ಕೊಡಗು ಜಿಲ್ಲೆ ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು ಉಳಿಯಬೇಕು ಎಂದು ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಪ್ರತಿನಿಧಿಗಳು ಆಗ್ರಹ ವ್ಯಕ್ತಪಡಿಸಿದರು.
ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘವು ನವೆಂಬರ್ 12ರಂದು ಆಯೋಜಿಸಿರುವ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟದ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಲೇಜಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಅವರು ಅತೀವ ಕಳವಳ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷೆ ಡಾ ಪಾರ್ವತಿ ಅಪ್ಪಯ್ಯ ಮಾತನಾಡಿ, “ನಾವು ಓದಿದ ಕಾಲೇಜು ನಮ್ಮ ಕಣ್ಣು ಮುಂದೆಯೇ ಕೆಳಗಿಳಿಯುತ್ತಿರುವುದನ್ನು ನೋಡಿ ಸಹಿಸಲಾಗುತ್ತಿಲ್ಲ. ಕಾಲೇಜಿಗೆಂದು ನೇಮಕಗೊಂಡ ಅಧ್ಯಾಪಕರು ಮಂಗಳೂರು ವಿಶ್ವವಿದ್ಯಾಲಯದಲ್ಲೇ ಇದ್ದಾರೆ. ಅವರ ಬದಲಿಗೆ ವಿಶ್ವವಿದ್ಯಾಲಯವು ಅಧ್ಯಾಪಕರನ್ನು ನಿಯೋಜಿಸುತ್ತಿಲ್ಲ. ಇದರಿಂದ ಇಂದು ಕಾಲೇಜಿನಲ್ಲಿ ಕೇವಲ 23 ಮಂದಿಯಷ್ಟೇ ಖಾಯಂ ಉಪನ್ಯಾಸಕರಿದ್ದಾರೆ. ಪರಿಸರ ವಿಜ್ಞಾನಕ್ಕೆ ಒಬ್ಬರೂ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಕೊಡಗನ್ನು ಪ್ರತಿನಿಧಿಸುವವರೇ ಈಗ ಇಲ್ಲ. ಇದರಿಂದ ಇಲ್ಲಿನ ಸಮಸ್ಯೆಗಳು ಅಲ್ಲಿನವರಿಗೆ ಅರ್ಥವಾಗುತ್ತಿಲ್ಲ. ವಿದ್ಯಾರ್ಥಿಗಳಿಂದ ಶುಲ್ಕ ಪಡೆದುಕೊಳ್ಳುವ ವಿಶ್ವವಿದ್ಯಾಲಯ ಅವರಿಗೆ ಪಾಠ ಹೇಳಲು ಉಪನ್ಯಾಸಕರನ್ನು ನೇಮಿಸುತ್ತಿಲ್ಲ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಗದಗ | ತರಗತಿ ಬಹಿಷ್ಕರಿಸಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಪ್ರತಿಭಟನೆ
ಸಂಘದ ಕಾರ್ಯದರ್ಶಿ ಬೊಳ್ಳಜಿರ ಬಿ ಅಯ್ಯಪ್ಪ ಮಾತನಾಡಿ, “ಕಾಲೇಜಿನಲ್ಲಿ ಅಧ್ಯಾಪಕರ ಕೊರತೆ ಮಾತ್ರವಲ್ಲ, ಮೂಲ ಸೌಕರ್ಯದ ಕೊರತೆಯೂ ಇದೆ. ಕಾಲೇಜಿನ ನಿರ್ವಹಣೆ ಹಣ ಇಲ್ಲದಾಗಿ ಆವರಣದಲ್ಲಿ ಗಿಡಗಳೆಲ್ಲ ಬೆಳೆದಿವೆ” ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಎನ್ ಡಿ ಚರ್ಮಣ, ನಿರ್ದೇಶಕರುಗಳಾದ ನಂದಿನೆರವಂಡ ಅಪ್ಪಯ್ಯ, ರಾಣಿ ಮಾಚಯ್ಯ, ಬಿ ಕೆ ಪೂಣಚ್ಚ ಇದ್ದರು.