ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದರೆ ಜೈಲಿನಿಂದಲೇ ಕೆಲಸ ಮಾಡಲು ನ್ಯಾಯಾಲಯದ ಅನುಮತಿ ಪಡೆಯುವುದಾಗಿ ಆಮ್ ಆದ್ಮಿ ಪಕ್ಷ ಹೇಳಿದೆ. ಇಂದು ನಡೆದ ಪಕ್ಷದ ಸಭೆಯಲ್ಲಿ ಎಎಪಿ ಶಾಸಕರು ಕೇಜ್ರಿವಾಲ್ ಅವರನ್ನು ಕೇಂದ್ರ ಸಂಸ್ಥೆ ಬಂಧಿಸಿದರೂ ಜೈಲಿನಿಂದ ಸರ್ಕಾರವನ್ನು ನಡೆಸಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ದೆಹಲಿ ಸಚಿವೆ ಅತಿಶಿ,”ನಾವು ಜನರ ನಡುವೆ ಕೆಲಸ ಮಾಡುತ್ತಿದ್ದೇವೆ. ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಅದಕ್ಕಾಗಿಯೇ ಅವರು ಜೈಲಿಗೆ ಹೋದರೂ ಅವರು ಕೆಲಸ ಮಾಡಬೇಕು ಎಂದು ಎಲ್ಲ ಶಾಸಕರು ಇಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ದೆಹಲಿಯ ಜನರು ಅವರನ್ನು ಮುಖ್ಯಮಂತ್ರಿಯಾಗಿ ಆಗಿ ಆಯ್ಕೆ ಮಾಡಿದ್ದಾರೆ ಮತ್ತು ಅವರು ಸಿಎಂ ಆಗಿಯೇ ಉಳಿಯಬೇಕು ಎಂದು ಹೇಳಿದರು. ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ ಮತ್ತು ಸಂಪುಟ ಸಭೆಯನ್ನು ಜೈಲಿನಲ್ಲಿಯೇ ನಡೆಸಲು ಅನುಮತಿ ಕೇಳುತ್ತೇವೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ದೆಹಲಿ ವಾಯು ಮಾಲಿನ್ಯ: 4 ರಾಜ್ಯಗಳಲ್ಲಿ ತ್ಯಾಜ್ಯ ಸುಡುವುದನ್ನು ತಕ್ಷಣ ನಿಲ್ಲಿಸುವಂತೆ ಸುಪ್ರೀಂ ಆದೇಶ
ಕೇಜ್ರಿವಾಲ್ ಅವರನ್ನು ನವೆಂಬರ್ 2 ರಂದು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಕರೆದಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಅವರು ಕೇಂದ್ರ ಸರ್ಕಾರದ ಷಡ್ಯಂತ್ರದಿಂದ ತಾವು ಬಂಧನವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ನ. 2 ರಂದು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರಿಗೆ ಸೂಚಿಸಿತ್ತು. ಆದರೆ ಅಂದು ಮಧ್ಯಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಅವರು ಪಾಲ್ಗೊಳ್ಳುವುದಾಗಿ ಹೇಳಿದ್ದರು. ತಮಗೆ ನೋಟಿಸ್ ನೀಡಿರುವುದು ಕಾನೂನುಬಾಹಿರ ಹಾಗೂ ರಾಜಕೀಯ ಪ್ರೇರಿತ. ಬಿಜೆಪಿ ಕೋರಿಕೆಯಂತೆ ತನಗೆ ಸಮನ್ಸ್ ಕಳುಹಿಸಲಾಗಿದೆ ಎಂದಿದ್ದರು.
ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಲ್ಲಿ ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಿದ ನಂತರ ಅವರು ಕ್ಯಾಬಿನೆಟ್ ಹುದ್ದೆಯಿಂದ ಕೆಳಗಿಳಿದಿದ್ದರು. ಸಿಸೋಡಿಯಾ ಇನ್ನೂ ಜೈಲಿನಲ್ಲಿದ್ದಾರೆ. ಕಳೆದ ವಾರ, ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.