ಸ್ಯಾಮ್ ಔಟ್‍ಫಿಟ್ ಫ್ಯಾಶನ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗ್ರಾಹಕರ ಆಯೋಗ, ಒಂದು ತಿಂಗಳೊಳಗಾಗಿ ದೂರುದಾರ ಗ್ರಾಹಕ ಸಂದಾಯ ಮಾಡಿದ 38,640 ರೂ.ಗಳನ್ನು, ಹಣ ಕೊಟ್ಟ ದಿನದಿಂದ ಶೇ.8ರಂತೆ ಬಡ್ಡಿ ಸಹಿತ ಪೂರ್ತಿ ಹಣ ಸಂದಾಯ ಮಾಡುವಂತೆ ಆದೇಶಿಸಿದೆ.
ಜಿಲ್ಲೆಯ ಕಲಘಟಗಿ ತಾಲೂಕಿನ ಅಕ್ಕಿ ಓಣಿಯ ನಿವಾಸಿ ಅರುಣ್ ಕುಂಬಾರ ಎನ್ನುವವರು 2022ಆಗಸ್ಟ್ 28ರಂದು ಮಲೀಕ್ ಇಸ್ಮಾಯಿಲ್ ಎನ್ನುವವರ ಮಧ್ಯಸ್ಥಿಕೆಯಲ್ಲಿ, ಹುಬ್ಬಳ್ಳಿಯ ಸ್ಯಾಮ್ ಔಟ್‍ಫಿಟ್ ಫ್ಯಾಶನ್ ಪ್ರೈವೇಟ್ ಲಿಮಿಟೆಡ್ ಇವರಿಂದ ರೂ. 38,640 ರೂ. ಮೌಲ್ಯದ ಬಟ್ಟೆಗಳ ಬಾಕ್ಸ್‌ಗಳನ್ನು ಖರೀದಿಸಿದ್ದರು.
ಆದರೆ, ಸ್ಯಾಮ್ ಔಟ್‍ಫಿಟ್ ಫ್ಯಾಶನ್‌ನವರು ಒಪ್ಪಂದದಂತೆ ಬಟ್ಟೆಗಳ ಬಾಕ್ಸ್ ತಲುಪಿಸಿರಲಿಲ್ಲ. ಈ ಕುರಿತು ವಿಚಾರಿಸಿದಾಗ 2022ಸೆಪ್ಟೆಂಬರ್ 20ರಂದು ಕೇವಲ 9,396 ರೂ. ರಸೀದಿ ಕೊಟ್ಟಿದ್ದರು. ಹಲವು ಬಾರಿ ವಿಚಾರಿಸಿದರೂ ಅರುಣ್ ಕುಂಬಾರ ಅವರಿಗೆ ಬಟ್ಟೆಗಳ ಬಾಕ್ಸ್ ಕೊಟ್ಟಿರಲಿಲ್ಲ.
ಇದರಿಂದ ತನಗೆ ಮೋಸವಾಗಿದೆ. ಕಂಪನಿಯವರ ನಡುವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಂದು ಅರುಣ್ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರು ವಿಚಾರಣೆ ನಡೆಸಿ, “ಕಂಪನಿಯವರು ಅರುಣ್ ಅವರಿಂದ ಹಣ ಪಡೆದ ವಿಷಯವನ್ನು ಅಲ್ಲಗಳೆದಿಲ್ಲ. ಹಣ ಪಡೆದ ನಂತರ ಆ ಮೊತ್ತದ ಬಟ್ಟೆಗಳ ಬಾಕ್ಸ್ ಕೊಡುವುದು ಅವರ ಕರ್ತವ್ಯವಾಗಿರುತ್ತದೆ. ಬಟ್ಟೆಗಳ ಬಾಕ್ಸ್ ಸರಬರಾಜು ಮಾಡದೇ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ,” ಎಂದು ಅಭಿಪ್ರಾಯಪಟ್ಟಿದೆ.
ಸುದೀರ್ಘ ವಿಚಾರಣೆಯ ನಂತರ ಗ್ರಾಹಕರ ಆಯೋಗ ತೀರ್ಪು ನೀಡಿದ್ದು, ಒಂದು ತಿಂಗಳೊಳಗೆ ಅರುಣ್ ಕುಂಬಾರ ಸಂದಾಯ ಮಾಡಿದ 38,640 ರೂ.ಗಳನ್ನು, ಹಣ ಕೊಟ್ಟ ದಿನದಿಂದ ಶೇ.8ರಂತೆ ಬಡ್ಡಿ ಸೇರಿಸಿ ಪೂರ್ತಿ ಹಣ ಸಂದಾಯ ಮಾಡುವಂತೆ ಆದೇಶಿಸಿದೆ. ಅರುಣ್ ಅವರಿಗಾದ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ 10ಸಾವಿರ ರೂ. ಪರಿಹಾರ ಮತ್ತು ಪ್ರಕರಣದ ಖರ್ಚು ಐದು ಸಾವಿರ ರೂ. ಕೊಡುವಂತೆ ಆಯೋಗ ತೀರ್ಪು ನೀಡಿದೆ.