ಮಹಿಳೆಯ ಘನತೆಗೆ ಧಕ್ಕೆ ಬರುವಂತೆ ಪೋಸ್ಟ್ ಹಾಕಿ, ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ನಿಂದಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿಯನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೂರುದಾರರಾದ ಕನ್ನಡಪರ ಹೋರಾಟಗಾರ, ದಲಿತ ಮುಖಂಡ ಹರೀಶ್ ಭೈರಪ್ಪ ಅವರು ಪ್ರತಿಕ್ರಿಯಿಸಿದ್ದು, “ಸತ್ಯಕ್ಕೆ ಜಯ ಸಿಕ್ಕಿದೆ. ಅಪ್ರಾಪ್ತ ಮಕ್ಕಳು ಹಾಗೂ ಮಹಿಳಾ ಘನತೆಗೆ ಧಕ್ಕೆ ತರುವಂತ ಬರಹ ಬರೆದ ಪ್ರಕರಣದಲ್ಲಿ ಇಂದು ಪುನೀತ್ ಕೆರೆಹಳ್ಳಿಯನ್ನು 14 ದಿನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಕುಟುಂಬವನ್ನು ಟಾರ್ಗೆಟ್ ಮಾಡುವವರಿಗೆ ಒಂದು ಪಾಠ. ಇನ್ನು ಮುಂದೆಯೂ ಈ ಪುನೀತ್ ಕೆರೆಹಳ್ಳಿ ನನ್ನ ವಿರುದ್ಧ ಅಸಹ್ಯಕರ ಒಂದು ವಾಕ್ಯ ಬರೆದರೂ ಮುಲಾಜಿಲ್ಲದೆ ಎಫ್ಐಆರ್ ದಾಖಲಿಸುತ್ತೇನೆ. ಕಾನೂನಿನ ಅಡಿಯಲ್ಲೇ ಬುದ್ಧಿ ಕಲಿಸುತ್ತೇನೆ” ಎಂದು ಎಚ್ಚರಿಸಿದ್ದಾರೆ.
’ತನಗೆ ಯಾವುದೇ ಜಾಮೀನು ಬೇಡ’ ಎಂದು ಇತ್ತೀಚೆಗೆ ಪುನೀತ್ ಕೆರೆಹಳ್ಳಿ ಹೇಳಿರುವುದನ್ನು ತಮ್ಮ ಪೋಸ್ಟ್‌ನಲ್ಲಿ ನಮೂದಿಸಿರುವ ಅವರು, “ಈತನಿಗೆ ನೈತಿಕತೆ ಇದ್ದರೆ ಮಾತನಾಡಿದ ಹಾಗೆ ಯಾವುದೇ ಕಾರಣಕ್ಕೂ ವಕಾಲತ್ತು ಹಾಕಬಾರದು, ಕಾದು ನೋಡೋಣ” ಎಂದು ತಿಳಿಸಿದ್ದಾರೆ.
ಈಗಾಗಲೇ ಹಲವು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ 2013ರಲ್ಲಿ ವೇಶ್ಯಾವಾಟಿಕೆ ಪ್ರಕರಣವೊಂದರಲ್ಲಿ ಸಿಲುಕಿ ಬಿದ್ದಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಆ ಪ್ರಕರಣ ಖುಲಾಸೆಯಾಗಿರುವುದು ಇತ್ತೀಚೆಗೆ ಬಯಲಾಗಿತ್ತು. ಗೋ ರಕ್ಷಣೆ ಹೆಸರಲ್ಲಿ ಇದ್ರೀಸ್ ಪಾಷಾ ಎಂಬ ವ್ಯಕ್ತಿಯನ್ನು ಕೊಂದ ಆರೋಪವೂ ಪುನೀತ್ ಕೆರೆಹಳ್ಳಿ ಅಂಡ್ ಗ್ಯಾಂಗ್ ಮೇಲೆ ಇದೆ. ಜೊತೆಗೆ ವಿಧಾನಸೌಧಕ್ಕೆ ಕಲ್ಲು ಹೊಡೆಯುವ ಮತ್ತು ಬಸ್ಸಿಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಇತ್ತೀಚೆಗೆ ಹಾಕಿದ್ದರ ಕುರಿತು ಪ್ರಕರಣ ದಾಖಲಾಗಿತ್ತು.
ಇಂತಹ ಗಂಭೀರ ಪ್ರಕರಣಗಳ ಹಿನ್ನೆಲೆ ಇರುವ ಪುನೀತ್ ಕೆರೆಹಳ್ಳಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲವಾಗಿ ಬರೆಯುತ್ತಾ ಕನ್ನಡಪರ ಹೋರಾಟಗಾರ, ದಲಿತ ಮುಖಂಡ ಹರೀಶ್ ಭೈರಪ್ಪ ಅವರ ಕುರಿತು ಕೀಳುಮಟ್ಟದ ಭಾಷೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿದ್ದರು. ಈ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಗಾಂಧಿವಾದಿಯಂತೆ ಪ್ರತಿಭಟನೆಯನ್ನೂ ನಡೆಸಿ, ಬಿಜೆಪಿ ನಾಯಕರ ಬೆಂಬಲ ಗಿಟ್ಟಿಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಕೊನೆಗೂ ಬಂಧನವಾಗಿದೆ.
ಏನಿದು ಪುನೀತ್ ಕೆರೆಹಳ್ಳಿ ಪ್ರಕರಣ?: ಪೂರ್ವ ವಿವರಗಳಿಗೆ ’ಇಲ್ಲಿ ಕ್ಲಿಕ್’ ಮಾಡಿ