(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಹಾಕಿದ ಬಂಡವಾಳ ವಾಪಸ್ಸಾಗುವ ಖಾತ್ರಿ ಇರದಿದ್ದಾಗ ಪ್ರಕಾಶಕರು ಮೇಲ್ನೋಟಕ್ಕೆ ವಿಚಿತ್ರವೆನಿಸುವ ಕೆಲವು ಕ್ರಮಗಳ ಮೊರೆಹೋಗುವುದು ಅಪರಾಧವೇ? ಲೇಖಕರ ಶ್ರಮಕ್ಕೆ ಸಂಭಾವನೆಯ ರೂಪದಲ್ಲಿ ಹೆಚ್ಚಿನ ಪ್ರತಿಫಲ ದೊರಕದಿರುವುದು ವಾಸ್ತವವೇ. ಆದರೆ, ಇದಕ್ಕೆ ದೂರಬೇಕಿರುವುದು ಯಾರನ್ನು?
ಹಾಕಿದ ಬಂಡವಾಳ ಹಿಂದಿರುಗುವ ಸಾಧ್ಯತೆ ಕಡಿಮೆ ಇರುವ ವ್ಯವಹಾರಗಳ ಪೈಕಿ ಕನ್ನಡ ಪುಸ್ತಕ ಪ್ರಕಾಶನವೂ ಒಂದು. ಪುಸ್ತಕ ಪ್ರಕಾಶನಕ್ಕೆ ಕೈ ಹಾಕಿ ಲಾಭದಾಯಕವಾಗಿ ನಡೆಸಿಕೊಂಡು ಹೋಗುತ್ತಿರುವವರ ಸಂಖ್ಯೆ ಬೆರಳೆಣಿಕೆಯಷ್ಟು. ಕನ್ನಡ ಪುಸ್ತಕ ಓದುವವರ ಸಂಖ್ಯೆ ಕುಸಿಯುತ್ತಿದೆ ಎನ್ನುವ ಅಭಿಪ್ರಾಯವೂ ಗಾಢವಾಗಿಯೇ ಇದೆ.
ವಾಸ್ತವ ಹೀಗಿದ್ದರೂ, ಪ್ರಕಾಶಕರ ಮೇಲೆ ಕೆಲ ಬರಹಗಾರರು ಇಟ್ಟಿರುವ ನಿರೀಕ್ಷೆಯ ಭಾರ ಮಾತ್ರ ಇಳಿಯುವ ಹಾಗೆ ಕಾಣುತ್ತಿಲ್ಲ. “ಪುಸ್ತಕ ಪ್ರಕಟಿಸಿ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿರುವ ಪ್ರಕಾಶಕರು, ತಮಗೆ ನ್ಯಾಯಯುತವಾಗಿ ಸಲ್ಲಬೇಕಿರುವ ಪಾಲು ನೀಡದೆ ವಂಚಿಸುತ್ತಿದ್ದಾರೆ,” ಎನ್ನುವ ಅಸಮಾಧಾನ ಬರಹಗಾರರ ವಲಯದಲ್ಲಿದೆ. ಇನ್ನು, ತಮ್ಮ ಪುಸ್ತಕ ಪ್ರಕಟಿಸುವಿರಾ ಎನ್ನುವ ಪ್ರಶ್ನೆಗೆ ಕನಿಷ್ಠಪಕ್ಷ ಸೂಕ್ತ ಪ್ರತಿಕ್ರಿಯೆಯನ್ನೂ ನೀಡದ ಪ್ರಕಾಶಕರ ಮೇಲೆ ತೀವ್ರ ಸಿಟ್ಟು ಕಾರಿಕೊಳ್ಳುವ ಲೇಖಕರಿಗೂ ನಮ್ಮಲ್ಲಿ ಕೊರತೆ ಇಲ್ಲ. ಪುಸ್ತಕ ಪ್ರಕಟಣೆಗೆ ಒಪ್ಪಿಕೊಳ್ಳುವ ಮುನ್ನ ಕೆಲ ಪ್ರಕಾಶಕರು ಹಾಕುವ ಷರತ್ತುಗಳನ್ನು ಅರಗಿಸಿಕೊಳ್ಳಲಾಗದೆ ಸಿಡಿಮಿಡಿಗೊಳ್ಳುವ ಬರಹಗಾರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಪ್ರಕಾಶಕರ ಮೇಲೆ ಆರೋಪಗಳ ಸುರಿಮಳೆಗೈಯುವ ಬರಹಗಾರರನ್ನು ಕಂಡಾಗಲೆಲ್ಲ, ಪುಸ್ತಕವೊಂದರ ಪ್ರಕಟಣೆಯಿಂದ ಉಂಟಾಗಬಹುದಾದ ನಷ್ಟದ ಭಾರವನ್ನು ಯಾರು ಹೊರುವುದು ಸೂಕ್ತವೆಂಬ ಪ್ರಶ್ನೆ ಪುಟಿದೇಳುತ್ತದೆ. ಹೂಡಿದ ಬಂಡವಾಳ ವಾಪಸ್ಸಾಗುವ ಖಾತ್ರಿ ಇರದಿದ್ದರೂ ರಿಸ್ಕ್ ತೆಗೆದುಕೊಂಡು ಪುಸ್ತಕ ಪ್ರಕಟಿಸಿ, ಅದನ್ನು ಓದುಗರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಕೆಲ ಪ್ರಕಾಶಕರಿಗೆ ಅದಕ್ಕೆ ಪ್ರತಿಫಲವಾಗಿ ದಕ್ಕುತ್ತಿರುವುದಾದರೂ ಏನೆಂಬ ಪ್ರಶ್ನೆ ಕಾಡುವುದು.
