ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಜಗತ್ತಿಗೆ ಮಾದರಿಯಾದರೇ, ಇಡೀ ಜಗತ್ತಿನ ಶೋಷಿತ ವರ್ಗದ, ಕಾರ್ಮಿಕರ ಹಾಗೂ ಬಡವರ ವಿಮೋಚನೆಗಾಗಿ ನಡೆದ ಸಮಾಜವಾದಿ (ನವೆಂಬರ್) ಕ್ರಾಂತಿ ನಡೆದ ಮೇಲೆ ಕಾರ್ಮಿಕರ ರಾಜ್ಯ ಸಮಾಜವಾದ ವ್ಯವಸ್ಥೆ ಈಡೀ ಇಡೀ ಜಗತ್ತಿಗೆ ಮಾದರಿಯಾಗಿತ್ತು ಎಂದು ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಸಮಾಜವಾದದ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
“ಐತಿಹಾಸಿಕ ವ್ಯಕ್ತಿಗಳಾದ ಬುದ್ಧ, ಬಸವಣ್ಣ, ಗಾಂಧಿಜಿ, ಅಂಬೇಡ್ಕರ್ ಕಾರ್ಲ್ ಮಾರ್ಕ್ಸ್ ಹಾಗೂ ಸಮಾಜವಾದದ ಪಿತಾಮಹ ಲೆನಿನ್ ಇಂತಹ ಹಲವಾರು ವ್ಯಕ್ತಿಗಳು ಸಮಾಜದ ತುಳಿತಕ್ಕೊಳಗಾದವರ ಪರ ದ್ವನಿ. ಸಮಾಜಮುಖಿಯಾಗಿ ಕೆಲಸ ಮಾಡಿದ್ದರಿಂದ ಅವರ ವ್ಯಕ್ತಿತ್ವ ಇಂದು ಮಾದರಿಯಾಗಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಬೇಕಾದರೆ ವ್ಯಕ್ತಿ ಸಮಾಜ ಮುಖಿವಾಗಿ ಜೀವನ ಮಾಡಿದಾಗ ಮಾತ್ರ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೀಳರಿಮೆ ಮನೋಭಾವದಿಂದ ಹೊರಗೆ ಬರಬೇಕಾಗಿದೆ. ದೇಶದಲ್ಲಿ ಎಲ್ಲ ಧರ್ಮಿಯರು ಚೆನ್ನಾಗಿರಬೇಕೆಂದರೆ, ಭಾರತೀಯರ ಗ್ರಂಥ ಭಾರತದ ಸಂವಿಧಾನವನ್ನ ರಕ್ಷಿಸಬೇಕಾಗಿದೆ. ಎಲ್ಲ ಧರ್ಮೀಯ ಗ್ರಂಥಗಳು ಕೂಡ ಆ ಧರ್ಮಿಯರು ಹೇಗೆ ಜೀವಿಸಬೇಕೆಂಬುದು ಹೇಳುತ್ತವೆ. ಆದರೆ, ಭಾರತ ಸಂವಿಧಾನ ಮಾತ್ರ ಎಲ್ಲ ಧರ್ಮಿಯರು ಹೇಗೆ ಜೀವಿಸಬೇಕೆಂಬುದಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ತುಕಾರಾಂ ಚಂಚಲಿಕರ, ಹಿರಿಯ ಸಮಾಜ ಚಿಂತಕರಾದ ಅಪ್ಪಾಸಾಹೇಬ ಯರನಾಳ, ಪ್ರಗತಿಪರ ಚಿಂತಕರಾದ ಸಿ.ಎ.ಗಂಟೆಪ್ಪಗೋಳ, ಜಿ.ಜಿ.ಗಾಂಧಿ, ಲಕ್ಷ್ಮಣ್ ಹಂದ್ರಾಳ, ಬಾಳು ಜೇವೂರ, ಹನುಮಂತ ಮಮದಾಪುರ್ ಶ್ರೀ.ಮಿಲಿಂದ್ ಚಂಚಲಕರ, ಎಚ್.ಬಿ. ಚಿಂಚೋಳಿ, ರಾಜು ಮಠ, ಶಂಕರ್ ಆಲ್ಯಾಳ, ರವೀಂದ್ರ ಹಳಿಂಗಳಿ, ಎಸ್.ಎಸ್.ಕಟ್ಟಿ ಇನ್ನಿತರರು ಭಾಗವಹಿಸಿದ್ದರು.