ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲು ಜಾತಿ ಗಣತಿ ಅಗತ್ಯ, ಕಾಲವೂ ಕೂಡಿಬಂದಿದೆ

Date:

Advertisements
ಕರ್ನಾಟಕದಲ್ಲಿ ಅತ್ಯಂತ ಪ್ರಭಾವಿ ಜಾತಿಗಳಾಗಿರುವ ಲಿಂಗಾಯತರು ಮತ್ತು ಒಕ್ಕಲಿಗರು ಜಾತಿ ಗಣತಿ ಯನ್ನು ವಿರೋಧಿಸುತ್ತವೆ. ಈ ಸಮುದಾಯಗಳಿಗೆ ರಾಜಕೀಯವಾಗಿ ದೊರೆತಿರುವ ಪ್ರಾತಿನಿಧ್ಯವು ಅವರ ಜನಸಂಖ್ಯೆಗೂ ಹಲವು ಪಟ್ಟು ಹೆಚ್ಚಿನದಾಗಿದೆ. ಹಲವು ದಶಕಗಳ ಹಿಂದೆಯೇ ಜಾತಿ ಗಣತಿಯನ್ನು ನಡೆಸಬೇಕಿತ್ತು. ಅದು ಆಗಲಿಲ್ಲ. ಈಗ ಭಾರತದ ಪ್ರಜಾಪ್ರಭುತ್ವವನ್ನು ಆಳವಾಗಿ ಬೇರೂರಿಸಬೇಕಾದ ಜರೂರು ಹೆಚ್ಚಾಗಿರುವಾಗ ಜಾತಿ ಗಣತಿಯನ್ನು ನಡೆಸಲು ಕಾಲ ಪಕ್ವವಾಗಿದೆ.

ಪ್ರತಿಪಕ್ಷಗಳ ಕೂಟ ‘ಇಂಡಿಯಾ’ದ ಸದಸ್ಯ ಪಕ್ಷವಾದ ಜನತಾದಳ(ಯುನೈಟೆಡ್)ನ ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಕ್ಟೋಬರ್ 2ರಂದು ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು. ಅದರಂತೆ ಬಿಹಾರದಲ್ಲಿ ಶೇ.63ಕ್ಕೂ ಹೆಚ್ಚು ಜನರು ವಿವಿಧ ಹಿಂದುಳಿದ ಜಾತಿಗಳಿಗೆ ಸೇರಿದ್ದು, ಶೇ.15 ಜನರು ಮೇಲು ಎನ್ನುವ ಜಾತಿಗಳಿಗೆ ಸೇರಿದ್ದಾರೆ. ಅದಾದ ಕೆಲವೇ ದಿನಗಳ ನಂತರ, ಅಂದರೆ ಅಕ್ಟೋಬರ್ 9ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ತಮ್ಮ ಪಕ್ಷದ ಕಾರ್ಯಕಾರಿ ಸಮಿತಿಯು ದೇಶವ್ಯಾಪಿ ಜಾತಿ ಗಣತಿ ಮಾಡುವುದನ್ನು ಬೆಂಬಲಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ’ ಎಂದು ಪ್ರಕಟಿಸಿದರು. “ಅಂತಹ ಗಣತಿಯು ಬಡಜನರ ಅಭಿವೃದ್ಧಿಯ ಕಡೆಗೆ ಇಡುವ ಮಹತ್ವಪೂರ್ಣವಾದ ಮತ್ತು ಪ್ರಗತಿಶೀಲವಾದ ಹೆಜ್ಜೆಯಾಗಲಿದೆ” ಎಂದೂ ಹೇಳಿದರು. ಈ ಪ್ರತಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಆಯೋಗವು 2015ರಲ್ಲಿ ನಡೆಸಿದ್ದ ಜಾತಿ ಸಮೀಕ್ಷೆಯ ವರದಿಯನ್ನು ಸದ್ಯದಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಪ್ರಕಟಿಸಿದರು.