ಗ್ರಂಥಾಲಯ ಇಲಾಖೆಯಿಂದ ಪುಸ್ತಕಗಳ ಖರೀದಿ ಸಕಾಲಕ್ಕೆ ನಡೆಯುವಾಗ ಲೇಖಕರಿಗೆ ಒಂದಿಷ್ಟು ಗೌರವ ಪ್ರತಿಗಳನ್ನು ನೀಡುವುದಾಗಿ ತಿಳಿಸಿ, ಪುಸ್ತಕ ಪ್ರಕಟಣೆಗೆ ಸ್ವೀಕರಿಸುತ್ತಿದ್ದ ಸಾಕಷ್ಟು ಪ್ರಕಾಶನಗಳಿದ್ದವು. ಪುಸ್ತಕದ ಮೇಲೆ ಹೂಡಿದ ಬಂಡವಾಳದ ಜೊತೆಗೆ ಒಂದಿಷ್ಟು ಲಾಭವೂ ಅವರಿಗೆ ಸಿಗುತ್ತಿದ್ದ ಕಾರಣದಿಂದ, ಪುಸ್ತಕಗಳನ್ನು ಗ್ರಂಥಾಲಯಗಳಿಗೆ ತಲುಪಿಸಲು ತೋರುತ್ತಿದ್ದ ಮುತುವರ್ಜಿಯನ್ನು ಪುಸ್ತಕದಂಗಡಿಗಳಲ್ಲಿ ಅವು ಲಭ್ಯವಾಗುವಂತೆ ನೋಡಿಕೊಳ್ಳಲು ತೋರುತ್ತಿರಲಿಲ್ಲ. ಆದರೆ, ಕಳೆದ ಏಳೆಂಟು ವರ್ಷಗಳಿಂದ ಗ್ರಂಥಾಲಯ ಇಲಾಖೆ ನಡೆಸುವ ಸಗಟು ಖರೀದಿ ಕುಂಟುತ್ತ ಸಾಗುತ್ತಿರುವುದರಿಂದ, ಹೀಗೆ ಗ್ರಂಥಾಲಯಕ್ಕಾಗಿಯೇ ಪುಸ್ತಕ ಪ್ರಕಟಿಸುತ್ತಿದ್ದ ಹಲವು ಪ್ರಕಾಶನಗಳು ಈಗ ಮೊದಲಿನಷ್ಟು ಕ್ರಿಯಾಶೀಲವಾಗಿಲ್ಲ. ಇನ್ನು, ಗ್ರಂಥಾಲಯಕ್ಕೆ ಪುಸ್ತಕಗಳನ್ನು ಸರಬರಾಜು ಮಾಡುವುದನ್ನು ಕೇವಲ ಒಂದು ಆಯ್ಕೆಯನ್ನಾಗಿಸಿಕೊಂಡು, ಓದುಗರಿಗೆ ಪುಸ್ತಕಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಪ್ರಕಾಶನಗಳ ಎದುರು ಸಾಕಷ್ಟು ಸವಾಲುಗಳಿವೆ. ಪ್ರಕಾಶನವನ್ನು ವೃತ್ತಿಪರ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕೆನ್ನುವ ಮಹತ್ವಾಕಾಂಕ್ಷೆ ಇದ್ದರೂ, ಅದನ್ನು ಸಾಧ್ಯವಾಗಿಸುವ ದಾರಿ ಕಂಡುಕೊಳ್ಳಲು ಹೆಣಗುವ ಪರಿಸ್ಥಿತಿ ಇದೆ. ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಬೇಡಿಕೆ ಕಂಡುಕೊಂಡು ಸಾವಿರಾರು ಪ್ರತಿಗಳ ಲೆಕ್ಕದಲ್ಲಿ ಮಾರಾಟವಾಗುವ ಕೆಲವೇ ಕೆಲವು ಪುಸ್ತಕಗಳನ್ನು ಹೊರತುಪಡಿಸಿ, ಉಳಿದ ಪುಸ್ತಕಗಳಿಗೆ ಹಾಕಿದ ಬಂಡವಾಳ ಹಿಂದಿರುಗುವುದೇ ಅನುಮಾನ. ಗ್ರಂಥಾಲಯ ಇಲಾಖೆ ನಡೆಸುವ ಸಗಟು ಖರೀದಿಗೆ ಆಯ್ಕೆಯಾಗಿ ಅಲ್ಲಿಂದ ಹಣ ಬಂದರೆ ಮಾತ್ರ ಪ್ರಕಾಶಕರು ನಿಟ್ಟುಸಿರು ಬಿಡಬಹುದು.
