ಹುಬ್ಬಳ್ಳಿ ಭಾಗದಲ್ಲಿ ಬಿಜೆಪಿಯ ತಂಡದಿಂದ ಇಂದು ಬರ ಅಧ್ಯಯನ ನಡೆಸಲಾಗಿದ್ದು, ಮಾಜಿ ಸಚಿವ ಗೋವಿಂದ ಕಾರಜೋಳ ಇದರ ನೇತೃತ್ವ ವಹಿಸಿದ್ದರು.
ಬಿಜೆಪಿ ಬರ ಅಧ್ಯಯನ ತಂಡ ರಾಜ್ಯದ ವಿವಿಧ ಕಡೆ ಬೆಳೆ ನಷ್ಟ ಸಮೀಕ್ಷೆ ನಡೆಸುತ್ತಿದೆ. ಇದರ ಭಾಗವಾಗಿ ಭಾನುವಾರ ಮಾಜಿ ಸಚಿವ ಗೋವಿಂದ ಕಾರಜೋಳ ನೇತೃತ್ವದ ತಂಡ ಹುಬ್ಬಳ್ಳಿ ತಾಲೂಕಿನ ಛಬ್ಬಿ, ಅಂಚಟಗೇರಿ ಗ್ರಾಮಕ್ಕೆ ತೆರಳಿ ರೈತರ ಅಹವಾಲು ಆಲಿಸಿದ ಬಳಿಕ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿತು.
ರಾಜ್ಯ ಬಿಜೆಪಿ ವತಿಯಿಂದ ಬರ ಪರಿಸ್ಥಿತಿಯ ಅಧ್ಯಯನ ನಡೆಯುತ್ತಿದ್ದು, ಅನೇಕ ಕಡೆಗಳಲ್ಲಿ ಸರ್ಕಾರ ಯಾವುದೇ ಪರಿಹಾರ ಕಾರ್ಯ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ. ಈ ದಿನ ಹುಬ್ಬಳ್ಳಿ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಅಧ್ಯಯನ ಮಾಡಲಾಯಿತು.@nalinkateel@BJP4Karnataka @siddaramaiah pic.twitter.com/3pafbI3e4y
— Govind M Karjol (@GovindKarjol) November 5, 2023
ಬರ ಅಧ್ಯಯನ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಗೋವಿಂದ ಕಾರಜೋಳ, ‘ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣ ಬರದ ಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ 2.20 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಸರ್ಕಾರ ರೈತರ ಜೊತೆ ನಿಲ್ಲಬೇಕಿತ್ತು. ಗುಳೆ ಹೋಗದ ಹಾಗೆ, ದನ-ಕರುಗಳನ್ನು ಮಾರಾಟ ಮಾಡದ ಹಾಗೆ ತಡೆಯಬೇಕಿತ್ತು. ಗೋ ಶಾಲೆಗಳನ್ನು ಆರಂಭಿಸಿ ಮೇವು ಹಂಚಿಕೆ ಮಾಡಬೇಕಿತ್ತು. ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಅದರ ಬದಲು ರಾಜಕೀಯ ಮಾಡುತ್ತ ಕಾಲ ಹರಣ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಹೊಲದಲ್ಲಿ ದುಡಿಮೆ ಮಾಡುವ ರೈತರು ಬರದಿಂದಾಗಿ ಮಂಗಳೂರು, ಬೆಂಗಳೂರಿಗೆ ಗುಳೇ ಹೋಗುತ್ತಿದ್ದಾರೆ. ಸಣ್ಣ ರೈತರು ಹುಬ್ಬಳ್ಳಿ, ಧಾರವಾಡ ಭಾಗದ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ರೈತಾಪಿ ವರ್ಗವನ್ನು ಕೆಂಗೆಡಿಸುವ ಬರ ಎದುರಾಗಿದ್ದರೂ, ಸರ್ಕಾರ ಮಾತ್ರ ಇವರತ್ತ ಗಮನ ಹರಿಸುತ್ತಿಲ್ಲ’ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಕಿಡಿಕಾರಿದರು.
ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮುಖಂಡರಾದ ಅಮೃತ ದೇಸಾಯಿ, ಷಣ್ಮುಖ ಗುರಿಕಾರ, ಬಸವರಾಜ ಕುಂದಗೋಳಮಠ ಇದ್ದರು.