ಪ್ಯಾಲೆಸ್ತೀನ್‌-ಇಸ್ರೇಲ್‌ ಯುದ್ಧದ ಹಿಂದಿನ ವಸಾಹತುಶಾಹಿಯ ನೆರಳು

Date:

ಈ ಯುದ್ಧದ ಹಿಂದಿನ ಮೂಲ ಸಮಸ್ಯೆಯಾದ ಯುರೋಪಿನ ವಸಾಹತುಶಾಹಿಯ ಬಗ್ಗೆ ಜಗತ್ತಿನ ಕೆಲ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಹಾಗಾಗಿ ಆ ಚರ್ಚೆಯ ಭಾಗವಾಗಿಯೇ ಈ ಘಟನೆಯನ್ನು ನೋಡುವುದು ಸಮಂಜಸವಾದದ್ದು.


ಹಮಾಸ್‌
ದಾಳಿಯ ಬೆನ್ನಲ್ಲೇ, ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಸಂಘರ್ಷ ಯುದ್ಧವಾಗಿ ಬದಲಾಗಿದೆ. ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ಬಾಂಬ್‌ ದಾಳಿಯಿಂದಾಗಿ ಇಲ್ಲಿಯವರೆಗೆ 8000ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ. ಅದರಲ್ಲಿ ಮೂರುವರೆ ಸಾವಿರ ಮಕ್ಕಳು ಸಾವನ್ನಪ್ಪಿದ್ದಾರೆ.

ಇವತ್ತಿನ ಜಾಗತಿಕ ಸಂದರ್ಭದಲ್ಲಿ ಹಲವಾರು ಚರ್ಚೆಗಳನ್ನು ಹುಟ್ಟುಹಾಕಿರುವ ಈ ಘಟನೆ, ಈ ಮೂಲ ಸಂಘರ್ಷಕ್ಕೆ ಯಾರು ಹೊಣೆ ಅನ್ನುವ ಮುಖ್ಯ ಪ್ರಶ್ನೆಯನ್ನು ಮುಂದಿಟ್ಟಿದೆ. ದೇಶದ ಮುಖ್ಯವಾಹಿನಿಗಳು, ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮತ್ತು ಹಿಂದುತ್ವದ ಪ್ರತಿಪಾದಕರು/ಹಿಂಬಾಲಕರು ಮುಸ್ಲಿಮ್‌ ವಿರುದ್ಧದ ಅಸಹನೆಯಿಂದಾಗಿ ಇಸ್ರೇಲ್‌ನ್ನು ಬೆಂಬಲಿಸಿ, ಇಸ್ರೇಲ್ ನಡೆಸುವ ಎಲ್ಲಾ ಕೃತ್ಯಗಳಿಗೆ ಕೇಕೆ ಹಾಕುತ್ತಿದ್ದಾರೆ. ಇನ್ನೊಂದು ಕಡೆ ಇಸ್ಲಾಮ್‌ ಪರ ಒಲವಿರುವವರು ಇಸ್ಲಾಮ್‌ ಆಧಾರದ ಮೇಲೆ ಪ್ಯಾಲೆಸ್ತೀನ್‌ನನ್ನು ಬೆಂಬಲಿಸುತ್ತಿದ್ದಾರೆ. ಇತರರು ಮಾನವೀಯತೆ ಮತ್ತು ಯುದ್ಧ ವಿರೋಧಿ ನೆಲೆಯಿಂದ ಎರಡು ದೇಶಗಳ ನಡುವಿನ ಹಿಂಸೆಯನ್ನು ಖಂಡಿಸುತ್ತಿದ್ದಾರೆ. ಆದರೆ ಇವೆಲ್ಲವೂ ಕೂಡ ಭಾವನಾತ್ಮಕ ಪ್ರತಿಕ್ರಿಯೆಗಳು, ಇವುಗಳಿಂದ ಸಂಘರ್ಷದ ಹಿಂದಿನ ನೈಜ ಪ್ರಶ್ನೆಯು ಮರೆಮಾಚಿದೆ.

ಈ ಘಟನೆಯ ಹಿಂದಿನ ಮೂಲ ಸಮಸ್ಯೆಯಾದ ಯುರೋಪಿನ ವಸಾಹತುಶಾಹಿಯ ಬಗ್ಗೆ ಜಗತ್ತಿನ ಕೆಲ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಹಾಗಾಗಿ ಆ ಚರ್ಚೆಯ ಭಾಗವಾಗಿಯೇ ಈ ಘಟನೆಯನ್ನು ನೋಡುವುದು ಸಮಂಜಸವಾದದ್ದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಒಳಗೊಂಡ ಇವತ್ತಿನ ಬಹುತೇಕ ಅರೇಬಿಯನ್‌ ಪರ್ಯಾಯ ದ್ವೀಪಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೆಸಪೊಟೋಮಿಯನ್‌ ನಾಗರಿಕತೆ ಉದಯದಿಂದ ಇಲ್ಲಿಯವರೆಗೆ ಹಲವಾರು ಸಾಮ್ರಾಜ್ಯಗಳು ಈ ಭೂಭಾಗವನ್ನಾಳಿವೆ. ಬ್ಯಾಬಿಲೊನಿಯನ್ನರು, ಪರ್ಶಿಯನ್ನರು, ಗ್ರೀಕರು, ತದ ನಂತರ ಇಸ್ಲಾಮ್‌ ಧರ್ಮದ ಉಮ್ಮಾಯದ್‌, ಅಬ್ಬಾಸಿದ್‌ ಸಾಮ್ರಾಜ್ಯಗಳು ಈ ಪ್ರದೇಶಗಳನ್ನು ಆಳಿವೆ. ಅಲ್ಲದೇ, ಈ ಪ್ರದೇಶದಲ್ಲಿ ಅಬ್ರಹಾಮಿಕ್‌ ಧರ್ಮಗಳಾದ ಯಹೂದಿ, ಕ್ರೈಸ್ತ ಮತ್ತು ಇಸ್ಲಾಂ ಕೂಡ ಜನಿಸಿದವು. ಪ್ಯಾಲೆಸ್ತೀನ್‌ನ ಜೆರುಸಲೇಮ್ ಈ ಎಲ್ಲಾ ಧರ್ಮಗಳ ಕೇಂದ್ರಬಿಂದುವಾಗಿ ಬೆಳೆಯಿತು.