ತಮ್ಮ ಪುಸ್ತಕ ಎಲ್ಲ ಪುಸ್ತಕದ ಅಂಗಡಿಗಳಲ್ಲೂ ಲಭ್ಯವಿರುವ ಹಾಗೆ ನೋಡಿಕೊಳ್ಳಲು ಪ್ರಕಾಶಕರು ಆಸಕ್ತಿ ತೋರುವುದಿಲ್ಲವೆಂಬ ಅಸಮಾಧಾನವೂ ಕೆಲ ಲೇಖಕರಲ್ಲಿ ಮೂಡುವುದು. ಆದರೆ, ಅತಿ ಉತ್ಸಾಹದಿಂದ ಪುಸ್ತಕವೊಂದು ಕೇಳಿದ ಕಡೆಗಳಲ್ಲೆಲ್ಲ ಸಿಗುವಂತೆ ಮಾಡಲು ಹೊರಟರೆ, ಅದರಿಂದ ಎದುರಾಗುವ ಸಮಸ್ಯೆಗಳೇನು ಎಂಬುದು ಪ್ರಕಾಶಕರಿಗೆ ಮಾತ್ರ ಗೊತ್ತಿರುವ ಸಂಭವವೇ ಹೆಚ್ಚು. ಪುಸ್ತಕದ ಅಂಗಡಿಗಳಿಗೆ ಸರಬರಾಜು ಮಾಡುವ ಪುಸ್ತಕಗಳ ಬಿಲ್ ವಸೂಲಿ ಮಾಡುವುದು ಎಷ್ಟು ಸವಾಲಿನ ಸಂಗತಿ ಎಂಬುದು ಅನುಭವಿಸಿದವರಿಗೆ ಮಾತ್ರವೇ ಗೊತ್ತಿರಲು ಸಾಧ್ಯ. ಅದರಲ್ಲೂ, ಅಪರೂಪಕ್ಕೆ ಒಂದೊಂದರಂತೆ ಮಾರಾಟವಾಗುವ ಪುಸ್ತಕಗಳಿಗೆ ಹಣ ನೀಡಲು ಮುಂದೆ ಬರುವ ಪುಸ್ತಕದ ಅಂಗಡಿಗಳು ಅಪರೂಪ. ಮಾರಾಟವಾದ ಪುಸ್ತಕಗಳ ಬಿಲ್ ಕೊಡಲು ಕೂಡ ಸತಾಯಿಸುವ ಪುಸ್ತಕದ ಅಂಗಡಿಗಳೂ ಇವೆ. ಮಾಲ್ ಸ್ವರೂಪದಲ್ಲಿ ದೊಡ್ಡ ಪುಸ್ತಕ ಮಳಿಗೆಗಳನ್ನು ನಡೆಸುವ ಸಂಸ್ಥೆ ಕೂಡ ಇದಕ್ಕೆ ಹೊರತಾಗಿಲ್ಲ. ದೊಡ್ಡ ಮೊತ್ತದ ಬಿಲ್‍ಗಳು ಪಾವತಿಯಾಗದೆ ಉಳಿದ ಕಾರಣಕ್ಕೆ ಇಂತಹ ದೊಡ್ಡ ಮಳಿಗೆಗಳಿಗೆ ಪುಸ್ತಕ ಸರಬರಾಜು ಮಾಡದಿರಲು ಕೆಲ ಪ್ರಕಾಶಕರು ನಿರ್ಧರಿಸಿರುವ ನಿದರ್ಶನಗಳೂ ಇವೆ.
