ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಕದನ ವಿರಾಮಕ್ಕಾಗಿ ವಿಶ್ವ ಸಂಸ್ಥೆಯಲ್ಲಿ ಸಲ್ಲಿಸಿದ್ದ ನಿರ್ಣಯದ ಪರ ಭಾರತ ಮತ ಹಾಕದೇ ಇರುವುದು ಖಂಡನೀಯ ಮತ್ತು ರಾಜ್ಯ ಸರಕಾರವು ಪ್ಯಾಲೆಸ್ತೀನ್ ಪರ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ‘ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು’ ಒಕ್ಕೂಟ ತಿಳಿಸಿದೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಇಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಆಕಾರ್ ಪಟೇಲ್, ಜಗತ್ತಿನಾದ್ಯಂತ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧ ನಿಲ್ಲಬೇಕು ಎಂದು ಕೂಗು ಗಟ್ಟಿಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಕದನ ವಿರಾಮಕ್ಕಾಗಿ ಇದ್ದ ನಿರ್ಣಯದ ಪರವಾಗಿ ಭಾರತ ಮತ ಹಾಕದೆ ಇರುವುದು ಖಂಡನೀಯ. ಮತದಾನದಿಂದ ದೂರ ಉಳಿಯುವ ಮೂಲಕ ಭಾರತ ಐತಿಹಾಸಿಕ ತಪ್ಪು ಮಾಡಿದೆ’ ಎಂದು ತಿಳಿಸಿದರು.
ಸಾಲಿಡಾರಿಟಿ ಯೂತ್ ಮೂಮೆಂಟ್ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಮಾತನಾಡಿ, ‘ಭಾರತವು ತನಗೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಪ್ಯಾಲೆಸ್ತೀನ್ ಜನರ ಸ್ವಾತಂತ್ರ್ಯಕ್ಕಾಗಿ ತನ್ನ ಬೆಂಬಲ ವ್ಯಕ್ತಪಡಿಸಿದೆ. ಅಲ್ಲಿನ ಜನರ ಮಾನವ ಹಕ್ಕುಗಳ ಪರವಾಗಿ ನಿಂತಿದೆ. ಜವಾಹರ್ ಲಾಲ್ ನೆಹರೂ, ಡಾ.ಮನೋಹನ್ ಸಿಂಗ್ ಹಾಗೂ ಇಂದಿನ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಸಹ ಪ್ಯಾಲೆಸ್ತೀನ್ ಜನರ ಹಕ್ಕುಗಳ ಪರವಾಗಿ ನಿಂತಿದ್ದಾರೆ. ಮಹಾತ್ಮ ಗಾಂಧೀಜಿಯವರು ಕೂಡ ಪ್ಯಾಲೆಸ್ತೀನ್ ಜನರ ಸ್ವಾತಂತ್ರ್ಯದ ಪರವಾಗಿ ನಿಂತಿದ್ದಾರೆ. 2023ರ ಅ.19ರಂದು ಕೂಡ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಹ ಪ್ಯಾಲೆಸ್ತೀನ್ ಜನರ ಹಕ್ಕಿನ ಪರವಾಗಿ ಹೇಳಿಕೆ ನೀಡಿದೆ’ ಎಂದರು.
Bengaluru for Justice and Peace called a Press conference on Palestine issue at Press club, Bengaluru. Labeed Shafi, President Solidarity Youth Movement, Karnataka addressed the press.#StandWithPalastine pic.twitter.com/b9PZ2RM8oN
— Solidarity Youth Movement Karnataka (@solidaritykar) November 7, 2023
‘ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ, ಪೊಲೀಸರು ಪ್ಯಾಲೆಸ್ತೀನ್ ಜನರ ಪರವಾಗಿ ನಡೆಸುತ್ತಿರುವ ಶಾಂತಿಯುತ ಸಭೆಯ ಹಕ್ಕನ್ನ ನಿರಾಕರಿಸಿದ್ದಾರೆ. ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕದಲ್ಲೂ ಈ ಬೆಳವಣಿಗೆಗಳಾಗಿವೆ. ಅಸಮರ್ಥನೀಯ ನಿರ್ಬಂಧಗಳ ಹೊರತಾಗಿಯೂ, ಕೇರಳ, ಪುಣೆ, ಕೊಯಮತ್ತೂರು, ಮುಂಬೈ, ಮತ್ತು ಹೈದರಾಬಾದ್ನಲ್ಲಿ ನೂರಾರು ಜನರು ಒಟ್ಟಾಗಿ ಪ್ಯಾಲೆಸ್ತೀನ್ ಜನರಿಗಾಗಿ ಒಂದಾಗಿದ್ದಾರೆ’ ಎಂದು ತಿಳಿಸಿದರು.
