ಈ ಜಿಯೋನಿಸ್ಟ್ ಚಳವಳಿಯ ಪ್ರತಿಪಾದಕರಾದ ಕುಲೀನ ಯಹೂದಿ ಮನೆತನಗಳು ಬ್ರಿಟಿಷರ ಎಲ್ಲಾ ವಸಾಹತು ಯೋಜನೆಗಳಿಗೆ ಬಂಡವಾಳ ಹೂಡಿದ್ದವು. ಈ ಕಾರಣ ಬ್ರಿಟಿಷ್ ಮತ್ತು ಜಿಯೋನಿಸ್ಟರಿಗೆ ಗಾಢವಾದ ಸಂಬಂಧ ಬೆಳೆದಿತ್ತು. ಮುಂದೆ ಇದು ಜಿಯೋನಿಸ್ಟರ ಇಸ್ರೇಲ್ ದೇಶ ಸ್ಥಾಪನೆಗೆ ಅನುಕೂಲ ಮಾಡಿಕೊಟ್ಟಿತು.
ಇಸ್ರೇಲ್ ದೇಶದ ಪರಿಕಲ್ಪನೆ ಮೊದಲ ಬಾರಿಗೆ ಮುನ್ನಲೆಗೆ ಬಂದಿದ್ದು ಜಿಯೋನಿಸ್ಟ್ ಚಳವಳಿಯಿಂದ. 19ನೇ ಶತಮಾನದ ಯುರೋಪಿನಲ್ಲಿ ಯಹೂದಿಗಳಲ್ಲಿ ಹುಟ್ಟಿದ ಈ ಚಳವಳಿ ಸಾಂಪ್ರದಾಯಿಕ ಯಹೂದಿ ಧರ್ಮದಿಂದ ಹೊರಬಂದು ತನ್ನದೇ ಆದ ಒಂದು ರಾಜಕೀಯ ಗುರಿಯನ್ನು ಹೊಂದಿತ್ತು. ಅದರ ಭಾಗವಾಗಿ, ಯುರೋಪಿನಲ್ಲಿ ಯಹೂದಿಗಳ ಮೇಲೆ ತಾರತಮ್ಯ ಹೆಚ್ಚುತ್ತಿರುವುದರಿಂದ ಯಹೂದಿಗಳಿಗೆ ಒಂದು ಪ್ರತ್ಯೇಕ ದೇಶ ಸ್ಥಾಪಿಸಬೇಕೆಂದು ಈ ಚಳವಳಿಯು ಪ್ರತಿಪಾದಿಸಿತು.
ಆದರೆ, ಈ ಪರಿಕಲ್ಪನೆಯನ್ನು ಸಾಂಪ್ರದಾಯಿಕ ಯಹೂದಿಗಳು ಮತ್ತು ಯಹೂದಿ ಧರ್ಮ ಸುಧಾರಕರು ಒಪ್ಪಲಿಲ್ಲ. ಯಹೂದಿ ಧರ್ಮ ಗ್ರಂಥಗಳ ಪ್ರಕಾರ ದೇವದೂತರು ಬಂದು ಮೆಸ್ಸಾದ (ಪ್ರವಾದಿ) ಆಗಮನದ ಸುದ್ಧಿ ತಿಳಿಸುವವರೆಗೂ ಯಹೂದಿಗಳು ತಮ್ಮ ಮೂಲ ನೆಲೆಗಳಿಗೆ ತೆರಳಬಾರದು ಎಂದು ಸಾಂಪ್ರದಾಯಿಕ ಯಹೂದಿಗಳು ಜಿಯೋನಿಸ್ಟರು ಪ್ರತಿಪಾದಿಸಿದ ಇಸ್ರೇಲ್ ದೇಶದ ಪರಿಕಲ್ಪನೆಯನ್ನು ವಿರೋಧಿಸಿದರು. ಇನ್ನೊಂದು ಕಡೆ, ಯುಹೂದಿ ಧರ್ಮ ಸುಧಾರಕರು ಯಹೂದಿ ಕಟ್ಟುನಿಟ್ಟಾದ ಧರ್ಮವೇ ಹೊರತು ದೇಶ ಕಟ್ಟುವ ಸಾಧನವಲ್ಲ ಎಂದು ಜಿಯೋನಿಸ್ಟರ ಈ ರಾಷ್ಟ್ರ ಪರಿಕಲ್ಪನೆಯನ್ನು ವಿರೋಧಿಸಿದರು. ಇನ್ನೂ ಬಹುಸಂಖ್ಯಾತ ಯುರೋಪಿನ ಯಹೂದಿಗಳಲ್ಲಿ ಈ ಜಿಯೋನಿಸ್ಟ್ ಚಳವಳಿಯ ಪ್ರಭಾವ ಇರಲೇ ಇಲ್ಲ.
ಯುರೋಪಿನ ಶ್ರೀಮಂತ ಮನೆತನಗಳ ಮೇಲ್ಸ್ತರದ ಯಹೂದಿಗಳೇ ಜಿಯೋನಿಸ್ಟ್ ಚಳವಳಿಯ ಪ್ರತಿಪಾದಕರಾಗಿದ್ದರು. ಕುಲೀನ್ ಮನೆತನದ ಥಿಯೋಡರ್ ಹರ್ಜೆಲ್ ಈ ಜಿಯೋನಿಸ್ಟ್ ಚಳವಳಿಯ ಪಿತಾಮಹನಾಗಿದ್ದ. ಅವನು ಬರೆದ ದೇರ ಜುಡೆನಸ್ಟಾಟ್ (Der Judenstaat) ಯಹೂದಿಗಳ ರಾಜ್ಯ ಎಂದು ಅರ್ಥ ಕೊಡುವ ಪುಸ್ತಕದಲ್ಲಿ ಮೊದಲ ಬಾರಿಗೆ ಯಹೂದಿಗಳಿಗೆ ಪತ್ಯೇಕ ದೇಶದ ಪರಿಕಲ್ಪನೆಯನ್ನು ನೀಡಿದ. ಆದರೆ ಆ ಪುಸ್ತಕದಲ್ಲಿ ಎಲ್ಲೂ ಕೂಡ ಪ್ಯಾಲೆಸ್ತೀನ್ನಲ್ಲಿ ದೇಶ ಸ್ಥಾಪನೆಯಾಗಬೇಕೆಂದು ಹೇಳಲಿಲ್ಲ. 1897ರಲ್ಲಿ ಸ್ವಿಜರ್ಲ್ಯಾಂಡ್ನ ಬಾಸೆಲ್ನಗರದಲ್ಲಿ ಮೊದಲ ಜಿಯೋನಿಸ್ಟ್ ಅಧಿವೇಶನ ನಡೆಯಿತು. ಅಲ್ಲಿ ಹರ್ಜೆಲ್ ಪರಿಕಲ್ಪನೆಯಂತೆ ಯಹೂದಿಗಳಿಗಾಗಿ ಪ್ರತ್ಯೇಕ ದೇಶ ಸ್ಥಾಪಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ಈ ಜಿಯೋನಿಸ್ಟ್ ಚಳವಳಿಯ ಪ್ರತಿಪಾದಕರಾದ ಕುಲೀನ ಯಹೂದಿ ಮನೆತನಗಳು ಬ್ರಿಟಿಷರ ಎಲ್ಲಾ ವಸಾಹತು ಯೋಜನೆಗಳಿಗೆ ಬಂಡವಾಳ ಹೂಡಿದ್ದರು. ಬ್ರಿಟಿಷ್ ವಸಾಹತುಗಳಲ್ಲಿ ಈ ಯಹೂದಿಗಳು ಅತ್ಯಂತ ಪ್ರಮುಖ ವ್ಯಾಪಾರಿ ವರ್ಗವಾಗಿದ್ದರು. ಈ ಕಾರಣ ಬ್ರಿಟಿಷ್ ಮತ್ತು ಜಿಯೋನಿಸ್ಟರಿಗೆ ಗಾಢವಾದ ಸಂಬಂಧ ಬೆಳೆದಿತ್ತು. ಮುಂದೆ ಇದು ಜಿಯೋನಿಸ್ಟರ ಇಸ್ರೇಲ್ ದೇಶ ಸ್ಥಾಪನೆಗೆ ಅನುಕೂಲ ಮಾಡಿಕೊಟ್ಟಿತು. ಮೊದಲ ಜಿಯೋನಿಸ್ಟ್ ಅಧಿವೇಶನದ ನಂತರ ಹರ್ಜೆಲ್ ಹಲವಾರು ಜಿಯೋನಿಸ್ಟ್ ಸಭೆಗಳಲ್ಲಿ ಉಗಾಂಡಾದಲ್ಲಿ ಇಸ್ರೇಲ್ ದೇಶದ ಸ್ಥಾಪನೆಗೆ ಪ್ರಸ್ತಾಪಿಸಿದ. ಆದರೆ ಅದು ಅನಂತರದ ಅಧಿವೇಶನಗಳಲ್ಲಿ ಅನುಮೋದನೆಗೊಳ್ಳಲಿಲ್ಲ. ತದನಂತರ ಸೈಪ್ರಸ್ನಲ್ಲಿ ಇಸ್ರೇಲ್ ದೇಶ ಸ್ಥಾಪನೆಗೆ ಪ್ರಸ್ತಾಪಿಸಿ ಬ್ರಿಟಿಷರಿಗೆ ಮನವಿ ಮಾಡಿದ. ಆದರೆ, ಅದನ್ನು ಬ್ರಿಟಿಷರು ತಿರಸ್ಕರಿಸಿದರು.
