ, ರಮೇಶ ನಂದಿ, ಅಭಿಷೇಕ ಕೊಪ್ಪದ ಸೇರಿದಂತೆ ಇತರರು ಇದ್ದರು.