ಹಮಾಸ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ವೇಳೆ ಗಾಝಾದ ಮೇಲೆ ಇಸ್ರೇಲ್ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿರುವುದನ್ನು ಖಂಡಿಸಿ, ಕದನ ವಿರಾಮಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜದ ಬಣ್ಣವಿರುವ ‘ಕಲ್ಲಂಗಡಿ’ ಹಣ್ಣಿನ ರೂಪಕದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸಿದವರ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕಳೆದ ಭಾನುವಾರ(ನ.5) ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯ ಬೌರಿಂಗ್ ಪೆಟ್ರೋಲ್ ಬಂಕ್ ಬಳಿಯಲ್ಲಿ ನಿಂತು, ‘OFF ALL THE FRUITS TO HAVE EVER EXISTED WATERMELON HAS BEEN THE BRAVEST, CEASE FIRE NOW’ ಎಂಬಿತ್ಯಾದಿ ಪ್ಲೆಕಾರ್ಡ್‌ಗಳನ್ನು ಇಟ್ಟುಕೊಂಡು ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ವಿರೋಧಿಸಿ, ಕದನ ವಿರಾಮಕ್ಕೆ ಆಗ್ರಹಿಸಿ ‘ಕಲ್ಲಂಗಡಿ’ ಹಣ್ಣಿನ ರೂಪಕದೊಂದಿಗೆ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಿದ್ದರು.
Over a hundred people gathered at Church Street, #Bengaluru on Sunday evening for a silent solidarity march for #Palestine with🍉posters. However, three people were reportedly detained by the police.
Image credits: @swharsh @pushkarv pic.twitter.com/jlZZnYWCRi
— Udbhavi Balakrishna (@bhavibee) November 5, 2023
ಪ್ರತಿಭಟನೆ ನಡೆಸಲು ಅನುಮತಿ ಪಡೆಯದೆ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಎಫ್‌ಐಆರ್‌ನಲ್ಲಿ, ‘ನ.5ರಂದು ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿ ಕೆಲವು ಮಂದಿಯ ಗುಂಪು, ಯಾವುದೇ ಅನುಮತಿ ಪಡೆಯದೇ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ನೂರಾರು ಮಂದಿ ಸಾರ್ವಜನಿಕರು ಇದರಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕಿನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಉಂಟು ಮಾಡಿ, ಹೈಕೋರ್ಟ್ ಆದೇಶ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಅಲ್ಲದೇ, ಗುಂಪಿನಲ್ಲಿದ್ದವರು ಹಿಡಿದುಕೊಂಡಿದ್ದ ಪ್ಲೆಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎಎಸ್‌ಐ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಐಪಿಸಿಯ 1860 ಕಲಂನ 149, 188, 283, 290, 291 ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಸಂಘಪರಿವಾರದ ಬೆಂಬಲಿಗನಿಂದ ಉಪಟಳ
ಸೇಂಟ್ ಮಾರ್ಕ್ಸ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಯುವಕ-ಯುವತಿಯರು ಕದನ ವಿರಾಮಕ್ಕೆ ಆಗ್ರಹಿಸಿ ಪ್ಲೆ ಕಾರ್ಡ್ ಹಿಡಿದುಕೊಂಡಿದ್ದ ವೇಳೆ ಸ್ಥಳಕ್ಕೆ ಬಂದ ಸಂಘಪರಿವಾರದ ಬೆಂಬಲಿಗನೋರ್ವ ಸ್ಥಳಕ್ಕೆ ಪೊಲೀಸರನ್ನು ಕರೆಸಿಕೊಂಡಿದ್ದಾನೆ.
ಬಳಿಕ ಸ್ಥಳಕ್ಕೆ ಬಂದ ಪೊಲೀಸರ ಮುಂದೆಯೇ ‘ಬೋಲೋ ಭಾರತ್ ಮಾತಾಕಿ’ ಎಂದು ಘೋಷಣೆ ಕೂಗಿದ್ದಲ್ಲದೇ, ‘ದೇಶದ್ರೋಹಿಗಳಿಗೆ ಧಿಕ್ಕಾರ’ ಎಂದು ನಿಂದಿಸಿದ್ದಾನೆ. ಅಲ್ಲದೇ, ಆತನ ವಿಡಿಯೋವನ್ನು ಕೂಡ ಪೊಲೀಸರು ಸೆರೆ ಹಿಡಿದಿದ್ದಾರೆ.
ಆದರೆ, ಆತನ ಮೇಲೆ ದೂರು ದಾಖಲಿಸಿಕೊಳ್ಳದ ಕಬ್ಬನ್ ಪಾರ್ಕ್ ಪೊಲೀಸರು, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಿದವರ ಮೇಲೆ ಎಫ್ಐಆರ್ ಹಾಕಿದ್ದಾರೆ.
ಸ್ಥಳದಲ್ಲಿ ಘೋಷಣೆ ಕೂಗಿದ ವ್ಯಕ್ತಿ ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಈ ದಿನ.ಕಾಮ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎಎಸ್‌ಐ ಅವರನ್ನು ಸಂಪರ್ಕಿಸಿದಾಗ, ‘ಘೋಷಣೆ ಕೂಗಿದವನ ಮೇಲೆ ದೂರು ದಾಖಲಾಗಿಲ್ಲ’ ಎಂದು ತಿಳಿಸಿದ್ದಾರೆ.