ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಮೂಲದ ಚೈತ್ರಾ ಸೇರಿದಂತೆ 9 ಮಂದಿ ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿರುವ ನಡುವೆಯೇ, ಪ್ರಕರಣದ ಎ3 ಆರೋಪಿಯಾಗಿರುವ ಅಭಿನವ ಹಾಲಶ್ರೀಗೆ ಹೈಕೋರ್ಟ್ ಇಂದು (ನ.8) ಜಾಮೀನು ಮಂಜೂರು ಮಾಡಿದೆ.
ಆ ಮೂಲಕ ಈ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಜಾಮೀನು ಪಡೆದ ಮೊದಲ ಆರೋಪಿಯಾಗಿದ್ದಾರೆ. ಹೈಕೋರ್ಟ್ ಏಕಸದಸ್ಯ ಪೀಠವು ಬುಧವಾರ ಜಾಮೀನು ಮಂಜೂರು ಮಾಡಲಾಗಿದೆ.
ವಂಚನೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬರುತ್ತಿದ್ದಂತೆಯೇ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಹಾಲಶ್ರೀ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅ. 16 ರಂದು ಚೈತ್ರಾ ಮತ್ತು ತಂಡದಿಂದ ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಮೂರನೇ ಆರೋಪಿಯಾದ ಅಭಿನವ ಹಾಲಶ್ರೀ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ ಸಿಸಿಹೆಚ್ 57ನೇ ನ್ಯಾಯಾಲಯ ವಜಾಗೊಳಿಸಿತ್ತು.
ಹಾಲಾಶ್ರೀಗೆ ಜಾಮೀನು ನೀಡದಂತೆ ಈ ಹಿಂದೆ ಸಿಸಿಬಿ ಆಕ್ಷೇಪಣೆ ಸಲ್ಲಿಸಿತ್ತು. ಬಳಿಕ ಹಾಲಶ್ರೀ ಪರ ವಕೀಲರಾದ ಅರುಣ್ ಶ್ಯಾಮ್, ವಂಚನೆ ಪ್ರಕರಣದಲ್ಲಿ ಹಾಲಶ್ರೀ ವಿರುದ್ಧ ಯಾವುದೇ ಆರೋಪವಿಲ್ಲ, ಚೈತ್ರಾ ವಿರುದ್ಧ ಮಾತ್ರ ವಂಚನೆ ಆರೋಪವಿದೆ. ಹೀಗಾಗಿ ಅಭಿನವ ಹಾಲಶ್ರೀಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಈ ಕುರಿತು ಸುದಿರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಸಿಬಿಗೆ ಸೂಚಿಸಿತ್ತು.
ಇದನ್ನು ಓದಿದ್ದೀರಾ? ವಂಚನೆ ಪ್ರಕರಣ | ಚೈತ್ರಾ ಸೇರಿದಂತೆ 9 ಆರೋಪಿಗಳ ವಿರುದ್ಧ 800 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಈ ನಡುವೆ ಹಾಲಶ್ರೀಗೆ ನಿರೀಕ್ಷಣಾ ಜಾಮೀನು ನೀಡದಂತೆ ವಂಚನೆಗೆ ಒಳಗಾದ ಉದ್ಯಮಿ ಗೋವಿಂದಬಾಬು ಪೂಜಾರಿ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಜಾಮೀನು ಪಡೆದ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಹಾಲಶ್ರೀ ಪರ ಹಿರಿಯ ವಕೀಲ ಅರುಣ್ ಶ್ಯಾಮ್, ‘ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇವರ ಮೇಲಿರುವ ಆರೋಪ ಮ್ಯಾಜಿಸ್ಟ್ರೇಟ್ ಹಂತದಲ್ಲಿ ತನಿಖೆ ನಡೆಸಬಹುದು. ಅಲ್ಲದೇ, ಈಗಾಗಲೇ ತನಿಖೆ ನಡೆಸುತ್ತಿರುವ ಪೊಲೀಸರು ಒಂದೂವರೆ ಕೋಟಿ ಹಣವನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗಾಗಿ, ಆರೋಪಿಯನ್ನು ಕಸ್ಟಡಿಯಲ್ಲಿಟ್ಟುಕೊಳ್ಳುವ ಅವಶ್ಯಕತೆ ಎಲ್ಲ ಎಂದು ಪರಿಗಣಿಸಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ’ ಎಂದು ತಿಳಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ಎ3 ಆರೋಪಿಯಾಗಿದ್ದ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನವರಾದ ಹಾಲಶ್ರೀ, ಪ್ರಕರಣ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಒಡಿಶಾ ರಾಜ್ಯದ ಕಟಕ್‌ನಲ್ಲಿ ಬೆಂಗಳೂರು ಸಿಸಿಬಿ ಪೊಲೀಸರ ತಂಡ ಬಂಧಿಸಿತ್ತು. ಸದ್ಯ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.