ರಾಜ್ಯ ಸರ್ಕಾರ ನನ್ನಂತಹ ಬಡ ಕಲಾವಿದನಿಗೆ ಗುರುತಿಸಿ, ರಾಜ್ಯ ಮಟ್ಟದ ಕರ್ನಾಟಕ
ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ತುಂಬಾ ಸಂತೋಷವಾಗಿದೆ ಎಂದು ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ನರಸಪ್ಪಾ ಭೂತೇರ ಮಾಳೆಗಾಂವ ಹೇಳಿದರು.
ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ ಬೀದರ್ ಜಿಲ್ಲೆಯ ಭೂತೇರ ಕಲಾವಿದ ನರಸಪ್ಪ ಮಾಳೆಗಾಂವ ಅವರಿಗೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಹಾಗೂ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳಿಂದ ನಗರದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ,”ಗಡಿ ಜಿಲ್ಲೆಯ ಒಬ್ಬ ಬಡ ಕಲಾವಿದನಿಗೆ ರಾಜ್ಯಮಟ್ಟದಲ್ಲಿ ಗುರುತಿಸಿದೆ” ಎಂದು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, “ಗಡಿ ಜಿಲ್ಲೆಯಲ್ಲಿ ಕಳೆದ 40 ವರ್ಷಗಳಿಂದ ಭೂತೇರ ಕುಣಿತ ಕಲೆಯನ್ನು ಜೀವಂತವಾಗಿಟ್ಟ ಬಡ ಕಲಾವಿದ ನರಸಪ್ಪ ಮಾಳೆಗಾಂವ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಜಿಲ್ಲೆಗೆ ಹೆಮ್ಮೆಯಿದೆ” ಎಂದು ಹೇಳಿದರು.
“ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಶ್ರೀಮಂತ ವ್ಯಕ್ತಿಗಳಿಗೆ ಲಭಿಸಿದರೆ ಜಿಲ್ಲಾ ನಾಗರಿಕ ಸಮಿತಿ ಸನ್ಮಾನ ಕಾರ್ಯಕ್ರಮ ಆಯೋಜಿಸುತ್ತದೆ. ಆದರೆ ಓರ್ವ ನಿಷ್ಠಾವಂತ ಬಡ ಕಲಾವಿದ ನರಸಪ್ಪ ಮಾಳೆಗಾಂವ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಿದರೂ ಬೀದರ ಜಿಲ್ಲಾ ನಾಗರಿಕ ಸಮಿತಿ ಕನಿಷ್ಢ ಗೌರವಿಸದೇ ಇರುವುದು ಶೋಚನೀಯವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಮಾತನಾಡಿ, “ಗಡಿ ಜಿಲ್ಲೆಯಲ್ಲಿ ಭೂತೇರ ಕುಣಿತ ಕಲೆ ಮುಂದಿನ ಪೀಳಿಗೆಗೆ ಜೀವಂತವಾಗಿಡಲು ನರಸಪ್ಪ ಮಾಳೆಗಾಂವ ಅವರು ತಮ್ಮ ಶಿಷ್ಯಂದಿರ ಸಂಖ್ಯೆ ಹೆಚ್ಚಿಸಬೇಕು. ಇದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಶಿಸಿ ಹೋಗುತ್ತಿರುವ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇವರ ತಂಡ
ಕಾರ್ಯಪ್ರವೃತ್ತರಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದೀರಾ? ಈ ದಿನ ಸಂಪಾದಕೀಯ | ಭೂ ಹಗರಣಗಳ ತನಿಖೆಗೆ ಹೆಗ್ಗಡೆಯವರು ಸಿದ್ಧವಿರುವರೇ?
ಕಾರ್ಯಕ್ರಮದಲ್ಲಿ ಕರ್ನಾಟಕ ಯುವ ಸಂಘ-ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸುನೀಲ ಭಾವಿಕಟ್ಟಿ, ಸಾಹಿತಿಗಳಾದ ರಮೇಶ ಬಿರಾದಾರ, ರಾಜಕುಮಾರ ಹೆಬ್ಬಾಳೆ ಹಾಗೂ ಪ್ರಮುಖರಾದ ನಾಗಶೆಟ್ಟಿ ಧರಮಪೂರ, ಎಂ.ಪಿ. ಮುದಾಳೆ, ಹಾಜಿಪಾಶಾ ಬಾಳೂರ, ಯಾದವರಾವ ಘೋಡ್ಕೆ, ಸಂಜೀವಕುಮಾರ ಅತಿವಾಳೆ, ಪಂಢರಿ ನೇಳಗೆ, ರವಿ ನೇಳಗೆ, ಸಂಗ್ರಾಮ ಚಿಟ್ಟಾ, ಹಣಮಂತ ರಾಮಲು, ರೇಣುಕಾ ಅವರು ಸೇರಿದಂತೆ ನಾವದಗೇರಿ ಬಡಾವಣೆಯ ಮಹಿಳೆಯರು, ಮಕ್ಕಳು, ಹಿರಿಯರು ಗಣ್ಯರು ಇದ್ದರು.