ಮೊಬೈಲ್ ಗೀಳಿನಿಂದ ಹೊರಬಂದು ಚೆನ್ನಾಗಿ ಓದಬೇಕೆಂದು ಪೋಷಕರು ಬುದ್ದಿ ಹೇಳಿದ್ದನ್ನು ಸಹಿಸದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಟ್ಟಾವಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ 15 ವರ್ಷದ ಬಾಲಕ ಲೋಕೇಶ್ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಲೋಕೇಶ್ ಗೌರಿಬಿದನೂರು ನಗರದ ಎಸ್ಇಎಸ್ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲೆಯಿಂದ ಬಂದ ಕೂಡಲೇ ಮೊಬೈಲ್ ಹಿಡಿದು, ಅದರಲ್ಲೇ ತಲ್ಲೀನನಾಗುತ್ತಿದ್ದ. ಯಾವಾಗಲೂ ವಿಡಿಯೋ ಗೇಮ್ ಆಡುವುದರಲ್ಲೇ ಕಾಲ ಕಳೆಯುತ್ತಿದ್ದ. ಆತನಿಗೆ ಮೊಬೈಲ್ ಬಳಸದಂತೆ ಹಲವು ಬಾರಿ ಬುದ್ದಿ ಹೇಳಿದ್ದರು.
ಅದೇ ರೀತಿ, ಭಾನುವಾರ ರಜೆ ಇದ್ದದ್ದರಿಂದ ಆತ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದ. ಹೀಗಾಗಿ, ಪೋಷಕರು ಆತನಿಗೆ ಮೊಬೈಲ್ ಬಳಸದೆ, ಓದಿನ ಕಡೆ ಗಮನಕೊಡು ಎಂದು ಬುದ್ದಿ ಹೇಳಿದ್ದಾರೆ. ಇದರಿಂದ ಬೇಸರಗೊಂಡ ಲೋಕೇಶ್ ತಮ್ಮ ಜಮೀನಿನ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೌರಿಬಿದನೂರು ಆಸ್ಪತ್ರೆಗೆ ಹಸ್ತಾಂತರಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.