ಜೆರುಸಲೇಮ್ (ಕ್ರೈಸ್ತರ ಪವಿತ್ರ ಸ್ಥಳ) Photo by Spencer Platt/Getty Images

ಮಧ್ಯಯುಗದಲ್ಲಿ ಈ ಜೆರುಸಲೆಮ್‌ಗಾಗಿ ಬೈಜಾಂಟಿಯನ್‌ ಮತ್ತು ಅರಬ್ಬರಿಗೆ ಹಲವಾರು ಧರ್ಮಯುದ್ಧಗಳು ನಡೆಸಿದರು. ಇದಕ್ಕೆ ಮೂಲ ಕಾರಣ ಯುರೋಪಿಯನ್‌ ಚರ್ಚ್‌ಗಳು ಜೆರುಸಲೇಮ್‌ ಕ್ರೈಸ್ತಧರ್ಮಕ್ಕೆ ಮಾತ್ರ ಸೇರಿದ ಪವಿತ್ರ ಸ್ಥಳ ಎಂದು ಪ್ರೇರೇಪಿಸಿ ಯುರೋಪಿಯನ್‌ ರಾಜರನ್ನು ಯುದ್ಧಕ್ಕೆ ಅಟ್ಟಿದರು. ಮೊದಲ ಯುದ್ಧಗಳಲ್ಲಿ ಬೈಜಾಂಟಿಯನ್‌ರು ಜೆರುಸಲೇಮ್‌ ವಶಪಡಿಸಿಕೊಳ್ಳಲು ಯಶಸ್ವಿಯಾದರು, ಆದರೆ ತದನಂತರದ ಯುದ್ಧಗಳಲ್ಲಿ ಅರಬ್ಬರು ಮೆಲುಗೈ ಸಾಧಿಸಿದರು.

ನಂತರ ಮೂರನೆಯ ಕ್ರೂಸೇಡ್‌ (ಧರ್ಮಯುದ್ಧ) ಯುದ್ಧದ ವಿಜಯದ ನಂತರ ಇಸ್ಲಾಮ್‌ ದೊರೆ ಸಲ್ಲಾದಿನ್‌ನಿಂದಾಗಿ ಅಲ್ಲಿ ಎಲ್ಲಾ ಧರ್ಮದ ಜನರಿಗೆ ಅವಕಾಶ ದೊರೆಯಿತು. ತದನಂತರ ಹಲವಾರು ಕ್ರೂಸೇಡ್‌ಗಳಲ್ಲಿ ಜೆರುಸಲೇಮ್‌ ವಶಪಡಿಸಿಕೊಳ್ಳಲು ಯುರೋಪಿಯನ್ ರಾಜರು ಪ್ರಯತ್ನಿಸಿದರು ಆದರೆ ಅದು ವಿಫಲಗೊಂಡಿತು. ನಂತರ ಅಟಮನ್‌ ಟರ್ಕರ ಆಡಳಿತಕ್ಕೆ ಒಳಪಟ್ಟ ಜೆರುಸಲೇಮ್‌ ಬಹುಧರ್ಮಗಳ ಸಮನ್ವಯದ ಕೇಂದ್ರವಾಗಿ ಬೆಳೆಯಿತು. ಅದನ್ನು ಒಳಗೊಂಡ ಪ್ಯಾಲೆಸ್ತೀನ್‌ ಮತ್ತು ಸುತ್ತಮುತ್ತಲಿನ ಸಿರಿಯಾ, ಇರಾಕ್‌ನ ಸಮಾಜಗಳು ಸರ್ವಧರ್ಮದ ಸಂಸ್ಕ್ರತಿಗಳನ್ನು ಒಳಗೊಂಡೇ ರೂಪುಗೊಂಡವು.

ಯುರೋಪಿನ ಇತಿಹಾಸಕಾರರ ಪ್ರಕಾರ ಬೈಜಾಂಟಿಯನ್‌ ಸಾಮ್ರಾಜ್ಯದ ಕೊನೆಯ ನಗರವಾದ ಕಾನ್‌ಸ್ಟಾಂಟಿನೋಪಲ್‌ ಅಟಮನ್‌ ಟರ್ಕರ ವಶವಾದ ನಂತರ ಅಧುನಿಕ ಯುಗ ಆರಂಭಗೊಂಡಿತು. ಅಧುನಿಕ ಯುಗದಲ್ಲಿ ಅಟಮನ್‌ ಟರ್ಕರ ಸಾಮ್ರಾಜ್ಯ ಅತ್ಯಂತ ಪ್ರಬಲವಾಗಿ ಬೆಳೆಯಿತು. ಬಹುತೇಕ ಅರಬ್‌ ಪರ್ಯಾಯ ದ್ವೀಪವನ್ನೊಳಗೊಂಡು ಗ್ರೀಕ್‌ ಮತ್ತು ಪೂರ್ವ ಯುರೋಪಿನವರೆಗೆ ಈ ಸಾಮ್ರಾಜ್ಯ ವಿಸ್ತರಿಸಿತು. ಅದೇ ರೀತಿ ಯುರೋಪಿನಲ್ಲಿ ಪುನರಜ್ಜೀವನ ಚಳವಳಿ, ಕೈಗಾರಿಕೀಕರಣದ ಬೆಳವಣಿಗೆಯ ನಂತರ ವಸಾಹತುಶಾಹಿ ಯುಗ ಆರಂಭಗೊಂಡಿತು.

ವ್ಲಾದಿಮಿರ್‌ ಲೆನಿನ್‌ ಹೇಳುವ ಪ್ರಕಾರ, ಯುರೋಪಿನಲ್ಲಾದ ಬಂಡವಾಳಶಾಹಿಯ ಬೆಳವಣಿಗೆ, ಮಾರುಕಟ್ಟೆ ವಿಸ್ತರಿಸಲು ದೇಶಗಳು ತಮ್ಮ ಗಡಿಗಳನ್ನು ಪುನರ್‌ ರಚಿಸಲು ನಡೆದ ಪೈಪೋಟಿಯಿಂದಾಗಿ ಮೊದಲನೆ ಮಹಾಯುದ್ಧ 1914ರಲ್ಲಿ ಆರಂಭವಾಯಿತು. ಈ ಮಹಾಯುದ್ಧ ಅರಬ್‌ ಜಗತ್ತಿನ ಮೇಲೆ ಕೂಡ ಪರಿಣಾಮ ಬೀರಿತು.

 ಅರಬ್‌ ದಂಗೆ 1916

19ನೇ ಶತಮಾನದಿಂದ ಅಟಮನ್‌ ಟರ್ಕರ ಆಡಳಿತದ ವಿರುದ್ಧ ಗ್ರೀಕ್‌ ಮತ್ತು ಸ್ಲಾವ್‌ ರಾಷ್ಟ್ರೀಯತೆಗಳು ಬೆಳೆದು ಸ್ವಾತಂತ್ರ್ಯಕ್ಕಾಗಿ ಹಲವಾರು ಹೋರಾಟಗಳು ಆರಂಭವಾದವು. ಅದೇ ರೀತಿ ಅರಬ್ಬ ರಾಷ್ಟ್ರೀಯತೆ ಬೆಳೆದು ಅರಬ್‌ ಚಳವಳಿಗೆ ನಾಂದಿ ಹಾಡಿತು. ಡಮಾಸ್ಕಸ್‌ ಈ ಅರಬ್‌ ಚಳವಳಿಯ ಕೇಂದ್ರವಾಯಿತು. ಶಿಕ್ಷಿತ ಅರಬ್‌ ಕ್ರಿಶ್ಚಿಯನ್ನರು ತಮ್ಮ ಬರವಣಿಗೆಗಳ ಮೂಲಕ ಅರಬ್‌ ರಾಷ್ಟ್ರೀಯತೆಗೆ ಬುನಾದಿ ಹಾಕಿದರು. ತದನಂತರ ಈ ಚಳವಳಿ ಎಲ್ಲಾ ಕಡೆ ಹಬ್ಬಿತು. ಹೀಗೆ ಅರಬ್‌ ರಾಷ್ಟ್ರೀಯತೆ ಒಳಗಡೆ ಆಧುನಿಕ ಸಿರಿಯಾ, ಲೆಬನಾನ್‌, ಪ್ಯಾಲೆಸ್ತೀನ್‌ ಮತ್ತು ಇರಾಕ್‌ ರಾಷ್ಟ್ರೀಯತೆಗಳು ಕೂಡ ಮೊಳಕೆ ಒಡೆಯಲಾರಂಭಿಸದವು.

ಅಟಮನ್‌ ಟರ್ಕರ ವಿರುದ್ಧ ಬೆಳೆಯುತ್ತಿರುವ ಅರಬ್ಬರ ಚಳವಳಿಯನ್ನು ಕಂಡ ಫ್ರೆಂಚ್‌ ಮತ್ತು ಬ್ರಿಟಿಷರು, ಮೊದಲನೆ ಮಹಾಯುದ್ಧದಲ್ಲಿ ಅಟಮನ ಟರ್ಕರ ವಿರುದ್ಧ ಹೋರಾಡಲು ಸಹಾಯ ಕೋರಿದರು. ಅರಬ್‌ ನಾಯಕನಾಗಿದ್ದ ಶರಿಫ್‌ ಆಫ್‌ ಮೆಕ್ಕಾ ಎಂದು ಕರೆಯಲ್ಪಡುವ ಹುಸೇನ್‌ ಬಿನ್‌ ಅಲಿಗೆ ಬೆಂಬಲಿಸಿದ ಪಕ್ಷದಲ್ಲಿ ಅರಬ್ಬರಿಗೆ ಸ್ವಾತಂತ್ರ್ಯ ನೀಡುವುದಾಗಿ ಘೋಷಿಸಿದರು. ಆ ಮಾತಿನಂತೆ ಅಟಮನ್‌ ಟರ್ಕರ ವಿರುದ್ಧ ಹುಸೇನ್‌ ಬಿನ್‌ ಅಲಿ ನಾಯಕತ್ವದಲ್ಲಿ 1916ರಲ್ಲಿ ಅರಬ್‌ ದಂಗೆ ಪ್ರಾರಂಭವಾಯಿತು. ಈ ದಂಗೆಯಲ್ಲಿ ಸುಮಾರು 5000 ಅರಬ್‌ ಸೈನಿಕರು ಬ್ರಿಟಿಷ್‌ ಸೈನ್ಯದ ಜೊತೆ ಸೇರಿ ಹೋರಾಡಿದರು. ವಿಜಯ ಹತ್ತಿರವಾಗುತ್ತಿದ್ದಂತೆ ಬ್ರಿಟಿಷರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ.

