ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸುವ ಭರದಲ್ಲಿ ನಾಲಗೆ ಹರಿಬಿಟ್ಟಿರುವ ಮಾಜಿ ಸಚಿವ, ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ, ‘ಸಿದ್ದರಾಮಯ್ಯ ಲೂಟಿಕೋರ, ಅವರನ್ನು ನನಗೆ ಹೋಲಿಸಬೇಡಿ. ಮಂಗ ಹಾರಿದಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ’ ಎಂದು ಹೇಳಿಕೆ ನೀಡಿದ್ದಾರೆ.
ಬರ ಅಧ್ಯಯನ ಪ್ರವಾಸದ ವೇಳೆ ಮಂಗಳವಾರ ಕುಷ್ಟಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ವೇಳೆ, ‘ಬಿಜೆಪಿಯಲ್ಲಿ ಈಶ್ವರಪ್ಪ ಸವಕಲು ನಾಣ್ಯ’ ಎಂದು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಈ ರೀತಿ ಏಕವಚನದಲ್ಲೇ ಪ್ರತಿಕ್ರಿಯೆ ನೀಡುವ ಮೂಲಕ ನಾಲಗೆ ಹರಿಬಿಟ್ಟಿದ್ದಾರೆ.
ರಾಜ್ಯ ಸರ್ಕಾರವನ್ನು ಮನಬಂದಂತೆ ಟೀಕಿಸಿದ ಈಶ್ವರಪ್ಪ, ‘ರೈತ ವಿರೋಧಿ ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಏನೂ ಇಲ್ಲ. ಇದು ಹುಚ್ಚು ದೊರೆ ಸರ್ಕಾರ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಬಿಜೆಪಿಯಲ್ಲಿ ನಾನು ಶಿಸ್ತಿನ ಸಿಪಾಯಿ. ನಮ್ಮ ನಾಯಕರು ಹೇಳಿದ್ದನ್ನು ಅರ್ಧಗಂಟೆಯಲ್ಲಿ ಪಾಲಿಸಿದೆ. ಆದರೆ, ಸಿದ್ದರಾಮಯ್ಯ ಮರದಿಂದ ಮರಕ್ಕೆ ಹಾರುವ ಮಂಗನಂತೆ. ಹಿಂದೆ ದೇವೇಗೌಡರಿಗೆ ಮೋಸ ಮಾಡಿ ಜೆಡಿಎಸ್ನಿಂದ ಹೊರಬಂದರು. ಈಗ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರನ್ನು ಏನಾದರೂ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ ನೋಡಲಿ. ಮತ್ತೆ ಬೇರೆ ಪಕ್ಷಕ್ಕೆ ಮಂಗನಂತೆ ಹೋಗುತ್ತಾರೆ. ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಮತ್ತೊಂದು ಪಕ್ಷಕ್ಕೆ ಹಾರಿ ಹೋಗುತ್ತಾರೆ’ ಎಂದು ಹರಿಹಾಯ್ದಿದ್ದಾರೆ.
‘ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಮಾತು ಯಾರೂ ಕೇಳಲ್ಲ. ಇನ್ನು ಸಚಿವರ ಮಾತು ಯಾರು ಕೇಳುತ್ತಾರೆ. ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು. ಸುರ್ಜೇವಾಲ ಹಾಗೂ ವೇಣುಗೋಪಾಲ್ ಹಾದಿ ಬೀದಿಯಲ್ಲಿ ನಿಂತು ಮಾತನಾಡದಂತೆ ತಿಳಿಸಿದ ಮೇಲೂ ಸಿದ್ದರಾಮಯ್ಯ ಮಾತನಾಡಿದರು. ಇವರದು ಪಕ್ಷದೊಳಗೆ ಏನೂ ನಡೆಯಲ್ಲ’ ಎಂದು ಅವರು ಹೇಳಿದರು.
‘ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ರಾಜ್ಯ ಸರ್ಕಾರ. ಇದಕ್ಕೆ ಕಣ್ಣು, ಕಿವಿ ಏನೂ ಇಲ್ಲ. ಇದು ಹುಚ್ಚು ದೊರೆಯ ಸರ್ಕಾರ. ಹಾಗಾಗಿ, ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಜಾರ್ಜ್ ರಾಜೀನಾಮೆ ಕೊಡಬೇಕು’ ಎಂದು ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು.