ಜನಸಂಖ್ಯಾ ನಿಯಂತ್ರಣದಲ್ಲಿ ಮಹಿಳಾ ಶಿಕ್ಷಣದ ಪಾತ್ರದ ಕುರಿತು ರಾಜ್ಯ ವಿಧಾನಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.
”ನಾನು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ನನ್ನ ಪ್ರತಿಕ್ರಿಯೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಮಹಿಳಾ ಶಿಕ್ಷಣದ ಬಗ್ಗೆ ಮಾತನಾಡಿದ್ದೇನೆ. ನನ್ನ ಹೇಳಿಕೆಗಳು ಯಾರಿಗಾದರೂ ನೋವುಂಟುಮಾಡಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
”ನಾನು ಇದನ್ನು ಸ್ಪಷ್ಟಪಡಿಸುತ್ತೇನೆ. ನಾನು ಮಾತನಾಡಿರುವುದು ಲೈಂಗಿಕ ಶಿಕ್ಷಣದ ಕುರಿತು. ಈ ವಿಚಾರವಾಗಿ ಜನರಲ್ಲಿ ಹಿಂಜರಿಕೆ ಇದೆ. ಆದರೆ ಇದನ್ನು ಶಾಲೆಗಳಲ್ಲಿ ಕಲಿಸಲಾಗುತ್ತದೆ. ಜನಸಂಖ್ಯೆ ನಿಯಂತ್ರಿಸಲು ಕಾರ್ಯತಃ ಏನು ಮಾಡುವ ಅಗತ್ಯವಿದೆ ಎಂಬುದರ ಬಗ್ಗೆ ಹೇಳಿದ್ದೇನೆ. ಇದನ್ನು ತಪ್ಪಾದ ರೀತಿಯಲ್ಲಿ ತೆಗೆದುಕೊಳ್ಳಬಾರದು” ಎಂದು ನಿತೀಶ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ನೆನಪು | ಡಿ.ಬಿ ಚಂದ್ರೇಗೌಡ ಎಂಬ ದಾರದಹಳ್ಳಿಯ ಧೀಮಂತ
ಬಿಹಾರದ ಜನಸಂಖ್ಯಾ ಫಲವತ್ತತೆ ದರವು ಹೇಗೆ 4.2 ರಿಂದ 2.9 ಕ್ಕೆ ಇಳಿದಿದೆ ಎಂಬುದನ್ನು ಒತ್ತಿಹೇಳುವಾಗ ಮಹಿಳೆಯರ ಶಿಕ್ಷಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ವಿವಾದಾತ್ಮಕ ಹೇಳಿಕೆ ನಂತರ ಬುಧವಾರ ಬಿಜೆಪಿ ಶಾಸಕರ ಪ್ರತಿಭಟನೆಯ ನಡುವೆಯೇ ನಿತೀಶ್ ಕುಮಾರ್ ಅವರಿಗೆ ವಿಧಾನಸಭೆ ಪ್ರವೇಶ ನಿರಾಕರಿಸಲಾಗಿತ್ತು. ನಂತರ ಪ್ರವೇಶಿಸಲು ಯಶಸ್ವಿಯಾದರು.
‘ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರು ಶಿಕ್ಷಣ ಹೊಂದಿರುವುದು ಮಹತ್ವದ ಪಾತ್ರವಹಿಸುತ್ತದೆ. ಒಬ್ಬ ಸುಶಿಕ್ಷಿತ ಮಹಿಳೆಯು ಪತಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ನಿರ್ಬಂಧ ಹೇರಬಲ್ಲವಳಾಗಿರುತ್ತಾಳೆ. ಜನನ ಪ್ರಮಾಣ ಹೆಚ್ಚಳಕ್ಕೆ ಪತಿಯ ಕೃತ್ಯವೇ ಕಾರಣವಾಗುತ್ತದೆ. ಶಿಕ್ಷಣ ಪಡೆದ ಮಹಿಳೆಯು ಪತಿಯನ್ನು ನಿರ್ಬಂಧಿಸುವ ಕುರಿತು ತಿಳಿದುಕೊಂಡಿರುತ್ತಾಳೆ. ಜನನ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ ಮಹಿಳೆಯರು ಶಿಕ್ಷಣ ಪಡೆದಿರುವುದೇ ಕಾರಣ’ ಎಂದು ಹೇಳಿದ್ದರು.