ವಸಾಹತುಶಾಹಿಯ ಮೂಲಕ ಜಗತ್ತನ್ನೆ ಆಳಲು ಬಯಸಿದ್ಧ ಬ್ರಿಟಿಷರು ಮೊದಲಿನಿಂದಲೂ ಪಶ್ಚಿಮಾ ಏಷ್ಯಾದ ತೈಲ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿದ್ದರು. ಪಶ್ಚಿಮ ಏಷ್ಯಾವನ್ನು ವಸಾಹತು ಮಾಡಿಕೊಳ್ಳಲು ಅವರು ಮಾಡಿದ ಎಲ್ಲಾ ಪ್ರಯತ್ನಗಳನ್ನು ಅಟಮನ್‌ ಟರ್ಕರು ಹೊಸಕಿ ಹಾಕಿದ್ದರು. ಹೀಗಾಗಿ ಅಟಮನ್‌ ಟರ್ಕರ ವಿರುದ್ಧದ ಈ ಅರಬ್‌ ದಂಗೆ ಅವರಿಗೆ ವರದಾನವಾಯಿತು. ಅರಬ್ಬರಿಗೆ ಸ್ವಾತಂತ್ರ್ಯ ನೀಡುವುದಾಗಿ ಘೋಷಿಸಿದ್ದ ಬ್ರಿಟಿಷರು ಅವರಿಗೆ ಗೊತ್ತಾಗದಂತೆ ಒಳ ಒಪ್ಪಂದವನ್ನು ಮಾಡಿಕೊಂಡರು ಅದನ್ನು ಸೈಕಸ್-ಪೈಕೋಟ್‌ ಒಪ್ಪಂದ (1916) ಎಂದು ಕರೆಯಲಾಗುತ್ತದೆ. ಇದು ಬ್ರಿಟಿಷ್‌ ಮತ್ತು ಫ್ರೆಂಚರ ನಡುವೆ ನಡೆದ ಈ ಒಪ್ಪಂದಕ್ಕೆ ತ್ಸಾರ್‌ ಆಡಳಿತದ ರಷ್ಯಾದ ಸಮ್ಮತಿಯಿತ್ತು.

ಈ ಒಪ್ಪಂದದ ಪ್ರಕಾರ ಬ್ರಿಟಿಷ್‌ ಮತ್ತು ಫ್ರೆಂಚರು ಅಟಮನ್‌ ಟರ್ಕರ ಆಡಳಿತಕ್ಕೆ ಒಳಪಟ್ಟ ಪಶ್ಚಿಮ ಏಷ್ಯಾದ ಭೂಭಾಗಗಳನ್ನು ಅರಬ್ಬರಿಗೆ ನೀಡದೆ ತಮ್ಮಲ್ಲೆ ವಸಾಹತು ನೆಲೆಗಳನ್ನಾಗಿ ಮಾಡಿಕೊಳ್ಳುವುದಾಗಿ ನಿರ್ಧರಿಸಿದರು. ಈ ಒಪ್ಪಂದದ ಬಗ್ಗೆ 1917ರ ನವೆಂಬರ್‌ವರೆಗೆ ಅರಬ್ಬರಿಗೆ ಯಾವುದೇ ಮಾಹಿತಿ ಗೊತ್ತಾಗಲಿಲ್ಲ. ತದನಂತರ ರಷ್ಯಾದಲ್ಲಿ ತ್ಸಾರ್‌ ಆಡಳಿತವನ್ನು ಕಿತ್ತೆಸೆದು ಲೆನಿನ್‌ ನಾಯಕತ್ವದಲ್ಲಿ ರಷ್ಯಾ ಕ್ರಾಂತಿ ನಡೆಸಿ ವಿಜಯಿಯಾದ ಬೊಲ್ಷೇವಿಕರು ರಷ್ಯಾದ ತ್ಸಾರ್‌ ಆಡಳಿತದ ರಹಸ್ಯ ದಾಖಲೆಗಳನ್ನು ಸಾರ್ವಜನಿಕ ಗೊಳಿಸುವುದಾಗಿ ಘೋಷಿಸಿದ್ದರು. ಅದರಂತೆ ಸೈಕಸ್-ಪೈಕೋಟ್‌ ಒಪ್ಪಂದದ ಮಾಹಿತಿಯನ್ನು ತಮ್ಮದೆ ಪತ್ರಿಕೆಯಾದ ಪ್ರಾವಡಾದಲ್ಲಿ ಪ್ರಕಟಿಸಿದರು. ಇದರ ಪರಿಣಾಮವಾಗಿ ಅರಬ್ಬರಿಗೆ ಈ ಮಾಹಿತಿ ದೊರೆಯಿತು.

