ʼಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಬಲಾಢ್ಯರ ಲಾಬಿಯಿಂದ ರಕ್ಷಿಸಿʼ

Date:

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಪ್ರಸ್ತುತ ಬುಡಕಟ್ಟು ಜನರಿಂದ ದೂರವಾಗಿದ್ದು, ಕೇವಲ ಅಧಿಕಾರಿಗಳು ಮತ್ತು ಕೆಲವು ಲಾಬಿಕೋರರು ಹಣ ಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದು ಬುಡಕಟ್ಟು ಸಮುದಾಯಗಳ ನಾಯಕರ ಒಕ್ಕೊರಲಿನ ಕೂಗು

“ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ತನ್ನ ಮೂಲ ಆಶಯವನ್ನು ಮರೆತು ಅವನತಿಯ ಹಾದಿ ಹಿಡಿದಿದೆ. ಹಾಲಿ ನಿರ್ದೇಶಕರಾಗಿರುವ ಶ್ರೀನಿವಾಸ ಅವರಿಗೆ ಆಡಳಿತದ ಗಂಧಗಾಳಿಯೂ ಗೊತ್ತಿಲ್ಲ. ಬುಡಕಟ್ಟುಗಳ ಅಧ್ಯಯನದ ಕುರಿತು ಯಾವುದೇ ಆಸಕ್ತಿ ಇಲ್ಲ. ಕರ್ನಾಟಕದ ಯಾವ ಬುಡಕಟ್ಟು ಸಮುದಾಯಗಳ ಸಂಪರ್ಕವೂ ಅವರಿಗಿಲ್ಲ. ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ” ಎಂಬ ಆರೋಪ ಕೇಳಿ ಬಂದಿದೆ.

ಬುಡಕಟ್ಟು ಸಂಶೋಧನಾ ಸಂಸ್ಥೆಯು ಸಂಶೋಧನೆ, ತರಬೇತಿ, ಮೌಲ್ಯಮಾಪನ, ಬುಡಕಟ್ಟು ಮ್ಯೂಸಿಯಂ ಸ್ಥಾಪನೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯದ ಅರಿವು, ಗ್ರಂಥಾಲಯ ಸ್ಥಾಪನೆ, ಕಾರ್ಯಾಗಾರ, ವಿಚಾರ ಸಂಕಿರಣ, ಪುಸ್ತಕ ಪ್ರಕಟಣೆ, ಬುಡಕಟ್ಟು ಸಮುದಾಯಗಳ ಸಾಕ್ಷ್ಯಚಿತ್ರ ನಿರ್ಮಾಣ ಹಾಗೂ ಕುಲಶಾಸ್ತ್ರೀಯ ಅಧ್ಯಯನಗಳನ್ನು ಮಾಡುವ ಉದ್ದೇಶಗಳನ್ನು ಒಳಗೊಂಡಿತ್ತು.

ಈ ಸಂಸ್ಥೆಯ ಅವನತಿಗೆ ಕಾರಣಗಳೇನು ಎಂಬ ಬಗ್ಗೆ ಅಲಕ್ಷಿತ ಬುಡಕಟ್ಟುಗಳ ನಾಯಕರನ್ನು ಮಾತಾಡಿಸಿದರೆ ಈ ಸಂಸ್ಥೆಯ ಸುತ್ತ ಹೆಣೆದುಕೊಂಡಿರುವ ಭ್ರಷ್ಟಾಚಾರ ಮತ್ತು ರಾಜಕೀಯ ಲಾಬಿಗಳ ದೊಡ್ಡ ಕತೆಯನ್ನೇ ಬಿಚ್ಚಿಡುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಹಿಂದೆ ಸುಮಾರು ಹತ್ತು ವರ್ಷಗಳ ಕಾಲ ನಿರ್ದೇಶಕ ಸ್ಥಾನದಲ್ಲಿದ್ದ ಬಸವನಗೌಡ ಎಂಬ ವ್ಯಕ್ತಿಯು ಬುಡಕಟ್ಟು ಸಂಸ್ಥೆಯನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿಟ್ಟಿದ್ದರು ಎಂಬುದು ಅವರ ಅಳಲು. ಅವರ ಮೇಲೆ ಹತ್ತಾರು ದೂರುಗಳು ದಾಖಲಾಗಿದ್ದು ವಿಚಾರಣೆ ಕೂಡ ಬಾಕಿಯಿದೆ.

ಇಂತಹ ಅದಕ್ಷ ಹಾಗೂ ಭ್ರಷ್ಟ ನಿರ್ದೇಶಕರುಗಳಿಂದಾಗಿ 2016ರಿಂದ ಕೇಂದ್ರ ಸರ್ಕಾರ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಕಾರಣವೆಂದರೆ ಕೇಂದ್ರ ಸರ್ಕಾರದಿಂದ ಪಡೆದಿರುವ ಅನುದಾನಕ್ಕೆ ಇಲ್ಲಿಯವರೆಗೆ ಹಣಬಳಕೆ ಬಗ್ಗೆ ಸೂಕ್ತ ಪ್ರಮಾಣ ಪತ್ರವನ್ನೇ ಸಲ್ಲಿಸಿಲ್ಲ. ಹೀಗಾಗಿ ಸುಮಾರು ರೂ.30 ಕೋಟಿಗೂ ಹೆಚ್ಚು ಮೊತ್ತ ಸರ್ಕಾರಕ್ಕೆ ನಷ್ಟವಾಗಿದೆ. ಈಗ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಕೇಂದ್ರ ಸರ್ಕಾರ ಬ್ಲಾಕ್ ಲಿಸ್ಟ್‌ಗೆ ಸೇರಿಸುವ ಹಂತದಲ್ಲಿದೆ.

ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಬುಡಕಟ್ಟು ಸಮುದಾಯಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ಜೀವನೋಪಾಯಕ್ಕೆ ಸೂಕ್ತ ಉದ್ಯೋಗಗಳಿಲ್ಲ. ಈಗಿನ ತಲೆಮಾರಿನ ಯುವಜನತೆ ಹೇಗೋ ವಿದ್ಯಾಭ್ಯಾಸ ಪಡೆದುಕೊಂಡು ಡಿಗ್ರಿ ಸರ್ಟಿಫಿಕೇಟ್‌ಗಳನ್ನು ಪಡೆದುಕೊಂಡರೂ ಅವರಿಗೆ ಉದ್ಯೋಗಾವಕಾಶಗಳಿಲ್ಲ. ಇಂಥಾ ಅನೇಕ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಯೋಜನೆಗಳನ್ನು ರೂಪಿಸಲು ನಾಂದಿಯಾಗಬೇಕಿದ್ದ ಈ ಸಂಸ್ಥೆ ಯಾವುದೇ ಕಾಳಜಿ, ಬದ್ಧತೆಯಿಲ್ಲದೆ ಬುಡಕಟ್ಟುಗಳಿಗೆ ದ್ರೋಹ ಬಗೆಯುತ್ತಿದೆ.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೊಧನಾ ಸಂಸ್ಥೆಯು ಪ್ರಸ್ತುತ ಬುಡಕಟ್ಟು ಜನರಿಂದ ದೂರವಾಗಿದ್ದು, ಕೇವಲ ಅಧಿಕಾರಿಗಳು ಮತ್ತು ಕೆಲವು ಲಾಬಿಕೋರರು ಹಣ ಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದು ಬುಡಕಟ್ಟು ಸಮುದಾಯಗಳ ನಾಯಕರ ಒಕ್ಕೊರಲಿನ ಕೂಗು. ಬುಡಕಟ್ಟು ಸಮುದಾಯಗಳು ಹೆಚ್ಚಾಗಿರುವ ಮೈಸೂರಿನಲ್ಲಿ ಬುಡಕಟ್ಟುಗಳಿಗಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಆರಂಭಿಸಿದ್ದರೂ ಇಲ್ಲಿ ಬುಡಕಟ್ಟುಗಳ ಅಧ್ಯಯನ ಹಾಗೂ ಏಳ್ಗೆಗೆ ಅವಕಾಶ ಇಲ್ಲದಂತಾಗಿದೆ.

