ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಪಡೆದಿವೆ. ಸ್ವಿಸ್ ಗ್ರೂಪ್ ಎಕ್ಯೂಏರ್ ಅಂಕಿಅಂಶಗಳ ಪ್ರಕಾರ ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದ ರಾಜಧಾನಿ ದೆಹಲಿಯು ಮೊದಲ ಸ್ಥಾನದಲ್ಲಿದೆ.
ಹಾಗೆಯೇ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಮೊದಲ 10ರಲ್ಲಿ ಸ್ಥಾನ ಪಡೆದಿವೆ. ಉಳಿದ ಎರಡು ನಗರಗಳು ಕೋಲ್ಕತ್ತಾ ಮತ್ತು ಮುಂಬೈ.
483 ಎಕ್ಯೂಐನೊಂದಿಗೆ(ವಾಯು ಗುಣಮಟ್ಟ ಸೂಚ್ಯಂಕ) ಪಟ್ಟಿಯಲ್ಲಿ ನವದೆಹಲಿ ಮತ್ತೆ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನದ ಲಾಹೋರ್ 371 ಎಕ್ಯೂಐ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಕೋಲ್ಕತ್ತಾ ಮತ್ತು ಮುಂಬೈ ಕೂಡ ವಾಯುಮಾಲಿನ್ಯದಿಂದ ಹೆಚ್ಚು ಹಾನಿಗೊಳಗಾದ 5 ನಗರಗಳಲ್ಲಿ ಕ್ರಮವಾಗಿ 206 ಮತ್ತು 162 ಎಕ್ಯೂಐನೊಂದಿಗೆ ಮೂರು ಮತ್ತು ಆರನೇ ಸ್ಥಾನದಲ್ಲಿವೆ.
ಇನ್ನುಳಿದ ಮೊದಲ 10ರ ಪಟ್ಟಿಯಲ್ಲಿ ಚೀನಾದ ಮೂರು, ಪಾಕಿಸ್ತಾನದ ಎರಡು, ಬಾಂಗ್ಲಾದೇಶದ ಒಂದು ಹಾಗೂ ಕುವೈತ್‌ನ ಒಂದು ನಗರಗಳು ಪಟ್ಟಿಯಲ್ಲಿವೆ.
ಈ ಸುದ್ದಿ ಓದಿದ್ದೀರಾ? ದೆಹಲಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ: ನ.10ರವರೆಗೆ ಪ್ರಾಥಮಿಕ ಶಾಲೆ ಮುಚ್ಚಲು ಸರ್ಕಾರ ಆದೇಶ
ತಜ್ಞರು ಮತ್ತು ವೈದ್ಯರ ಪ್ರಕಾರ, ಯಾವುದೇ ಆರೋಗ್ಯವಂತ ವ್ಯಕ್ತಿಗೆ ಶಿಫಾರಸು ಮಾಡಲಾದ ಎಕ್ಯೂಐ ಮಟ್ಟ 50 ಕ್ಕಿಂತ ಕಡಿಮೆ ಇರಬೇಕು.
ಕಡಿಮೆ ತಾಪಮಾನದ ಸಂಯೋಜನೆ, ಗಾಳಿಯ ಕೊರತೆ ಮತ್ತು ನೆರೆಯ ಪ್ರದೇಶಗಳಲ್ಲಿ ಕೃಷಿ ತ್ಯಾಜ್ಯ ಸುಡುವುದು ವಾಯು ಮಾಲಿನ್ಯದ ಹೆಚ್ಚಳಕ್ಕೆ ಕಾರಣವಾಗಿದೆ.
ಕೆಲವು ಕಡೆಗಳಲ್ಲಿ ಎಕ್ಯೂಐ 550 ಕ್ಕಿಂತ ಹೆಚ್ಚಾದ ಕಾರಣ ನವದೆಹಲಿಯ 2 ಕೋಟಿ ನಿವಾಸಿಗಳಲ್ಲಿ ಅನೇಕರು ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಗಂಟಲಿನ ತುರಿಕೆ ಅನುಭವಿಸುತ್ತಿದ್ದಾರೆ.