ಅದೇ ರೀತಿ 1917 ರಲ್ಲಿ ಇನ್ನೊಂದು ಒಪ್ಪಂದ ಕೂಡ ನಡೆಯಿತು. ಅದುವೇ ಬಾಲ್ಫರ್‌ ಡಿಕ್ಲೇರೇಶನ್‌, ಬ್ರಿಟಿಷ್‌ ವಿದೇಶಾಂಗ ಕಾರ್ಯದರ್ಶಿ ಅರ್ಥರ್‌ ಬಾಲ್ಫರ್‌ ಬ್ರಿಟನ್‌ನ ಜಿಯೋನಿಸ್ಟ್‌ ಚಳವಳಿಯ ನಾಯಕನಾಗಿದ್ದ ಲಿಯೋನಲ್‌ ವಾಲ್ಟರ್‌ ರೋಥ್ಸಚೈಲ್ಡ್‌ಗೆ ಬರೆಯಲಾದ ಈ ಪತ್ರದಲ್ಲಿ ಪ್ಯಾಲೆಸ್ತೀನ್‌ನಲ್ಲಿ ಯಹೂದಿಗಳಿಗೆ ಪ್ರತ್ಯೇಕ ದೇಶವನ್ನು ಘೋಷಿಸಲಾಯಿತು. ಇವೆರಡು ಒಪ್ಪಂದಗಳು ಅರಬ್ಬರಿಗೆ ಮಾಡಿದ ಮಹಾದ್ರೋಹಗಳಾಗಿದ್ದವು. ‌

ಅಟಮನ್‌ ಟರ್ಕರು

ಏಕೆಂದರೆ ಮೊದಲನೆಯದಾಗಿ ಬ್ರಿಟಿಷ್‌ ಮತ್ತು ಫ್ರೆಂಚರು ಇವೆರಡು ನಿರ್ಣಯಗಳನ್ನು ತೆಗೆದುಕೊಳ್ಳುವ ಮುನ್ನ ಅರಬ್ಬರನ್ನು ಯಾವುದೇ ರೀತಿ ಸಮ್ಮತಿಸಿರಲಿಲ್ಲ, ರಹಸ್ಯವಾಗಿಯೇ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಎರಡನೆಯದಾಗಿ ಅಟಮನ್‌ ಟರ್ಕರಿಂದ ಅರಬ್ಬರಿಗೆ ಸ್ವಾತಂತ್ರ್ಯ ನೀಡುವುದಾಗಿ ಘೋಷಿಸಿದ್ದ ಅವರು ಮಾತಿನಂತೆ ನಡೆದುಕೊಳ್ಳಲಿಲ್ಲ, ಅರಬ್‌  ನೆಲೆಗಳಲ್ಲಿ ತಮ್ಮ ವಸಾಹತುಶಾಹಿ ಆಡಳಿತವನ್ನು ಸ್ಥಾಪಿಸಿದರು.

ಹೀಗೆ 1918ರ ಹೊತ್ತಿಗೆ ಮೊದಲನೆ ಮಹಾಯುದ್ಧ ಸಮಾಪ್ತಿಯಾಗುತ್ತಿದ್ದಂತೆ, ಇವೆಲ್ಲ ಒಪ್ಪಂದಗಳ ಪರಿಣಾಮ ಅಟಮನ್‌ ಟರ್ಕರ ಆಡಳಿತದಲ್ಲಿದ್ದ ಅರಬ್‌ ದೇಶಗಳು ಬ್ರಿಟಿಷ್‌ ಮತ್ತು ಫ್ರೆಂಚರ ವಸಾಹತುಗಳಾಗಿ ಬದಲಾದವು. ಬ್ರಿಟಿಷ್‌ ಮತ್ತು ಫ್ರೆಂಚರು ಪಶ್ಚಿಮ ಏಷ್ಯಾವನ್ನು ವಿಂಗಡಿಸಿ ಕೃತಕವಾದ ಗಡಿಗಳನ್ನು ನಿರ್ಮಿಸಿದರು. ಈ ಗಡಿಗಳು ಅನೇಕ ಸಮಸ್ಯೆಗಳನ್ನು ತಂದೊಡ್ಡಿದವು. ಫ್ರೆಂಚರು ಸಿರಿಯಾ ಮತ್ತು ಲೆಬನಾನ್‌ ದೇಶಗಳನ್ನು ವಿಭಜಿಸಿದ ತತಕ್ಷಣವೇ ಸಿರಿಯಾದಲ್ಲಿ ಕ್ರಿಶ್ಚಿಯನ್ನರು ಧಾರ್ಮಿಕ ಅಲ್ಪಸಂಖ್ಯಾತರಾಗಿ ಬದಲಾದರು. ಅದೇ ರೀತಿ ಲೆಬನಾನ್‌ನಲ್ಲಿ ಇಸ್ಲಾಂ ಪಂಗಡಗಳು ಧಾರ್ಮಿಕ ಅಲ್ಪಸಂಖ್ಯಾತರಾಗಿ ಬದಲಾದರು. ಇದು ಮುಂದೆ ಅನೇಕ ನಾಗರಿಕ ಯುದ್ಧಗಳಿಗೆ ಕಾರಣವಾಯಿತು.

ಇನ್ನೊಂದು ಕಡೆ, ಬ್ರಿಟಿಷ್‌ ಮತ್ತು ಫ್ರೆಂಚರು, ಇರಾಕ್‌ ಮತ್ತು ಸಿರಿಯಾದ ಗಡಿ ನಿರ್ಮಿಸುವಲ್ಲಿ ಮಾಡಿದ ಸಮಸ್ಯೆಯಿಂದಾಗಿ ಕುರ್ದಿಶ್‌ ಜನಾಂಗ ವಾಸಿಸುವ ಭೂಭಾಗಗಳು ಟರ್ಕಿ, ಸಿರಿಯಾ ಮತ್ತು ಇರಾಕ್‌ ದೇಶಗಳಿಗೆ ಹರಿದು ಹಂಚಿಹೋದವು. ಬಹುಸಂಖ್ಯೆಯುಳ್ಳ ಕುರ್ದಿಶ್‌ ಜನಾಂಗದವರು ಇವೆಲ್ಲಾ ದೇಶಗಳಲ್ಲಿ ಅಲ್ಪಸಂಖ್ಯಾತರಾದರು. ಈ ಕಾರಣ ಅವರು ಸಾಮಾಜಿಕ/ಆರ್ಥಿಕ ಅವಕಾಶಗಳಿಂದ ವಂಚಿತರಾದರು.

ಬಾಲ್ಫರ್‌ ಡಿಕ್ಲೆರೇಶನ್‌

ಬಾಲ್ಫರ್‌ ಡಿಕ್ಲೆರೇಶನ್‌ ಅದೇ ರೀತಿ ಸಮಸ್ಯೆಯನ್ನು ತಂದೊಡ್ಡಿತು. ಮಹಾಯುದ್ಧದ ನಂತರ ಪ್ಯಾಲೆಸ್ತೀನ್‌ ಬ್ರಿಟಿಷ್‌ ವಸಾಹತುವಾಗಿ ಬದಲಾಯಿತು. ಆಗ ನಿಧಾನವಾಗಿ ಯುರೋಪಿನಿಂದ ಯಹೂದಿಗಳನ್ನು ಬ್ರಿಟಿಷರು ಪ್ಯಾಲೆಸ್ತೀನ್‌ಗೆ ಸಾಗಿಸಲು ಆರಂಭಿಸಿದರು. ಬ್ರಿಟಿಷ್‌ ವಸಾಹತುಶಾಹಿಯ ವಿರುದ್ಧ ಜಾಗೃತರಾಗುತ್ತಿದ್ದ ಪ್ಯಾಲೆಸ್ತೀನ್‌ಯನ್ನರು ಕೂಡ ಯುರೋಪಿನ ಈ ನಿರಾಶ್ರಿತ ಯಹೂದಿಗಳನ್ನು ಸ್ವಾಗತಿಸಿದರು.

ಎರಡನೆ ಮಹಾಯುದ್ಧ ಆರಂಭವಾಗುತ್ತಿದ್ದಂತೆ ಯುರೋಪಿನಿಂದ ಯಹೂದಿಗಳು ಬಹುದೊಡ್ಡ ಸಂಖ್ಯೆಯಲ್ಲಿ ಪ್ಯಾಲೆಸ್ತೀನ್‌ಗೆ ವಲಸೆ ಬಂದರು. ತದನಂತರ ಬ್ರಿಟಿಷರ ಸೈನ್ಯದ ಸಹಾಯದಿಂದ ಯುರೋಪಿನ ಯಹೂದಿಗಳಾದ ಜಿಯೋನಿಸ್ಟರು ಪ್ಯಾಲೆಸ್ತೀನ್‌ಯನ್ನರನ್ನು ಅವರ ನೆಲದಿಂದ ಬಲವಂತವಾಗಿ ಹೊರದೂಡಿದರು. ಜಿಯೋನಿಸ್ಟರ ವಿರುದ್ಧ ಪ್ಯಾಲೆಸ್ತೀನ್‌ನಲ್ಲಿ ಚಳವಳಿಗಳು ಆರಂಭವಾದವು. ಅದರಲ್ಲಿ ಅರಬ್‌ ಕ್ರಿಶ್ಚಿಯನ್ನರು, ಅರಬ್‌ ಮುಸ್ಲಿಮರು ಮತ್ತು ಸಣ್ಣ ಸಂಖ್ಯೆಯಲ್ಲಿದ್ದ ಅರಬ್‌ ಯಹೂದಿಗಳು ಇದ್ದರು. ಮಹಿಳಾ ಮತ್ತು ವಿದ್ಯಾರ್ಥಿ ಚಳವಳಿಗಳು ಕೂಡ ಮೂಡಿಬಂದವು. 1936ರಲ್ಲಿ ಬ್ರಿಟಿಷ್‌ ವಸಾಹತುಶಾಹಿ ಮತ್ತು ಜಿಯೋನಿಸ್ಟರ ಅತಿಕ್ರಮಣದ ವಿರುದ್ಧ ಪ್ಯಾಲೆಸ್ತೀನ್‌ ವಿಮೋಚನಾ ಚಳವಳಿ ಆರಂಭವಾಯಿತು. 1936ರವರೆಗೆ ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಈ ಚಳವಳಿ ಪ್ಯಾಲೆಸ್ತೀನ್‌ ರಾಷ್ಟ್ರಿಯತೆಯನ್ನು ಗಟ್ಟಿಗೊಳಿಸಿತು. ಅರಬ್‌ ಕೌನ್ಸಿಲ್‌ ಮತ್ತು ಪ್ಯಾಲೆಸ್ತೀನ್‌ ನ್ಯಾಷನಲ್‌ ಕಮಿಟಿ ಈ ಚಳವಳಿಯ ಜವಾಬ್ದಾರಿ ಹೊತ್ತಿದ್ದವು. ಈ ಶಾಂತಿಯುತ ಚಳವಳಿಯನ್ನು ಬ್ರಿಟಿಷ್‌ ಸೈನ್ಯವು ಹಿಂಸಾತ್ಮಕವಾಗಿ ಹತ್ತಿಕ್ಕಿತು.