“ಬೇರೆಯವರ ಬಳಿ ಕೆಲಸ ಬೇಡುವವರಾಗುವ ಬದಲು ಇತರರಿಗೆ ಕೆಲಸ ನೀಡುವ ಉದ್ಯಮಿಗಳಾಗಿ’ ಎಂಬ ಸ್ಫೂರ್ತಿದಾಯಕ ವ್ಯಾವಹಾರಿಕ ಪ್ರವಚನಗಳಿಗೆ ಮರುಳಾಗಿ ಸ್ವಂತ ಉದ್ಯಮ ಶುರು ಮಾಡಲು ಹೋಗಬೇಡಿ,” ಎನ್ನುವ ಸಲಹೆಯನ್ನು ಪದವಿ ವಿದ್ಯಾರ್ಥಿಗಳಿಗೆ ನೀಡಬೇಕಾದ ಸಂದರ್ಭ ಎದುರಾಗುವುದು ಅಪರೂಪವೇನಲ್ಲ. ಈ ವೇಳೆ, ಯಾವುದೇ ಉದ್ಯಮ ಪ್ರಾರಂಭಿಸುವ ಮುನ್ನ ಪರಿಶೀಲಿಸಲೇಬೇಕಿರುವ ಮೂರು ಅಂಶಗಳತ್ತ ವಿದ್ಯಾರ್ಥಿಗಳ ಗಮನ ಸೆಳೆಯುವುದು ರೂಢಿಗತ ಪರಿಪಾಠ. ನಿಮ್ಮ ಉದ್ದಿಮೆಯ ಕನಸನ್ನು ಅನುಷ್ಠಾನಕ್ಕೆ ತರಲಾಗುವ ಸಾಧ್ಯತೆ (physical realizability), ಬಂಡವಾಳ ಹೊಂದಿಸುವ ಸಾಧ್ಯತೆ (financial feasibility) ಹಾಗೂ ಲಾಭ ಗಳಿಸುವ ಸಾಧ್ಯತೆ (economic feasibility) ಈ ಮೂರರಲ್ಲೂ ಯಶಸ್ಸು ಕಾಣುವುದು ಖಾತ್ರಿ ಆದರೆ ಮಾತ್ರ ಮುಂದುವರೆಯಿರಿ ಎನ್ನುವ ಮಾರ್ಗದರ್ಶನ ನೀಡಲಾಗುವುದು.
ಕನ್ನಡ ಪುಸ್ತಕ ಪ್ರಕಟಿಸುವವರಿಗೆ hysical realizability ಸವಾಲಿನ ಸಂಗತಿಯೇನಲ್ಲ. ಪುಸ್ತಕಕ್ಕೆ ಬೇಕಿರುವ ಹೂರಣ ಒದಗಿಸಿದರೆ, ಅದನ್ನು ಪುಸ್ತಕ ರೂಪಕ್ಕೆ ತರುವುದು ಕಷ್ಟದ ಕೆಲಸವೇನಲ್ಲ. ಆದರೆ, ಬಂಡವಾಳ ಹೊಂದಿಸುವುದು ಮತ್ತು ಹೂಡಿದ ಬಂಡವಾಳ ವಾಪಸ್ಸು ಪಡೆಯುವ ಜೊತೆಗೆ ಒಂದಿಷ್ಟು ಲಾಭ ಮಾಡುವುದು ಇಲ್ಲಿ ನಿಜಕ್ಕೂ ಸವಾಲಿನ ಸಂಗತಿಯೇ ಸರಿ. ಬಂಡವಾಳ ಹೊಂದಿಸಲೇ ಹೆಣಗುವ ಅಥವಾ ಆ ಉಸಾಬರಿಯೇ ತಮಗೆ ಬೇಡವೆಂದು ಭಾವಿಸುವ ಕೆಲ ಪ್ರಕಾಶಕರು, ಲೇಖಕರಿಂದಲೇ ಹಣದ ಹೂಡಿಕೆ ಮಾಡಿಸುವುದೂ ಇದೆ. ಹೀಗೆ, ಪುಸ್ತಕವೊಂದಕ್ಕೆ ಲೇಖಕರಿಂದಲೇ ಹಣ ಹಾಕಿಸುವ ಪ್ರಕಾಶಕರನ್ನು ವಂಚಕರೆಂಬಂತೆ ಬಿಂಬಿಸಿರುವ ಸಾಕಷ್ಟು ನಿದರ್ಶನಗಳಿವೆ. ಇನ್ನು, ಕೆಲ ಪ್ರಕಾಶಕರು, ಪುಸ್ತಕ ಪ್ರಕಟಿಸಿದ ನಂತರ ಇಂತಿಷ್ಟು ಪ್ರತಿಗಳನ್ನು ತಮ್ಮಿಂದ ಖರೀದಿಸಲು ಒಪ್ಪುವುದಾದರೆ ಮಾತ್ರ ಪ್ರಕಟಣೆಗೆ ಸ್ವೀಕರಿಸುವುದಾಗಿ ಹೇಳುವುದೂ ಇದೆ.
