ಈ ದಿನ ಸಂಪಾದಕೀಯ | ಬರ ಅಂದ್ರೆ ರಾಜಕಾರಣಿಗಳ ಚೆಲ್ಲಾಟ, ರೈತರಿಗೆ ಪ್ರಾಣಸಂಕಟ

Date:

Advertisements
ಬರಪೀಡಿತ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತವಿದೆ. ಪರಿಹಾರ ನೀಡಬೇಕಾದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಅವರು ಕೊಡುವುದಿಲ್ಲ, ಇವರು ಬಿಡುವುದಿಲ್ಲ. ಪರಸ್ಪರ ದೋಷಾರೋಪಣೆ ಮಾತ್ರ ನಿಲ್ಲುವುದಿಲ್ಲ. ಬರ ಅಪ್ಪಳಿಸುವುದು, ರೈತ ಮೌನವಾಗಿ ಕೂತು ಬಿಕ್ಕಳಿಸುವುದು, ಬಿಕ್ಕಳಿಸುವ ರೈತನನ್ನೇ ಎತ್ತಿ ತೋರಿಸಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಿಂದುಂಡು ದುಂಡಾಗುವುದು- ಇವತ್ತಿಗೂ ನಿಂತಿಲ್ಲ, ನಿಲ್ಲುವುದೂ ಇಲ್ಲ.

ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರ ‘ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ʼ ಎಂಬ ಕೃತಿ ಭಾರತದ ಬರ ಕುರಿತ ಕಣ್ಣೀರಿನ ಕಥನವನ್ನು ಓದುಗನ ಕರುಳಿಗಿಸುತ್ತದೆ. ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಬರ, ವರವಾಗಿ ಪರಿಣಮಿಸುವುದನ್ನು ಬಿಡಿಸಿಟ್ಟು, ವ್ಯವಸ್ಥೆಯನ್ನು ಬಯಲಲ್ಲಿ ನಿಲ್ಲಿಸಿ ಬೆತ್ತಲು ಮಾಡುತ್ತದೆ. ಆದರೆ ಬರ ಅಪ್ಪಳಿಸುವುದು, ರೈತ ಮೌನವಾಗಿ ಕೂತು ಬಿಕ್ಕಳಿಸುವುದು, ಬಿಕ್ಕಳಿಸುವ ರೈತನನ್ನೇ ಎತ್ತಿ ತೋರಿಸಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಿಂದುಂಡು ದುಂಡಾಗುವುದು- ಇವತ್ತಿಗೂ ನಿಂತಿಲ್ಲ, ನಿಲ್ಲುವುದೂ ಇಲ್ಲ.

ಅದಕ್ಕೊಂದು ಜ್ವಲಂತ ಸಾಕ್ಷಿಯಾಗಿ ನಮ್ಮ ರಾಜ್ಯ ಈ ವರ್ಷ ಮಳೆ ಕೊರತೆಯಿಂದ ಬರಕ್ಕೆ ತುತ್ತಾಗಿದೆ. ಬೆಳೆ ಹಾನಿಯಿಂದ ₹33,710 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ರಾಜ್ಯದ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಇದರ ನಡುವೆಯೇ, ರಾಜ್ಯ ಸರ್ಕಾರದ ಅಧಿಕಾರಿಗಳ ತಂಡ ಬರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಿದೆ. ಹಾಗೆಯೇ ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ಮೂರು ತಂಡಗಳು ರಾಜ್ಯಕ್ಕೆ ಆಗಮಿಸಿ ಹಲವು ಭಾಗಗಳಲ್ಲಿ ಸಂಚರಿಸಿ, ಬೆಳೆ-ಮಳೆ ಪರಿಶೀಲಿಸಿ, ಸಂತ್ರಸ್ತ ರೈತರನ್ನು ಮಾತನಾಡಿಸಿ ದೆಹಲಿಗೆ ತೆರಳಿ ಆಗಲೇ ಒಂದು ತಿಂಗಳು ಕಳೆದಿದೆ.