ತದನಂತರ ಎರಡನೆ ಮಹಾಯುದ್ಧ ಮುಗಿಯುತ್ತಿದ್ದಂತೆ ಇಸ್ರೇಲ್‌ ದೇಶ ಸ್ಥಾಪನೆಗೆ ವಿಶ್ವಸಂಸ್ಥೆಯಿಂದ ಹಸಿರು ನಿಶಾನೆ ದೊರೆಯಿತು. ವಿಶ್ವಸಂಸ್ಥೆಯು ಪ್ಯಾಲೆಸ್ತೀನ್‌ನನ್ನು ಎರಡು ಭಾಗವಾಗಿ ವಿಂಗಡಿಸಿ ಅರಬ್‌ ಮತ್ತು ಯಹೂದಿಯರಿಗೆ ಪ್ರತ್ಯೇಕ ಭೂಪ್ರದೇಶಗಳನ್ನು ನಿಗದಿ ಮಾಡಿತು. ಇವೆಲ್ಲ ಕಾರಣಗಳಿಂದ 1948ರಲ್ಲಿ ಇಸ್ರೇಲ್‌ ಸ್ಥಾಪನೆಯಾಗುತ್ತಿದ್ದಂತೆ ಅರಬ್‌-ಇಸ್ರೇಲ್‌ ಯುದ್ಧ ಪ್ರಾರಂಭವಾಯಿತು. ಅರಬ್‌ ದೇಶಗಳ ಒಕ್ಕೂಟ ವಿಶ್ವಸಂಸ್ಥೆಯ ಈ ನಿರ್ಣಯವನ್ನು ವಿರೋಧಿಸಿ ಇಸ್ರೇಲ್‌ ಮೇಲೆ ದಾಳಿ ಪ್ರಾರಂಭಿಸಿತು. ಈ ಯುದ್ಧದಲ್ಲಿ ಇಸ್ರೇಲ್‌ಗೆ ಎಲ್ಲಾ ವಸಾಹತುಶಾಹಿ ದೇಶಗಳು ಬೆಂಬಲ ನೀಡಿದ್ದರಿಂದ ಕೊನೆಗೆ ಅದು ಜಯಗಳಿಸಿ ಪ್ಯಾಲೆಸ್ತೀನ್‌ನ ಶೇಕಡ 70ರಷ್ಟು ಭೂಭಾಗವನ್ನು ವಶಪಡಿಸಿಕೊಂಡಿತು.

ಈ ಯುದ್ಧದ ಪರಿಣಾಮವಾಗಿ 7 ಲಕ್ಷ ಪ್ಯಾಲೆಸ್ತೀನ್‌ರನ್ನು ಇಸ್ರೇಲ್‌ ಹಿಂಸಾತ್ಮಕವಾಗಿ ಹೊರದೂಡಿತು. ಸುಮಾರು 500ಕ್ಕೂ ಹೆಚ್ಚು ಪ್ಯಾಲೆಸ್ತೀನ್‌ ಪಟ್ಟಣಗಳು/ಹಳ್ಳಿಗಳು ನಾಶವಾದವು. ಇದನ್ನು ಅರಬ್ಬರು ನಖಬಾ ಎಂದು ಕರೆದರು. ಅರೇಬಿಕ್‌ ಭಾಷೆಯಲ್ಲಿ ಮಹಾ ದುರಂತ ಎಂದು ಅದರ ಅರ್ಥ. ಪ್ಯಾಲೆಸ್ತೀನ್‌ ಚರಿತ್ರೆಯಲ್ಲಿ ಇದು ಮಾಸಲಾರದ ಗಾಯವಾಗಿ ಉಳಿಯಿತು. ಈ ಯುದ್ಧದ ಪರಿಣಾಮ ಅರಬ್ಬರ ನಾಡಿನಲ್ಲಿ ಇಸ್ರೇಲ್‌ ದೇಶ ಭದ್ರವಾಯಿತು. ಹಿಂಸಾತ್ಮಕ ವಿಧಾನಗಳ ಮೂಲಕ ಇಸ್ರೇಲ್‌ ರಾಷ್ಟ್ರವಾಗಿ ನಿರ್ಮಾಣಗೊಂಡಿತು. ವಸಾಹತು ದೇಶಗಳು ಇಸ್ರೇಲ್‌ನ್ನು ಬೆಂಬಲಿಸಲು ಇನ್ನೊಂದು ಕಾರಣವಿತ್ತು. ಇಸ್ರೇಲ್‌ ರಾಷ್ಟ್ರ ಪರಿಕಲ್ಪನೆ ನೀಡಿದ ಜಿಯೋನಿಸ್ಟ್‌ ಯಹೂದಿಗಳು ಕೈಗಾರಿಕಾ ಯುಗದ ಆರಂಭದಿಂದಲೂ ಬ್ರಿಟಿಷ್‌ ವಸಾಹತುಶಾಹಿಗೆ ಬೆನ್ನೆಲುಬಾಗಿದ್ದರು. ಹಾಗಾಗಿ ಇಸ್ರೇಲ್ ರಾಷ್ಟ್ರ ಪರಿಕಲ್ಪನೆ ಮತ್ತು ಪ್ಯಾಲೆಸ್ತೀನ್‌ ರಾಷ್ಟ್ರ ಪರಿಕಲ್ಪನೆಗಳ ನಡುವಿನ ಭಿನ್ನತೆ ಮತ್ತು ಮೂಲಗಳನ್ನು ನಾವು ಗಮನಿಸಬೇಕಾಗುತ್ತದೆ.
(ಮುಂದುವರಿಯುತ್ತದೆ)