ಪ್ಯಾಲೆಸ್ತೀನ್ ಜನರಿಗಾಗಿ ಹೋರಾಟ ನಡೆಸುವ ಸಾರ್ವಜನಿಕ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಕರ್ನಾಟಕದ ಪೊಲೀಸರ ನಡೆಯು ಸಂವಿಧಾನ ವಿರೋಧಿ. ಒಂದು ಕಡೆ ಕಾಂಗ್ರೆಸ್ ನ ಹಿರಿಯ ನಾಯಕರು ಪ್ಯಾಲೆಸ್ತೀನ್ ಪರವಾಗಿ ಲೇಖನ ಬರೆಯುತ್ತಾ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇನ್ನೊಂದು ಕಡೆ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದೂರು ದಾಖಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಈ ದ್ವಂದ್ವ ನಿಲುವಿನಿಂದ ನಮಗೆ ಆಘಾತವಾಗಿದೆ. ಕರ್ನಾಟಕ ಪೊಲೀಸರ ನಡೆ ಖಂಡನೀಯ’ ಎಂದು ತಿಳಿಸಿದರು.
ಕರ್ನಾಟಕ ಪೊಲೀಸ್ ಮತ್ತು ರಾಜ್ಯ ಸರ್ಕಾರದ ಇಂತಹ ಕ್ರಮಗಳು ನಾಗರಿಕರ ಪ್ರತಿಭಟನೆಯ ಮೂಲಭೂತ ಹಕ್ಕುಗಳ ಮೇಲಿನ ದಾಳಿ ಮಾತ್ರವಲ್ಲ, ಇಸ್ರೇಲ್ ಸರ್ಕಾರ ನಡೆಸುತ್ತಿರುವ ನರಮೇಧದ ಬಗ್ಗೆ ಉದಾಸೀನತೆಯನ್ನು ಪ್ರದರ್ಶಿಸುತ್ತದೆ. ಪೊಲೀಸ್ ಇಲಾಖೆಯು ಅನೈತಿಕ ಅಧಿಕಾರವನ್ನು ದುರುಪಯೋಗ ಪಡಿಸುತ್ತಿದೆ. ಗಾಝಾದ ಜನರ ಮೇಲೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಇಸ್ರೇಲ್ನ ಸಚಿವರು ಹೇಳಿಕೆ ನೀಡಿದ್ದಾರೆ. ಪ್ಯಾಲೆಸ್ತೀನ್ ಜನರ ಹಕ್ಕುಗಳಿಗಾಗಿ ಮಾತನಾಡುವುದು ಎಲ್ಲ ಜನರ ನೈತಿಕ ಹೊಣೆಗಾರಿಕೆಯಾಗಿದೆ ಎಂದು ‘ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು’ ಒಕ್ಕೂಟ ತಿಳಿಸಿದೆ.
ತಕ್ಷಣವೇ ಕದನ ವಿರಾಮ ಘೋಷಿಸಬೇಕು, ಆಹಾರ, ನೀರು, ಔಷಧ ಮತ್ತು ಇಂಧನ ಸೇರಿದಂತೆ ಪ್ಯಾಲೆಸ್ತೀನ್ ಜನರಿಗೆ ತಕ್ಷಣ ಮಾನವೀಯ ನೆರವು ಒದಗಿಸಬೇಕು. ಪ್ಯಾಲೆಸ್ತೀನ್ಗೆ ಮಾನವೀಯ ನೆರವು ನೀಡಲು ಮತ್ತು ಕದನ ವಿರಾಮಕ್ಕೆ ಯುಎನ್ನಲ್ಲಿನ ಯಾವುದೇ ಪುಯತ್ನವನ್ನು ಭಾರತ ಸರ್ಕಾರವು ಬೇಷರತ್ತಾಗಿ ಬೆಂಬಲಿಸಬೇಕು. ಅದೇ ರೀತಿ ಮೂಲಭೂತ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದ ಹೋರಾಟಗಾರರ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ‘ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು’ ಒಕ್ಕೂಟ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ AICCTUನ ರಾಷ್ಟ್ರೀಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜಾರಿಯೋ, ಪಿಯುಸಿಎಲ್ನ ಕರ್ನಾಟಕ ರಾಜ್ಯಾಧ್ಯಕ್ಷರಾದ ಅರವಿಂದ ನಾರಾಯಣ್, ಕರ್ನಾಟಕ ಜನಶಕ್ತಿಯ ಗೌರಿ, ಯುವ ಪರಿಸರವಾದಿಗಳಾದ ನಿಶ್ಕಲಾ ಭಾಗವಹಿಸಿದ್ದರು.