ಈ ಘಟನೆಗಳ ಸಾಂದರ್ಭಿಕತೆಯು ಮಹತ್ವದ್ದಾಗಿದ್ದು, ಪ್ರತಿ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು, ಬಿಜೆಪಿ ಮತ್ತು ಅನೇಕ ಸಣ್ಣ ಪಕ್ಷಗಳ ಕೂಟವಾದ ಎನ್‌ಡಿಎಗೆ ಜಾತಿ ಆಧರಿತ ರಾಜಕೀಯದಾಟದ ಮೊದಲ ದಾಳವನ್ನು ಉರುಳಿಸುವ ಮೂಲಕ ಸವಾಲು ಹಾಕಿವೆ. ಈ ಮೂಲಕ 2024ರ ಚುನಾವಣೆಗೆ ಮುನ್ನುಡಿ ಬರೆಯಲಾಗಿದೆ.

ಜಾತಿ ಗಣತಿ ಮಾಡಬೇಕೆಂಬ ‘ಇಂಡಿಯಾ’ ಕೂಟದ ಈ ಸವಾಲಿಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ಪ್ರತಿಪಕ್ಷಗಳು ಜನರನ್ನು ಜಾತಿಯ ನೆಲೆಯಲ್ಲಿ ಒಡೆಯುವ ಘೋರ ಅಪರಾಧವನ್ನು” ಮಾಡುತ್ತಿವೆ ಮತ್ತು “ಹಿಂದುಗಳನ್ನು ವಿಭಜಿಸುತ್ತಿವೆ” ಎಂದು ಆರೋಪಿಸಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ದಾಳ ಮತ್ತು ಅದಕ್ಕೆ ಮೋದಿಯ ಪ್ರತಿಕ್ರಿಯೆಗಳೆರಡೂ ಸುದೀರ್ಘ ಕುಸ್ತಿ ಪಂದ್ಯಾವಳಿಯ ಆರಂಭದ ಮೊದಲ ಪಟ್ಟುಗಳಾಗಿವೆ. ಈ ಪಂದ್ಯಾಟ 2024ರ ಲೋಕಸಭೆ ಚುನಾವಣೆಯವರೆಗೂ ಮುಂದುವರೆಯಲಿದೆ.

Advertisements

ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿ ಮಾಡಬೇಕೆಂಬ ಬೇಡಿಕೆ ಇಂದು ನೆನ್ನೆಯದೇನಲ್ಲ. ಹಿಂದುಳಿದ ಜಾತಿಗಳು ಆಗಿಂದಾಗ್ಗೆ ಈ ಬೇಡಿಕೆಯನ್ನು ಮಂಡಿಸುತ್ತಲೇ ಬಂದಿವೆ ಹಾಗೂ ಬೇಡಿಕೆ ಬಂದ ಬೆನ್ನಲ್ಲೇ ಮೇಲು ಎಂಬ ಜಾತಿಗಳು ಇದನ್ನು ವಿರೋಧಿಸುತ್ತಲೇ ಇವೆ. ಈ ಗಣತಿ ನಡೆದಲ್ಲಿ ದೇಶದ ಜಾತಿ ಸಂರಚನೆಯ ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳ ಸಂಗ್ರಹ ಸಾಧ್ಯವಾಗುತ್ತದೆ. ಜಾತಿ ಗಣತಿಯು ಒದಗಿಸುವ ಮಾಹಿತಿಯು ಲಭ್ಯವಿರುವ ಸಂಪನ್ಮೂಲವನ್ನು ಕೆಲವೇ ಜಾತಿಗಳಿಗೆ ಸೀಮಿತಗೊಳಿಸದೆ, ಎಲ್ಲ ಸಮುದಾಯಗಳ ಜನರಿಗೆ ಸಮಾನವಾಗಿ ಹಂಚಿಕೆ ಮಾಡುವಂತಹ ಕಲ್ಯಾಣ ಯೋಜನೆಗಳನ್ನು ರೂಪಿಸಲು ರಾಜ್ಯಗಳಿಗೆ ನೆರವು ನೀಡುತ್ತವೆ. 1931ರ ಜನಗಣತಿಯಲ್ಲಿ ಜಾತಿಯ ಮಾಹಿತಿಯನ್ನು ಸಂಗ್ರಹಣೆ ಮಾಡಿದ್ದ ಭಾರತವು, ಆ ನಂತರದ ವರ್ಷಗಳಲ್ಲಿ ಕೇವಲ ಊಹಾತ್ಮಕ ಅಂದಾಜು ಸಂಖ್ಯೆಗಳನ್ನು ಆಧರಿಸಿ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ವಾಸ್ತವದಲ್ಲಿ ಕಳೆದ 90 ವರ್ಷಗಳಲ್ಲಿ ಜಾತಿಯ ಅಂಕಿ-ಸಂಖ್ಯೆಗಳು ಗಣನೀಯವಾಗಿ ಬದಲಾವಣೆಯಾಗಿವೆ. 2011ರಲ್ಲಿ ನಡೆಯಬೇಕಿದ್ದ ಜನಗಣತಿಯ ಜೊತೆಜೊತೆಗೇ ಜಾತಿ ಗಣತಿಯನ್ನೂ ನಡೆಸುವ ಸಾಧ್ಯತೆಗಳ ಕುರಿತೂ ಚರ್ಚೆ ನಡೆದಿದ್ದವು.

