ಗಾಝಾ ಪಟ್ಟಿ ಮರು ಆಕ್ರಮಿಸಿಕೊಳ್ಳುವ ಇಸ್ರೇಲ್ ಸೇನೆಯ ನಡೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರೋಧ ವ್ಯಕ್ತಪಡಿಸಿದ್ದಾರೆ.
”ಇಸ್ರೇಲ್ ಸೇನಾ ಪಡೆಗಳು ಗಾಝಾ ಪಟ್ಟಿಯನ್ನು ಮರು ಆಕ್ರಮಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಭಾವಿಸಿದ್ದಾರೆ” ಎಂದು ಶ್ವೇತ ಭವನದ ಭದ್ರತಾ ವಕ್ತಾರರಾದ ಜಾನ್ ಕಿರ್ಬೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಯುದ್ಧದ ನಂತರ ಗಾಝಾ ಪಟ್ಟಿಯನ್ನು ಅನಿರ್ದಿಷ್ಟ ಅವಧಿಗೆ ಭದ್ರತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ ಒಂದು ದಿನದ ನಂತರ ಅಮೆರಿಕದಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ.
”ನಾವು ಭದ್ರತೆಯ ಜವಾಬ್ದಾರಿಯನ್ನು ಹೊಂದಿಲ್ಲದಿದ್ದಾಗ, ನಮಗೆ ಊಹಿಸಲು ಸಾಧ್ಯವಾಗದ ಪ್ರಮಾಣದಲ್ಲಿ ಹಮಾಸ್‌ನಿಂದ ಭಯೋತ್ಪಾದನೆಯ ಸ್ಫೋಟವಾಗಿದೆ” ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದರು.
“ಘರ್ಷಣೆಯ ನಂತರದ ಗಾಜಾ ಹೇಗಿರುತ್ತದೆ ಮತ್ತು ಆಡಳಿತ ಹೇಗಿರಬೇಕು ಎಂಬುದರ ಕುರಿತು ಆರೋಗ್ಯಕರ ಸಂಭಾಷಣೆಗಳ ಅಗತ್ಯವಿದೆ” ಎಂದು ಕಿರ್ಬೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ಸಹಪಾಠಿಗಳಿಂದ ಹಲ್ಲೆ, ಜಾತಿ ನಿಂದನೆ; ದಲಿತ ವಿದ್ಯಾರ್ಥಿ ಆತ್ಮಹತ್ಯೆ
ಇಸ್ರೇಲ್ ಗಾಜಾವನ್ನು ವಶಪಡಿಸಿಕೊಳ್ಳುವುದು “ತಪ್ಪು” ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಹಿಂದೆ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅಮೆರಿಕದಲ್ಲಿನ ಇಸ್ರೇಲಿ ರಾಯಭಾರಿ ಮೈಕೆಲ್ ಹೆರ್ಜೋಗ್, ಇಸ್ರೇಲ್ ಸಂಘರ್ಷ ಕೊನೆಗೊಂಡ ನಂತರ ಗಾಜಾವನ್ನು ವಶಪಡಿಸಿಕೊಳ್ಳಲು ಉದ್ದೇಶಿಸುವುದಿಲ್ಲ ಎಂದು ಹೇಳಿದ್ದರು.
ಗಾಜಾವನ್ನು ಈಗಾಗಲೇ ಆಕ್ರಮಿತ ಪ್ರದೇಶವೆಂದು ಪರಿಗಣಿಸಲಾಗಿದೆ. ಏಕೆಂದರೆ ಇಸ್ರೇಲ್ ಪಡೆಗಳು ಔಪಚಾರಿಕವಾಗಿ 2005 ರಲ್ಲಿ ಗಾಝಾ ಪ್ರದೇಶದಿಂದ ಹಿಂತೆಗೆದುಕೊಂಡಿದ್ದರೂ ಸಹ ತನ್ನ ಗಡಿಗಳು, ವಾಯುಪ್ರದೇಶ ಮತ್ತು ಪ್ರಾದೇಶಿಕ ಪ್ರದೇಶಗಳಲ್ಲಿ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ. 1967 ರ ಯುದ್ಧದಲ್ಲಿ ಇತರ ಪ್ಯಾಲೇಸ್ತೀನಿಯನ್ ಪ್ರದೇಶಗಳೊಂದಿಗೆ ಪೂರ್ವ ಜೆರುಸಲೆಮ್ ಮತ್ತು ವೆಸ್ಟ್ ಬ್ಯಾಂಕ್ ಅನ್ನು ಇಸ್ರೇಲ್ ಆಕ್ರಮಿಸಿಕೊಂಡಿದೆ.
ಪ್ಯಾಲೇಸ್ತೀನಿಯನ್ ಆರೋಗ್ಯ ಅಧಿಕಾರಿಗಳ ಪ್ರಕಾರ ಗಾಜಾದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ 4,237 ಮಕ್ಕಳು ಸೇರಿದಂತೆ ಕನಿಷ್ಠ 10,328 ಜನರು ಸಾವನ್ನಪ್ಪಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಎರಡೂ ಕದನ ವಿರಾಮಕ್ಕಾಗಿ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಡವನ್ನು ನಿರಾಕರಿಸಿವೆ. ಹಮಾಸ್ ಒತ್ತೆಯಾಳುಗಳನ್ನು ಮೊದಲು ಬಿಡುಗಡೆ ಮಾಡಬೇಕು ಎಂದು ಇಸ್ರೇಲ್ ಹೇಳಿದೆ. ಗಾಜಾ ಆಕ್ರಮಣಕ್ಕೆ ಒಳಗಾಗಿರುವಾಗ ಅವರನ್ನು ಬಿಡುಗಡೆಗೊಳಿಸುವುದಿಲ್ಲ ಅಥವಾ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹಮಾಸ್ ಪ್ರತಿಪಾದಿಸುತ್ತಿದೆ.