ಪೌರ ಕಾರ್ಮಿಕರಿಗೆ ನಿವೇಶನ, ವಸತಿ ಸೇರಿದಂತೆ ಸರ್ಕಾರದಿಂದ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್ ಗೌಡ ಭರವಸೆ ನೀಡಿದರು.
ಮಡಿಕೇರಿ ನಗರಸಭೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ‘ಪೌರ ಕಾರ್ಮಿಕರ’ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಪೌರಕಾರ್ಮಿಕರಿಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಅವುಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು. ತಾವು ಕರ್ತವ್ಯ ಸಂದರ್ಭದಲ್ಲಿ ಸೂಕ್ತ ರಕ್ಷಣಾ ಸಾಮಾಗ್ರಿಗಳನ್ನು ಬಳಸಿ ಕಾರ್ಯ ನಿರ್ವಹಿಸಬೇಕು. ಪೌರಕಾರ್ಮಿಕರು ರಜೆ ಕೇಳಿದ್ದಲ್ಲಿ ನೀಡಬೇಕು. ಯಾವುದೇ ಕಾರಣಕ್ಕೂ ಸತಾಯಿಸಬಾರದು. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದರ ಜೊತೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು” ಎಂದು ಸಲಹೆ ನೀಡಿದರು.
“ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುವವರಿಂದ ದಂಡ ವಸೂಲಿ ಮಾಡಬೇಕು. ಈ ರೀತಿ ಆದಲ್ಲಿ ಪ್ರತಿಯೊಬ್ಬರೂ ಎಚ್ಚರವಹಿಸಲು ಸಾಧ್ಯ. ನಗರಸಭೆಯಲ್ಲಿ ಓಬಳಿಯಂತಹ ಪೌರಕಾರ್ಮಿಕರು ನಾಲ್ಕು ದಶಕಗಳ ಕಾಲ ದುಡಿದಿದ್ದಾರೆ. ಅವರ ಆರೋಗ್ಯಕ್ಕೆ ಅಗತ್ಯ ನೆರವು ನೀಡಬೇಕು” ಎಂದು ಹೇಳಿ ಇದೇ ವೇಳೆ ಓಬಳಿ ಅವರಿಗೆ ವೈಯಕ್ತಿಕವಾಗಿ ₹10 ಸಾವಿರ ನಗದು ನೀಡಿದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, “ಪೌರಕಾರ್ಮಿಕರು ಮಡಿಕೇರಿ ನಗರದ ಕಿರೀಟವಿದ್ದಂತೆ. ಪೌರಕಾರ್ಮಿಕರು ಒಂದು ದಿನ ಸ್ವಚ್ಛತಾ ಕಾರ್ಯ ಕೈಗೊಳ್ಳದಿದ್ದಲ್ಲಿ ಊಹಿಸಿಕೊಳ್ಳುವುದೂ ಕಷ್ಟಸಾಧ್ಯ. ಆದ್ದರಿಂದ ಪೌರಕಾರ್ಮಿಕರನ್ನು ಗೌರವಿಸಬೇಕು” ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, “ನಗರ, ಪಟ್ಟಣಗಳು ಸ್ವಚ್ಛವಾಗಿರಲು ಪೌರಕಾರ್ಮಿಕರ ಕರ್ತವ್ಯ ನಿಷ್ಠೆ ಹೆಚ್ಚಿನದ್ದಾಗಿದೆ. ಮಡಿಕೇರಿ ನಗರದಲ್ಲಿ ಉತ್ತಮ ವಾತಾವರಣ ಇರಲು ಪೌರಕಾರ್ಮಿಕರ ಪಾತ್ರ ಹೆಚ್ಚಿನದ್ದಾಗಿದೆ. ದಸರಾ ಸಮಯದಲ್ಲಿ ಪೌರಕಾರ್ಮಿಕರು ಹೆಚ್ಚಿನ ಕೆಲಸ ನಿರ್ವಹಿಸಿದ್ದಾರೆ. ಮುಂದಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಗೌರವಿಸುವಂತಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ವೀರವನಿತೆ ಒನಕೆ ಓಬವ್ವ ಜಯಂತಿ; ಪೂರ್ವಭಾವಿ ಸಭೆ
ನಗರಸಭೆ ಸದಸ್ಯರುಗಳಾದ ಉಮೇಶ್ ಸುಬ್ರಮಣಿ, ಚಿತ್ರಾವತಿ, ಕಲಾವತಿ, ಉಷಾ, ಶ್ವೇತಾ, ಸಬಿತಾ, ಅರುಣ್ ಶೆಟ್ಟಿ, ಶಾರದ, ಚಂದ್ರಶೇಖರ್, ಪೌರ ಸೇವಾ ನೌಕರರ ಜಿಲ್ಲಾಧ್ಯಕ್ಷ ಪಿ ಕೆ ಸತೀಶ್, ತಾಲೂಕು ಅಧ್ಯಕ್ಷ ಎಸ್ ಕೆ ಸತ್ಯನಾರಾಯಣ ಸೇರಿದಂತೆ ಇತರರು ಇದ್ದರು.