ಮುಖ್ಯಮಂತ್ರಿಗಳ ಆದೇಶಕ್ಕೂ ಕವಡೆ ಕಿಮ್ಮತ್ತಿಲ್ಲವೆ ?
ಇತ್ತೀಚೆಗೆ ಹಲವು  ಬುಡಕಟ್ಟುಗಳ ಸಂಘಟನೆಗಳು ಒಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದಲ್ಲದೆ, ಸದರಿ ಸಂಸ್ಥೆಯ ನಿರ್ದೇಶಕರಾಗಿರುವ ಶ್ರೀನಿವಾಸ್‌ ಅವರನ್ನು ಬದಲಿಸಿ ಬುಡಕಟ್ಟುಗಳ ಬಗ್ಗೆ ಕಾಳಜಿ ಬದ್ಧತೆಯಿರುವ ವ್ಯಕ್ತಿಯನ್ನು ನೇಮಿಸುವಂತೆ ಅಹವಾಲು ಸಲ್ಲಿಸಿತ್ತು. ಶತಮಾನಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬುಡಕಟ್ಟುಗಳ ಸಮಸ್ಯೆಗಳ ಬಗ್ಗೆ ಅರಿತುಕೊಂಡ ಮುಖ್ಯಮಂತ್ರಿಗಳು ಬುಡಕಟ್ಟು ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿರುವ ಶ್ರೀನಿವಾಸ್‌ ಅವರನ್ನು ಕೂಡಲೇ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ.

ಆದರೆ, ಬುಡಕಟ್ಟು ಸಂಸ್ಥೆಯ ಸುತ್ತಲೂ ಕಾಣದ ಕೈಗಳು ಆವರಿಸಿಕೊಂಡಿದ್ದು ಅವರಿಗೆ ಬುಡಕಟ್ಟು ಸಮುದಾಯಗಳು ಜಾಗೃತಗೊಳ್ಳುವುದಾಗಲಿ, ಏಳ್ಗೆಯಾಗುವುದಾಗಲಿ ಅಪಥ್ಯದ ವಿಚಾರ. ಹೀಗಾಗಿ ಈ ಶಕ್ತಿಗಳು ತೆರೆಮರೆಯಲ್ಲಿ ಅದಕ್ಷ, ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತುಬಿಟ್ಟಿದ್ದಾರೆ. ಏನೆಲ್ಲಾ ನೆಪಗಳನ್ನು ಮುಂದಿಟ್ಟುಕೊಂಡು ಶ್ರೀನಿವಾಸ್‌ ಅವರ ರಕ್ಷಣೆಗೆ ನಿಂತಿದ್ದಾರೆ. ಇಂಥಾ ಲಾಬಿಯ ದಾಳವಾಗಿ ಮುಖ್ಯಮಂತ್ರಿಯವರ ಸ್ವಜಾತಿ ನಾಯಕರು ಹಾಗೂ ಕೆಲವು ಅಧಿಕಾರಿಗಳು ಮುಂಚೂಣಿಯಲ್ಲಿ ನಿಂತಿದ್ದಾರೆ ಎಂಬುದು ನತದೃಷ್ಟ ಬುಡಕಟ್ಟುಗಳ ದುರಂತವೇ ಸರಿ.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆಗೆ ಶ್ರೀನಿವಾಸ್‌ ಅವರು ಪೂರಕವಾಗಿದ್ದಾರೆ ಹಾಗೂ ಈ ಸ್ಥಾನದಲ್ಲಿ ಬೇರೊಬ್ಬರು ಬಂದರೆ ತಮ್ಮ ಬೇಡಿಕೆಗೆ ಪ್ರತಿಕೂಲವಾಗಿ ಕೆಲಸ ಮಾಡಬಹುದು ಎಂಬ ಆಧಾರರಹಿತ ಗುಮಾನಿಯೇ ಕುರುಬ ನಾಯಕರು ಹಾಗೂ ಅಧಿಕಾರಿಗಳ ಇಂಥಾ ಲಾಬಿಗೆ ಕಾರಣ ಎನ್ನಲಾಗಿದೆ. ಹೀಗಾಗಿ ಮುಖ್ಯಮಂತ್ರಿಯವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡದೆ ಮೂಲೆಗುಂಪು ಮಾಡಲಾಗಿದೆ ಎಂಬ ದಟ್ಟ ಅನುಮಾನ ಮೂಡುತ್ತಿದೆ.

ಈಗ ಚೆಂಡು ಪುನಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಂಗಳಕ್ಕೆ ಬಂದು ನಿಂತಿದೆ. ತಳ ಸಮುದಾಯಗಳ ಏಳ್ಗೆಗೆ ಬದ್ಧತೆಯನ್ನು ಪ್ರದರ್ಶಿಸುವ ಸಿದ್ದರಾಮಯ್ಯನವರು ಆಧಾರರಹಿತವಾದ ಗುಮಾನಿಯ ಬೆನ್ನುಹತ್ತಿರುವ ತಮ್ಮ ಸ್ವಜಾತಿ ಲಾಬಿಗೆ ಮಣಿಯುತ್ತಾರೋ ಅಥವಾ ಶತಮಾನಗಳಿಂದ ವಂಚಿತರಾದ ಅಮಾಯಕ ಬುಡಕಟ್ಟುಗಳ ಪರವಾಗಿ ನಿಲ್ಲುತ್ತಾರೋ ಎಂಬುದನ್ನು ಸದ್ಯದ ಭವಿಷ್ಯ ತೀರ್ಮಾನಿಸುತ್ತದೆ. ಮುಖ್ಯಮಂತ್ರಿಗಳು ಈ ಅಗ್ನಿಪರೀಕ್ಷೆಯನ್ನು ಗೆದ್ದು ಬರಲಿ, ನಿರರ್ಥಕ ಜಾತಿ ಲಾಬಿಗೆ ಮಣಿಯದೆ ಅಮಾಯಕ ಬುಡಕಟ್ಟುಗಳ ಹಿತಾಸಕ್ತಿಯನ್ನು ಕಾಪಾಡಲಿ ಎಂಬುದು ಬುಡಕಟ್ಟು ಸಮುದಾಯದ ನಾಯಕರ ಒತ್ತಾಯ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ರಿಪೋರ್ಟಿನ ಪತ್ರಕರ್ತ ಯಾರು?. ಬಹುಶಃ ಆರ್ ಎಸ್ ಎಸ್ ಕೇಂದ್ರಿತ ಅಲೆಮಾರಿ, ಅರೆ ಅಲೆಮಾರಿ ಗುಂಪಿನ ಅಂಬೇಡ್ಕರ್ ವಿರೋಧಿ ಗುಂಪಿನ ಬರವಣಿಗೆಯಂತೆ ಕಾಣಿಸುತ್ತಿದೆ.

    ನಿಜ ಹೇಳಬೇಕೆಂದರೆ ಮಾನವಶಾಸ್ತ್ರ ವಿಷಯವನ್ನೇ ಓದದವರನ್ನು ಆರ್ ಎಸ್ ಎಸ್ ಬುಡಕಟ್ಟು ಅಧ್ಯಯನಕ್ಕೆ ಶಿಫಾರಸ್ಸು ಮಾಡಿ ಸೇರಿಸಿ.. ಮೂಲ ಬುಡಕಟ್ಟುಗಳನ್ನು ಇನ್ನೂ ವಂಚಿತರನ್ನಾಗಿ ಮಾಡಲು ಹೊರಟಿದೆ. ಇತಿಹಾಸ, ಕನ್ನಡ ಅಧ್ಯಯನ ಮಾಡಿರುವ ಜನರು ಬುಡಕಟ್ಟು ಅಧ್ಯಯನಕ್ಕೆ ಹೇಗೆ ನ್ಯಾಯ ಕೊಡಲು ಸಾಧ್ಯ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ದರ್ಶನ್‌ ಅಂಧಾಭಿಮಾನಿಗಳು ಕೊಡುತ್ತಿರುವ ಸಂದೇಶವೇನು?

ಕೊಲೆ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಲನಚಿತ್ರ ನಟ ದರ್ಶನ್‌ ತೂಗುದೀಪ ಅವರ...

ಅಮಿತ್ ಮಾಳವೀಯ ಎಂಬ ಸ್ತ್ರೀಪೀಡಕನೂ, ಬಿಜೆಪಿಯ ಬೇಟಿ ಬಚಾವೋ ಎಂಬ ಘೋಷಣೆಯೂ…

ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್‌ ಮಾಳವೀಯ ಪಶ್ಚಿಮ ಬಂಗಾಳದ...

ನೆನಪು | ರಾಜೀವ್ ತಾರಾನಾಥ್ ಮತ್ತು ಗೋಧ್ರಾ

ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್, ಹಿಂದೊಮ್ಮೆ ಗೋಧ್ರಾ ಘಟನೆ...