Advertisements

ಎನ್‌ಡಿಆರ್‍‌ಎಫ್ ಮಾರ್ಗಸೂಚಿಗಳ ಪ್ರಕಾರ ರಾಜ್ಯಕ್ಕೆ ₹17,901.73 ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಸಾಲದು ಎಂದು ಕಂದಾಯ ಮತ್ತು ಕೃಷಿ ಸಚಿವರು ಕೇಂದ್ರ ಸರ್ಕಾರದ ಮಂತ್ರಿಗಳನ್ನು ಖುದ್ದಾಗಿ ಕಂಡು ಮನವಿ ಅರ್ಪಿಸಿದ್ದೂ ಆಗಿದೆ. ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೂ ಆಗಿದೆ.

ಬರಪೀಡಿತ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತವಿದೆ. ಪರಿಹಾರ ನೀಡಬೇಕಾದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಅವರು ಕೊಡುವುದಿಲ್ಲ, ಇವರು ಬಿಡುವುದಿಲ್ಲ. ಪರಸ್ಪರ ದೋಷಾರೋಪಣೆ ಮಾತ್ರ ನಿಲ್ಲುವುದಿಲ್ಲ. ಇದು ಸಹಜವಾಗಿಯೇ ಆಡಳಿತ ಪಕ್ಷಕ್ಕೆ ಬರಪೀಡಿತ ಪ್ರದೇಶಗಳ ಜನರ ಮುಂದೆ, ಕೇಂದ್ರ ಸರ್ಕಾರವನ್ನು ದೂರಲು, ಮೊಸಳೆ ಕಣ್ಣೀರು ಹಾಕಲು, ನುಣುಚಿಕೊಳ್ಳುವ ನಾಟಕವಾಡಲು ಅನುಕೂಲಕರ ವಾತಾವರಣ ಸೃಷ್ಟಿಸಿದೆ.

ವಿರೋಧಪಕ್ಷದಲ್ಲಿರುವ ಬಿಜೆಪಿ ಏನು ಸುಮ್ಮನೆ ಕೂತಿದೆಯೇ, ಮಾಧ್ಯಮಗಳ ದಂಡು ಕಟ್ಟಿಕೊಂಡು ಬರಪೀಡಿತ ಪ್ರದೇಶಗಳಿಗೆ ದಾಳಿ ಮಾಡಿದೆ. ರೈತರ ಮುಂದೆ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಬಿಡಿಸಿಡುತ್ತ, ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು, ‘ಪ್ರತಿನಿತ್ಯ ಪ್ರಧಾನಿ ಮೋದಿಯವನ್ನು ನಿಂದಿಸುತ್ತಿದ್ದರೆ, ಬರ ಪರಿಹಾರ ಸಿಗುತ್ತದೆಯೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸಿದ್ದಾರೆ. ಪ್ರಧಾನಿ ಮೋದಿ, ಅವರ ಮನೆಯ ಹಣ ತಂದು ಕೊಡುತ್ತಾರೆಯೇ? ಜನರ ತೆರಿಗೆ ಹಣವನ್ನು ಜನರಿಗೆ ಮರಳಿಸುತ್ತಾರೆ. ಟೀಕಿಸಿದ ಮಾತ್ರಕ್ಕೆ ಪರಿಹಾರ ಕೊಡಬಾರದೆನ್ನುವ ಕಾನೂನೇನಾದರೂ ಇದೆಯೇ? ಅಥವಾ ಟೀಕೆಗೆ ಪ್ರಧಾನಿ ಮೋದಿ ಅತೀತರೇ?

