ಒಂಟಿ ಸಲಗವೊಂದು ಕಾರ್ಮಿಕ ಮಹಿಳೆಯರ ಮೇಲೆ ದಾಳಿ ಮಾಡಿದ್ದು, ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹೆಡದಾಳು ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಮೀನಾ ಎಂಬವರು ಮೃತಪಟ್ಟಿದ್ದರು. ಇನ್ನಿಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಹೆಡದಾಳು ಗ್ರಾಮವು ಆಲ್ದೂರು ವಲಯ ಅರಣ್ಯ ವ್ಯಾಪ್ತಿಯಲ್ಲಿದೆ. ಕೆಲಸಕೆಂದು ತೋಟಕ್ಕೆ ತೆರಳುತ್ತಿದ್ದಾಗ ಆನೆ ದಾಳಿ ಮಾಡಿದೆ. ಮೀನಾ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಲ್ಡೂರು ವ್ಯಾಪ್ತಿಯಲ್ಲಿ ಕಾಡಾನೆಗಳು ಪದೇ-ಪದೇ ದಾಳಿ ಮಾಡುತ್ತಲೇ ಇವೆ. ಜೀವ ತೆಗೆಯುತ್ತಿವೆ. ಬೆಳೆಗಳನ್ನು ನಾಶ ಮಾಡುತ್ತಿವೆ. ರೈತರು, ಕಾರ್ಮಿಕರು ಆತಂಕದಲ್ಲಿ ಬದುಕುತ್ತಿದ್ದಾರೆ. ಆನೆಯನ್ನು ಸೆರೆಹಿಡಿಯಬೇಕೆಂದು ಮನವಿ ಮಾಡಿದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.