ಆ ಸಮಯದಲ್ಲಿ ಸೈಪ್ರಸ್ ಮತ್ತು ಉಗಾಂಡಾ ದೇಶಗಳು ಬ್ರಿಟಿಷ್ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಿದ್ದವು. ಮತ್ತು ಅತಿ ಕಡಿಮೆ ಜನಸಾಂದ್ರತೆಯುಳ್ಳ ಪ್ರದೇಶಗಳಾಗಿದ್ದವು. ಈ ಕಾರಣ ಅಲ್ಲಿ ಇಸ್ರೇಲ್ ದೇಶ ಸ್ಥಾಪನೆಗೆ ಅತ್ಯಂತ ಅನುಕೂಲ ಎಂದು ಥಿಯೋಡರ್ ಹರ್ಜೆಲ್ ಈ ಪ್ರದೇಶಗಳನ್ನು ಪ್ರಸ್ತಾಪಿಸಿದ್ದ. ತದನಂತರ ಅವನ ಮರಣದ ನಂತರ, 1905ರಲ್ಲಿ ನಡೆದ 7ನೇ ಜಿಯೋನಿಸ್ಟ್ ಅಧಿವೇಶನ ಹರ್ಜೆಲ್ನ ಈ ಪ್ರಸ್ತಾಪಗಳನ್ನು ತಿರಸ್ಕರಿಸಿ ಇಸ್ರೇಲ್ ದೇಶ ಸ್ಥಾಪಿಸಲು ಪ್ಯಾಲೆಸ್ತೀನ್ನನ್ನು ಆಯ್ಕೆ ಮಾಡಿಕೊಂಡಿತು. ಆ ಪ್ರಕ್ರಿಯೆ ಭಾಗವಾಗಿ ಬೈಬಲ್ ಗ್ರಂಥದಲ್ಲಿ ಕೆಲ ಆಯ್ದ ವಾಕ್ಯಗಳ ಆಧಾರದ ಮೇಲೆ ಇಸ್ರೇಲ್ ದೇಶವನ್ನು ಪ್ಯಾಲೆಸ್ತೀನ್ನಲ್ಲಿ ಸ್ಥಾಪಿಸಲು ನಿರ್ಧರಿಸಲಾಯಿತು. ಅದಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳು ಇರಲಿಲ್ಲ.
ಆದರೆ, ಪ್ಯಾಲೆಸ್ತೀನ್ ರಾಷ್ಟ್ರಿಯತೆಗೆ ಒಂದು ಐತಿಹಾಸಿಕ ಹಿನ್ನಲೆ ಇತ್ತು. ಎಲ್ಲಾ ಅಬ್ರಹಾಂ ಧರ್ಮಗಳ ಕೇಂದ್ರಬಿಂದುವಾದ ಜೆರುಸಲೇಮ್ ಅದರ ಸಾಂಸ್ಕೃತಿಕ ಪ್ರತಿಬಿಂಬವಾಗಿತ್ತು. ಬೈಬಲ್ನಲ್ಲಿ ಉಲ್ಲೇಖ ಮಾಡಿದ ಅನೇಕ ಜನಜೀವನ ಪದ್ಧತಿಗಳು ಪ್ಯಾಲೆಸ್ತೀನಿಯನ್ನರಲ್ಲಿ ಇದ್ದವು. ಪ್ಯಾಲೆಸ್ತೀನ್ ಸಂಸ್ಕ್ರತಿಯನ್ನು ಹೊದ್ದು ಸಾಹಿತ್ಯ ಮತ್ತು ಬುದ್ಧಿಜೀವಿ ವಲಯಗಳು ಬೆಳೆದಿದ್ದವು. ಎಲ್ಲಾ ಅಬ್ರಹಾಮ್ ಧರ್ಮದ ಅಸ್ಮಿತೆಗಳು ಅಲ್ಲಿ ಸೇರಿ ಪ್ಯಾಲೆಸ್ತೀನ್ ರಾಷ್ಟ್ರಿಯತೆಗೆ ಬಹುಸಂಸ್ಕೃತಿಯ ಅಸ್ಮಿತೆಯನ್ನು ನೀಡಿದ್ದವು, ಈ ಕಾರಣ ಪ್ಯಾಲೆಸ್ತೀನ್ ಧರ್ಮ ನಿರಪೇಕ್ಷತೆಯಿಂದ ಕೂಡಿದ ನಾಡಾಗಿತ್ತು. 