ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ಸೇರಿದಂತೆ ಜಿಲ್ಲೆಯ ಎಲ್ಲ ಹೆಚ್ಚುವರಿ ಭೂ ಪ್ರಕರಣಗಳ ಮರು ವಿಚಾರಣೆಗಾಗಿ ಆಗ್ರಹಿಸಿ ನವೆಂಬರ್ 6 ರಂದು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲು ಸಿಪಿಐಎಂಎಲ್ ರೆಡ್‌ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘದಿಂದ ಕರೆ ನೀಡಲಾಗಿದೆ ಎಂದು ಪಕ್ಷದ ಪಾಲಿಟ್ ಬ್ಯುರೋ ಸದಸ್ಯ ಆರ್ ಮಾನಸಯ್ಯ ಹೇಳಿದರು.
ರಾಯಚೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಳಗೇರಾ ನಾಡಗೌಡರು ಸೇರಿ ಜಿಲ್ಲೆಯ ಎಲ್ಲ ಭೂಮಾಲೀಕರು ಇವತ್ತಿಗೂ ಸಾಕಷ್ಟು ಭೂಮಿ ಹೊಂದಿದ್ದಾರೆ. ಎಸ್‌ಸಿ-ಎಸ್‌ಟಿ, ಸೇರಿದಂತೆ ಎಲ್ಲ ಭೂರಹಿತರಿಗೆ ಭೂಮಿ ಹಂಚಲಾಗಿದೆ ಎಂಬ ಸರ್ಕಾರಿ ಪ್ರಕಟಣೆಯೂ ಸುಳ್ಳುಗಳಿಂದ ಕೂಡಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ತನಿಖೆಯಾಗಬೇಕಿದೆ’ ಎಂದರು.
“ವಿಚಾರಣೆ ಹಂತದಲ್ಲಿರುವ ಜವಳಗೇರಾ ಸಿದ್ದಲಿಂಗಮ್ಮ ವೆಂಕಟರಾವ್ ನಾಡಗೌಡ ಇವರ ಪ್ರಕರಣದಲ್ಲಿ ತೋರಿಸಲಾದ 1,064 ಎಕರೆ ಭೂಮಿಯ ವರ್ಗಾವಣೆ, ಮಾರಾಟ ಹಾಗೂ ವಹಿವಾಟಿನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಜವಳಗೇರಾ ನಾಡಗೌಡರ 17 ಜನ ಘೋಷಣಾ ಪತ್ರ ಪ್ರಕರಣಗಳು ಸೇರಿದಂತೆ ಜಿಲ್ಲೆಯ ಎಲ್ಲ ಭೂಮಾಲೀಕರ ಹೆಚ್ಚುವರಿ ಪ್ರಕರಣಗಳನ್ನು ಸೆಕ್ಷನ್ 122(ಎ)ರ ಅಡಿ ಮರು ವಿಚಾರಣೆ ಆರಂಭಿಸಬೇಕು” ಎಂದು ಆಗ್ರಹಿಸಿದರು.
“ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸೆಕನ್ 79/ಎ ಹಾಗೂ 3 79/ಬಿಗೆ 2014ರ ನಂತರ ಮಾಡಲಾದ ಎಲ್ಲ ತಿದ್ದುಪಡಿಗಳನ್ನು ರದ್ದುಪಡಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲೆಮಾರಿ ಸಮುದಾಯಗಳ ಭೂರಹಿತರ ಸಮೀಕ್ಷೆಗೆ ಮುಂದಾಗಬೇಕು. ಪ್ರತಿವರ್ಷ ಜೂನ್ ತಿಂಗಳಲ್ಲಿ ಹಂಚಿಕೆಗೆ ಲಭ್ಯ ಇರುವ ಭೂಮಿಯ ವಿವರವನ್ನು ತಹಶೀಲ್ದಾರರು ಕಡ್ಡಾಯವಾಗಿ ಪ್ರಕಟಿಸಬೇಕು. ಧಾರ್ಮಿಕ ಸಂಘ ಹಾಗೂ ಸಂಸ್ಥೆಗಳು ಹೊಂದಿದ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಂಡು ಭೂರಹಿತ ಬಡವರಿಗೆ ಹಂಚಬೇಕೆಂದು ಒತ್ತಾಯಿಸಿ ನವೆಂಬರ್ 6 ರಂದು ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಲ್‌ಇಡಿ ಬೀದಿ ದೀಪ ಅಳವಡಿಕೆಗೆ ಕ್ರಿಯಾ ಯೋಜನೆ ರೂಪಿಸಿ : ಡಿಸಿ ಚಂದ್ರಶೇಖರ ನಾಯಕ
ಸಿಪಿಐಎಂಎಲ್ ರೆಡ್ ಸ್ಟಾರ್ ಜಿಲ್ಲಾ ಕಾರ್ಯದರ್ಶಿ ಎಂ ಡಿ ಅಮೀರ್ ಅಲಿ, ರಾಜ್ಯ ಸಮಿತಿ ಸದಸ್ಯ ಎಂ ಗಂಗಾಧರ್, ಕೆಆರ್‌ಎಸ್ ಜಿಲ್ಲಾ ಅಧ್ಯಕ್ಷ ಮಲ್ಲಯ್ಯ ಮಟ್ಟಿಮನಿ, ತಾಲೂಕು ಅಧ್ಯಕ್ಷ ಅಂಬಮ್ಮ ಬಸಾಪೂರ, ಸದಸ್ಯರುಗಳಾದ ಮಾಬುಸಾಬ ಬೆಳ್ಳಟ್ಟಿ, ಹನುಮಂತಪ್ಪ ಗೋಡ್ಯಾಳ, ಅಜೀಜ್ ಜಾಗೀರದಾರ, ಹೆಚ್ ಆರ್ ಹೊಸಮನಿ, ಎಂ ನಿಸರ್ಗ, ರಾಜು ಸೇರಿದಂತೆ ಪಕ್ಷದ ಕಾರ್ಯಕರ್ತರು, ಭೂಹೀನ ರೈತರು ಇದ್ದರು.