ಹಾಗೆಯೇ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ ಬಿಜೆಪಿಯ ಸಿ.ಟಿ ರವಿ, ‘ನಿಮ್ಮ ಬೊಕ್ಕಸ ಖಾಲಿ ಆಗಿದೆ ಎಂದು ಒಪ್ಪಿಕೊಳ್ಳಿ. ಬರ ಪರಿಹಾರಕ್ಕೆ ನೀಡಲು ಹಣವಿಲ್ಲ, ನಮಗೆ ಯೋಗ್ಯತೆ ಇಲ್ಲ, ಪಾಪರ್ ಚೀಟಿ ತೆಗೆದುಕೊಂಡಿದ್ದೇವೆ ಎಂದು ಭಿಕ್ಷಾ ಪಾತ್ರೆ ಹಿಡಿದುಕೊಳ್ಳಿʼ ಎಂದು ರಾಜ್ಯ ಸರ್ಕಾರವನ್ನು ಲೇವಡಿ ಮಾಡಿ ಅಸಹಾಯಕ ರೈತರ ಮುಂದೆ ಬಣ್ಣವಿಲ್ಲದ ನಾಟಕ ಆಡಿದ್ದಾರೆ. ಅಸಲಿಗೆ, ರಾಜ್ಯ ಬಿಜೆಪಿ ನಾಯಕರಿಗೆ ಮತ್ತು 25 ಸಂಸದರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಇದ್ದಿದ್ದರೆ ತಮ್ಮದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ, ಪರಿಹಾರವನ್ನು ಕೇಳಿ ತರುವುದಕ್ಕಾಗುತ್ತಿಲ್ಲವೇಕೆ? ಏಕೆಂದರೆ, ಪ್ರಧಾನಿ ಮುಂದೆ ನಿಲ್ಲುವ ದಮ್ಮೂ ಇಲ್ಲ, ತಾಕತ್ತೂ ಇಲ್ಲ. ಇನ್ನು ಪರಿಹಾರ ಕೇಳುವುದೆಲ್ಲಿ?

ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕೂಡ, ಇದಕ್ಕಿಂತ ಭಿನ್ನವಾಗಿಲ್ಲ. ಆತುರಾತುರವಾಗಿ ರೂ. 324 ಕೋಟಿ ಬಿಡುಗಡೆ ಮಾಡಿ, ಕುಡಿಯುವ ನೀರಿಗೆ, ಜಾನುವಾರುಗಳ ಮೇವಿಗೆ ಮೊದಲ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದೆ. ಆದರೆ ಆ ಅಧಿಕಾರಿ ಯಾರು? ಅಧಿಕಾರದಲ್ಲಿರುವವರಿಗೆ ಹಣ ಕೊಟ್ಟು ಆಯಕಟ್ಟಿನ ಜಾಗ ಹಿಡಿದವರು. ಅವರ ಕೈಗೆ ಹಣ ಬಂದರೆ, ಅವರು ಸಂತ್ರಸ್ತರಿಗೆ ಪರಿಹಾರ ನೀಡುವುದುಂಟೆ? ಪರಿಹಾರ ಪಡೆದು ಮತ್ತೆ ಬದುಕು ಕಟ್ಟಿಕೊಂಡವರುಂಟೆ?

ಆದರೆ ಆಳುವ ಸರ್ಕಾರಗಳಿಗೆ ರೈತರಿಗೆ ನೆರವಾಗುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ತವಕ. ವಿರೋಧ ಪಕ್ಷಗಳಿಗೆ ಆಳುವ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಪರಿಹಾರ ಕೊಡಿಸಿದ್ದೇವೆಂದು ಪ್ರಚಾರ ಪಡೆಯುವ ಪಡಪೋಸಿತನ. ಇಬ್ಬರ ಆಟದಲ್ಲಿ ಬರಪೀಡಿತ ಬಡಪಾಯಿ ನಲುಗಬೇಕು. ನೆಲ ಹಿಡಿದು ಮಲಗಬೇಕು. ಮೈಯಲ್ಲಿ ಕೊಂಚ ಕಸುವಿದ್ದರೆ ಎದ್ದು ಗುಳೆ ಹೋಗಬೇಕು. ನರಕ ಕಾಣಬೇಕು. ಬರ ಅಂದ್ರೆ ಇಲ್ಲಿ ಯಾರಿಗೆ ಕಷ್ಟ, ಯಾರಿಗೆ ಇಷ್ಟ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X