1922ರಲ್ಲಿ ಪ್ಯಾಲೆಸ್ತೀನ್ ಬ್ರಿಟಿಷ್ ಮ್ಯಾಂಡಟ್ಗೆ ಒಳಪಟ್ಟ ನಂತರದಲ್ಲಿ ಬ್ರಿಟಿಷ್ ವಸಾಹತುಶಾಹಿಯ ಮತ್ತು ಜಿಯೋನಿಸ್ಟ್ ಆಕ್ರಮಣದ ವಿರುದ್ಧ ನಡೆದ ಚಳವಳಿಗಳು ಪ್ಯಾಲೆಸ್ತೀನ್ ರಾಷ್ಟ್ರಿಯತೆಗೆ ಒಂದು ರಾಜಕೀಯ ಪ್ರಜ್ಞೆ ನೀಡಿದವು. ಹಾಗಾಗಿ ಪ್ಯಾಲೆಸ್ತೀನ್ ರಾಷ್ಟ್ರೀಯತೆ ಯಾವತ್ತು ಒಂದು ಧಾರ್ಮಿಕ ಅಸ್ಮಿತೆಯ ರಾಷ್ಟ್ರಿಯತೆಯಾಗಲಿಲ್ಲ. ಬದಲಾಗಿ, ಚಿಂತಕ ಎಡ್ವರ್ಡ್ ಸೈದ್ ಹೇಳುವಂತೆ ಅದು ಬಹುಧಾರ್ಮಿಕ ಸಂಸ್ಕ್ರತಿಯ ಅಸ್ಮಿತೆಯನ್ನು ಒಳಗೊಂಡು ವಸಾಹತುಶಾಹಿ ಮತ್ತು ಜಿಯೋನಿಸ್ಟ್ರ ಆಕ್ರಮಣದ ವಿರುದ್ಧ ಮೊಳಗಿದ ರಾಷ್ಟಿಯತೆಯಾಗಿತ್ತು.
ಅರಬ್ ದಂಗೆಯ ನಾಯಕತ್ವ ವಹಿಸಿದ್ದ ಹುಸೇನ್ಬಿನ್ಅಲಿ ಮತ್ತು ಪ್ಯಾಲೆಸ್ತೀನ್ ರಾಷ್ಟ್ರ ಚಳವಳಿ ನಾಯಕರು ಯುರೋಪಿನ ಧಾರ್ಮಿಕ ಮೂಲಭೂತವಾದ ಮತ್ತು ಫ್ಯಾಸಿಸ್ಟ್/ನಾಜಿಗಳ ಜನಾಂಗೀಯ ದ್ವೇಷಕ್ಕೆ ಬಲಿಯಾದ ನಿರಾಶ್ರಿತ ಯಹೂದಿಗಳನ್ನು ಅರಬ್ಬ ನಾಡಿಗೆ ಆಹ್ವಾನಿಸಿದರು. ಅವರಿಗೆ ಪ್ಯಾಲೆಸ್ತೀನ್ನಲ್ಲಿ ನೆಲೆಯನ್ನು ಕೊಟ್ಟರು. ಆದರೆ ವಸಾಹತುಶಾಹಿ ಹಿಂಸೆಯಿಂದ ಅವರದೆ ನಾಡಿನಲ್ಲಿ ಸ್ಥಾಪಿಸಿದ ಜಿಯೋನಿಸ್ಟ್ರ ನೆಲಸಿಗ ವಸಾಹತುಶಾಹಿ (Settler Colonial) ದೇಶವಾದ ಇಸ್ರೇಲ್ನ್ನು ಪ್ಯಾಲೆಸ್ತೀನ್ಯನ್ನರು ಯಾವತ್ತು ಒಪ್ಪಲಿಲ್ಲ. ಅದನ್ನು ಪ್ರತಿಭಟಿಸಿದರು, ಇಂದಿಗೂ ಅದರ ವಿರುದ್ಧ ಹೋರಾಡುತ್ತಲೇ ಇದ್ದಾರೆ.

ವಸಂತ ಕಲಾಲ್
ದೆಹಲಿಯ JNU ನಲ್ಲಿ ಸಂಶೋಧನಾ ವಿದ್ಯಾರ್ಥಿ