ಮುದಗಲ್‌ನ ಹಮಾಲಿ ಕಾರ್ಮಿಕರ ಕೂಲಿ ದರ ಸಮಸ್ಯೆಯನ್ನು ಪರಿಹರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಲಿಂಗಸುಗೂರು ಸಹಾಯಕ ಆಯುಕ್ತ (ಎಸಿ) ಭರವಸೆ ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಸಿಐಟಿಯು ಮುಖಂಡರೊಂದಿಗೆ ಅವರು ಸಭೆ ನಡೆಸಿದ್ದಾರೆ. ಸಭೆಗೆ ಹಾಜರಾಗುವಂತೆ ಕೂಲಿ ದರ ಹೆಚ್ಚಿಸಲು ನಿರಾಕರಿಸಿದ್ದ ಮುದಗಲ್‌ನ ಟ್ರೇಡರ್ಸ್ ಮಾಲೀಕರಿಗೆ ಹಾಗೂ ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ಅವರಿಗೆ ನೋಟೀಸ್ ನೀಡಿದ್ದರೂ, ಮಾಲೀಕರು ಸಭೆಗೆ ಹಾಜರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ, ಸ್ಥಳೀಯ ಪೊಲೀಸ್ ಠಾಣೆಪಿ ಎಸ್ಐ, ಕಾರ್ಮಿಕ ನಿರೀಕ್ಷಕರು, ತಹಶೀಲ್ದಾರರು ಕರೆದಿದ್ದ ಸಂಧಾನ ಸಭೆಗೂ ಅವರಾರು ಬಂದಿರಲಿಲ್ಲ. ಎಲ್ಲ ಟ್ರೇಡರ್ಸ್ ಮಾಲೀಕರನ್ನು ಮದಿನಾ ಟ್ರೇಡರ್ಸ್ ಮಾಲೀಕ ಟಿಪ್ಪು ಸಾಬ್ ನಿಯಂತ್ರಿಸುತ್ತಿದ್ದಾರೆ. ಆತನ ಅಣತಿಯಂತೆ ಉಳಿದವರು ವರ್ತಿಸುತ್ತಿದ್ದಾರೆ. ಅವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಟ್ರೇಡರ್ಸ್‌ಗಳ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಸಿಐಟಿಯು ಮುಖಂಡರು ಆಗ್ರಹಿಸಿದರು.
“ಅಂಗಡಿ ಮಾಲೀಕರೊಂದಿಗೆ ಶಾಮೀಲಾಗಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳದ ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಶಂಶಾಲಮ್, “ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಹಮಾಲಿ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ತಿಪ್ಪಯ್ಯ, ಜಿಲ್ಲಾಧ್ಯಕ್ಷ ಯಂಕಪ್ಪ ಕೆಂಗಲ್, ಕಾರ್ಯದರ್ಶಿ ಮರಿಸ್ವಾಮಿ, ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ್, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಸಿಐಟಿಯು ಮುಖಂಡರಾದ ಹನೀಫ್, ಫಕ್ರುದ್ದೀನ್, ಮಲ್ಲೇಶ್ ಕೋಠಾ, ನಿಂಗಪ್ಪ, ಬಾಬಾಜಾನಿ, ವಿಶ್ವ ಅಂಗಡಿ, ಅಂಜಪ್ಪ, ನಾಗರಾಜ್, ಕಾಶಿಪತಿ, ಬಾಲಾಜಿ ಹಟ್ಟಿ, ತೋಟೇಶ್ವರ್, ಆಂಜನೇಯ, ಸದ್ದಾಮ್ ಹುಸೇನ್, ಮಹಿಬು, ಮಹಮ್ಮದ್ ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.