ಇದನ್ನು ಓದಿದ್ದೀರಾ?: ʼಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಬಲಾಢ್ಯರ ಲಾಬಿಯಿಂದ ರಕ್ಷಿಸಿʼ

ಈ ವಿಷಯ ಈಗ ಎಲ್ಲರ ಗಮನ ಸೆಳೆದಿರುವುದರಿಂದ, 2010ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ನಡೆದಿದ್ದ “ಜಾತಿ ಗಣತಿ: ಒಳಗೊಳ್ಳುವ ಭಾರತದ ಕಡೆಗೆ” ಎಂಬ ವಿಚಾರಸಂಕಿರಣದ ಅಂಶಗಳ ಕಡೆಗೆ ಗಮನ ನೀಡಲು ಇದು ಸಕಾಲ ಎನಿಸುತ್ತದೆ. ಆಗ ನಾನು ಅಲ್ಲಿ ಸಾಮಾಜಿಕ ಹೊರಗಿಡುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕನಾಗಿದ್ದು, ನಮ್ಮ ವಿಭಾಗದ ಮೂಲಕ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಆ ಸಂಕಿರಣದಲ್ಲಿ ಭಾಗವಹಿಸಿದ್ದ ನಾಡಿನ ಪ್ರಮುಖ ಸಮಾಜ ವಿಜ್ಞಾನಿಗಳಾದ ಯೋಗೇಂದ್ರ ಯಾದವ್, ಸುಖದೇವ್ ಥೋರಟ್, ಡಿ.ಎಲ್. ಶೇಠ್, ಸತೀಶ್ ದೇಶಪಾಂಡೆ, ಇಮ್ತಿಯಾಜ್ ಅಹಮದ್, ವಲೇರಿಯನ್ ರೋಡ್ರಿಗಸ್, ನ್ಯಾಯಮೂರ್ತಿ ರವಿವರ್ಮ ಕುಮಾರ್, ನಿವೃತ್ತ ಜನಗಣತಿ ಆಯುಕ್ತ ಮತ್ತು ರೆಜಿಸ್ಟ್ರಾರ್ ಜನರಲ್ ಡಾ. ಎಂ. ವಿಜಯನ್ ಉನ್ನಿ ಮೊದಲಾದವರು ಪುರಾವೆ ಆಧರಿತ ಸಾಮಾಜಿಕ ನೀತಿಗಳನ್ನು ರೂಪಿಸುವಲ್ಲಿ ಜಾತಿಗಣತಿಯ ಅಂಕಿ-ಸಂಖ್ಯೆಗಳ ಕೊಡುಗೆ ಅತ್ಯಂತ ಮಹತ್ವದ್ದು ಎಂದು ಪ್ರತಿಪಾದಿಸಿದ್ದರು.

ಜಾತಿ ಗಣತಿಯಿಂದ ಉದ್ಭವಿಸಬಹುದಾದ ಪ್ರಮುಖ ಪ್ರಶ್ನೆಗೆ ಉತ್ತರವನ್ನೂ ಜನರ ಮುಂದಿಟ್ಟರು. ಪ್ರಶ್ನೆ ಏನೆಂದರೆ, ಜಾತಿ ಗಣತಿಯು ಜಾತಿ ಪ್ರಜ್ಞೆಯನ್ನು ಹೆಚ್ಚಿಸುತ್ತದೆಯೋ ಅಥವಾ ಜಾತಿಭೇದವನ್ನು ಕಡಿಮೆ ಮಾಡುತ್ತದೆಯೋ? ಜಾತಿಗಣತಿಯ ಟೀಕಾಕಾರರು ಈ ಗಣತಿಯು ಜನರಿಗೆ ತಮ್ಮ ಜಾತಿ ಕುರಿತಾದ ಅರಿವನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ನಮ್ಮ ಶ್ರೇಣೀಕೃತ ಸಮಾಜದ ಬಿರುಕುಗಳನ್ನು ಶಾಶ್ವತಗೊಳಿಸುತ್ತದೆ ಎಂದರು. ಆದರೆ, ಸಮ್ಮೇಳನದಲ್ಲಿ ಭಾಗವಹಿಸಿದವರು ಜಾತಿ ಗಣತಿಯು ಜಾತಿ ಪ್ರಜ್ಞೆಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ವಾದಿಸಿದರು.

ಇದು ವಿರೋಧಾಭಾಸದಂತೆ ಕಾಣುತ್ತದೆ. ಆದರೆ, ಸಮ್ಮೇಳನದ ಸಾರಾಂಶ ಟಿಪ್ಪಣಿಯಲ್ಲಿ ಹೇಳಿದ್ದಂತೆ, “ಭಾರತದಲ್ಲಿ ತಮ್ಮ ಜಾತಿ ಅಥವಾ ಸಮುದಾಯದ ಗುರುತು ಅರಿಯದಂತೆ ಇರುವ ಜನಸಮುದಾಯದ ಪ್ರಮಾಣ ಅತ್ಯಂತ ಪುಟ್ಟದಾಗಿದ್ದು, ಉಳಿದಂತೆ ಎಲ್ಲರಿಗೂ ತಾವು ಯಾವ ಸಮುದಾಯಕ್ಕೆ ಸೇರಿದವರು ಎನ್ನುವುದು ತಿಳಿದಿದೆ. ಹಾಗಾಗಿ ಜಾತಿ ಜನಗಣತಿಯು ಜಾತಿ ಪ್ರಜ್ಞೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲ” ಎನ್ನುವುದು ಆ ಎಲ್ಲ ವಾದಗಳ ಹಿಂದಿನ ಕಾರಣವಾಗಿತ್ತು. ಜಾತಿಯನ್ನು ಗುರುತಿಸದಿರುವ ‘ಉದಾತ್ತತೆಯನ್ನು’ ಕುರಿತೂ ಚರ್ಚೆ ಮಾಡಿದ ಸಮ್ಮೇಳನದಲ್ಲಿ ದೇಶಪಾಂಡೆಯವರು ‘ಜಾತಿಗಣತಿ ಮಾಡದೆ ಇರುವುದು ಜಾತಿಯನ್ನು ಮೀರಬೇಕೆಂಬ ಬಯಕೆಯನ್ನು ಸೋಲಿಸುತ್ತದೆ. ‘ಜಾತಿ ಕುರಿತಾದ ಕುರುಡುತನ’ವನ್ನು ನೇರವಾಗಿ ತಿರಸ್ಕರಿಸಿ ಜಾತಿ ಗಣತಿಯ ಮೂಲಕ ಹೊಸ ಆರಂಭಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಬಲವಾಗಿ ವಾದಿಸಿದರು.

OIP 53

ಜಾತಿಗಣತಿ ನಡೆದಿಲ್ಲದಿರುವ ಕಾರಣ ನಂಬಲರ್ಹವಾದ ಸಂಖ್ಯೆಗಳಿಲ್ಲದೆ, ನ್ಯಾಯಾಲಯಗಳಲ್ಲಿ ಮೀಸಲಾತಿ ಸಂಬಂಧಿ ಪ್ರಕರಣಗಳು ಬಂದಾಗ ನ್ಯಾಯದಾನ ಮಾಡುವಲ್ಲಿ ಸಂಕಷ್ಟ ಎದುರಾಗುತ್ತಿದೆ. ಅನೇಕ ಸಮುದಾಯಗಳು ತಮ್ಮನ್ನು ಪರಿಶಿಷ್ಟ ಜಾತಿಗೆ, ಪರಿಶಿಷ್ಟ ಪಂಗಡಕ್ಕೆ ಇಲ್ಲವೇ ಹಿಂದುಳಿದ ಜಾತಿಗೆ ಸೇರಿಸಬೇಕು ಎಂಬ ತೀವ್ರವಾದ ಬೇಡಿಕೆಯನ್ನು ಮುಂದು ಮಾಡುತ್ತಿರುವುದರ ಹಿನ್ನೆಲೆಯಲ್ಲಿ ಈ ಬೇಡಿಕೆಗಳ ಕುರಿತು ತೀರ್ಮಾನ ಕೈಗೊಳ್ಳಲು ಸಾಮಾಜಿಕ-ಆರ್ಥಿಕ ಮಾಹಿತಿ ಒಳಗೊಂಡ ಜಾತಿ ಗಣತಿಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಈ ಮೇಲೆ ಹೇಳಿರುವ ಸಮ್ಮೇಳನವನ್ನು ಸಂಘಟಿಸಿ ಇಂದಿಗೆ 13 ವರ್ಷಗಳು ಸಂದು ಹೋಗಿವೆ. ಮೇಲು ಎಂದು ಕರೆದುಕೊಳ್ಳುವ ಜಾತಿಗಳು ಇಂದಿಗೂ ಜಾತಿ ಗಣತಿಯನ್ನು ವಿರೋಧಿಸುತ್ತಲೇ ಬಂದಿವೆ. ಕರ್ನಾಟಕದಲ್ಲಿ ಅತ್ಯಂತ ಪ್ರಭಾವಿ ಜಾತಿಗಳಾಗಿರುವ ಲಿಂಗಾಯತರು ಮತ್ತು ಒಕ್ಕಲಿಗರು ಜಾತಿ ಗಣತಿಯನ್ನು ವಿರೋಧಿಸುತ್ತವೆ. ಈ ಸಮುದಾಯಗಳಿಗೆ ರಾಜಕೀಯವಾಗಿ ದೊರೆತಿರುವ ಪ್ರಾತಿನಿಧ್ಯವು ಅವರ ಜನಸಂಖ್ಯೆಗೂ ಹಲವು ಪಟ್ಟು ಹೆಚ್ಚಿನದಾಗಿದೆ. ಹಲವು ದಶಕಗಳ ಹಿಂದೆಯೇ ಜಾತಿ ಗಣತಿಯನ್ನು ನಡೆಸಬೇಕಿತ್ತು. ಅದು ಆಗಲಿಲ್ಲ. ಈಗ ಭಾರತದ ಪ್ರಜಾಪ್ರಭುತ್ವವನ್ನು ಆಳವಾಗಿ ಬೇರೂರಿಸಬೇಕಾದ ಜರೂರು ಹೆಚ್ಚಾಗಿರುವಾಗ ಜಾತಿ ಗಣತಿಯನ್ನು ನಡೆಸಲು ಕಾಲ ಪಕ್ವವಾಗಿದೆ.

(ಪ್ರೊ. ಜಾಫಟ್ ಅವರು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿದ್ದರು. ಪ್ರಸ್ತುತ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದಾರೆ.)

Capture 1
ಪ್ರೊ. ಎಸ್ ಜಾಫೆಟ್
+ posts

ನಿವೃತ್ತ ಕುಲಪತಿಗಳು, ರಾಷ್ಟ್ರೀಯ ಕಾನೂನು ಶಾಲೆಯ ಹಾಲಿ ಪ್ರಾಧ್ಯಾಪಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಸ್ ಜಾಫೆಟ್
ಪ್ರೊ. ಎಸ್ ಜಾಫೆಟ್
ನಿವೃತ್ತ ಕುಲಪತಿಗಳು, ರಾಷ್ಟ್ರೀಯ ಕಾನೂನು ಶಾಲೆಯ ಹಾಲಿ ಪ್ರಾಧ್ಯಾಪಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X