ಭಾಗ-2 ಪ್ಯಾಲೆಸ್ತೀನ್‌ ಮತ್ತು ಇಸ್ರೇಲ್‌ ರಾಷ್ಟ್ರ ಪರಿಕಲ್ಪನೆ‌ಯ ಹಿನ್ನೆಲೆಗಳೇನು?

ವಸಂತ ಕಲಾಲ್‌
+ posts

ದೆಹಲಿಯ JNU ನಲ್ಲಿ ಸಂಶೋಧನಾ ವಿದ್ಯಾರ್ಥಿ

ಪೋಸ್ಟ್ ಹಂಚಿಕೊಳ್ಳಿ:

ವಸಂತ ಕಲಾಲ್‌
ವಸಂತ ಕಲಾಲ್‌
ದೆಹಲಿಯ JNU ನಲ್ಲಿ ಸಂಶೋಧನಾ ವಿದ್ಯಾರ್ಥಿ

3 COMMENTS

  1. ಈ ಲೇಖನ ಏಕ ಪಕ್ಷದ ಪರ ಇದೇ. ಕುಟಿಲವಾಗಿದೆ. ಓದುಗರು ಜಾಗೃತೆ ಮಾಡಿ.

    • ಚರಿತ್ರೆಯನ್ನು ನೆನಪಿಸಿದ್ರೆ ಅದು ಏಕ ಪಕ್ಷೀಯ ಹೇಗಾಗುತ್ತದೆ? ನಡೆದಿರುವ ಘಟನೆಗಳು ನಡೆದಿವೆ ಅಷ್ಟೇ. ಓದುಗರ ಅರಿವು ಹೆಚ್ಚುತ್ತದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ಲೋಕಸಭೆಗೆ ಹೋಗಲಿರುವ ಸಂಸದರಿಂದ ಜನಸಾಮಾನ್ಯರು ನಿರೀಕ್ಷಿಸುವುದೇನು?

ಜನರನ್ನು ಅದರಲ್ಲೂ ಸಾಮಾನ್ಯರನ್ನು ನಿಕೃಷ್ಟರಂತೆ ಕಾಣುವ ಅಥವಾ ಇವರೇನು ಮಾಡಿಯಾರು ಎಂಬ...

ಪ್ರಜ್ವಲ್ ಪ್ರಕರಣ | ʼನಿಷ್ಪಕ್ಷಪಾತ ತನಿಖೆ‌ ಆಗಲಿ, ನಾವೆಲ್ಲ ನಿಮ್ಮೊಂದಿಗಿದ್ದೇವೆʼ ಎಂದು ಹೇಳುವ ಅಗತ್ಯವಿದೆ

"ಯಾವುದೇ ಪೂರ್ವಗ್ರಹವಿಲ್ಲದೆ ನಿಷ್ಪಕ್ಷಪಾತ ತನಿಖೆ‌ ಆಗಲಿ... ನಾವೆಲ್ಲ ನಿಮ್ಮೊಂದಿಗೆ ಇರುತ್ತೇವೆ" ಎಂದು...

ಸಾಹಿತ್ಯ ಚಿಂತನ-ಮಂಥನ | ವೈದೇಹಿ ಸಮಗ್ರ ಸಾಹಿತ್ಯವನ್ನು ಹೊಸ ಕಣ್ಣಿನಲ್ಲಿ ನೋಡುವ ಪ್ರಯತ್ನ

ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯಲೋಕದ ಹಿರಿಯ, ಸೂಕ್ಷ್ಮ ಬರಹಗಾರರಾದ...

ಪ್ರಚಾರಕ್ಕೆ ತೆರೆ ಬಿದ್ದ ನಂತರವೂ ನಡೆದಿದೆ ಮತಬೇಟೆಯ ಬಕಧ್ಯಾನ!

ಚುನಾವಣಾ ಪ್ರಚಾರಕ್ಕೆ ಬುಧವಾರ ಸಂಜೆಯೇ ತೆರೆ ಬಿದ್ದಿದೆ. ಆದರೂ ಮತದಾನ ಮುಗಿಯುವ...