ಹಾಕಿದ ಬಂಡವಾಳ ವಾಪಸ್ಸಾಗುವ ಖಾತ್ರಿ ಇರದಿದ್ದಾಗ ಪ್ರಕಾಶಕರು ಇಂತಹ ಕ್ರಮಗಳ ಮೊರೆಹೋಗುವುದು ಅಪರಾಧವೇ? ಲೇಖಕರ ಶ್ರಮಕ್ಕೆ ಸಂಭಾವನೆಯ ರೂಪದಲ್ಲಿ ಹೆಚ್ಚಿನ ಪ್ರತಿಫಲ ದೊರಕದಿರುವುದು ವಾಸ್ತವವೇ. ಆದರೆ, ಇದಕ್ಕೆ ದೂರಬೇಕಿರುವುದು ಯಾರನ್ನು? ಪುಸ್ತಕವೊಂದರ ಸಾವಿರ ಪ್ರತಿಗಳನ್ನು ಮುದ್ರಿಸಿ, ಅವು ಮಾರಾಟವಾಗದೆ ಗೋಡೌನ್‍ನಲ್ಲಿ ಧೂಳು ಹಿಡಿಯುತ್ತ ಬಿದ್ದಿದ್ದರೆ ಪ್ರಕಾಶಕರಾದರೂ ಏನು ಮಾಡಲು ಸಾಧ್ಯ? ಹೆಚ್ಚು ಪ್ರತಿ ಮುದ್ರಿಸಿ ಪೇಚಿಗೆ ಸಿಲುಕುವ ಬದಲಿಗೆ, ಬೇಡಿಕೆಗೆ ತಕ್ಕಷ್ಟು ಮುದ್ರಿಸುವ ತಂತ್ರದ (print on demand) ಮೊರೆಹೋದರೆ, ಪುಸ್ತಕದ ಪ್ರತಿಯೊಂದಕ್ಕೆ ತಗಲುವ ವೆಚ್ಚ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ಪುಸ್ತಕ ಪ್ರಕಾಶನ ಎಂಬುದೂ ಒಂದು ಉದ್ಯಮ ಎಂಬ ವಾಸ್ತವವನ್ನು ಬರಹಗಾರರು ಮೊದಲಿಗೆ ಒಪ್ಪಿಕೊಳ್ಳಬೇಕಿದೆ. ನಷ್ಟದಲ್ಲಿ ಯಾವ ಉದ್ದಿಮೆಯನ್ನೂ ಹೆಚ್ಚು ಕಾಲ ನಡೆಸಲಾಗದು ಎಂಬ ಸತ್ಯ ಕನ್ನಡ ಪುಸ್ತಕ ಪ್ರಕಾಶನಕ್ಕೂ ಅನ್ವಯ. ಲೇಖಕರು ತಮ್ಮ ಶ್ರಮಕ್ಕೆ ಪ್ರತಿಫಲ ಅಪೇಕ್ಷಿಸುವಂತೆ, ಪ್ರಕಾಶಕರು ಕೂಡ ತಾವು ಹಾಕುವ ಶ್ರಮಕ್ಕೆ ತಕ್ಕ ಲಾಭ ನಿರೀಕ್ಷಿಸುವುದರಲ್ಲಿ ತಪ್ಪೇನಿದೆ? ಬರಹಗಾರರನ್ನು ಬೆಳೆಸುವ ಸಲುವಾಗಿ ಪ್ರಕಾಶಕರು ಆರ್ಥಿಕವಾಗಿ ಕುಸಿದುಬೀಳಬೇಕೆ? ಪ್ರಕಾಶಕರತ್ತ ತೂರಿಬಿಡುವ ಟೀಕಾಸ್ತ್ರಗಳನ್ನು ಪ್ರಯೋಗಿಸುವ ಮುನ್ನ ವಾಸ್ತವದಲ್ಲಿ ಅದ್ದುವುದು ವಿವೇಕಯುತ ನಡೆ.
ಎಲ್ಲ ವ್ಯಾವಹಾರಿಕ ಕ್ಷೇತ್ರಗಳಲ್ಲೂ ಇರುವ ಹಾಗೆ ಇಲ್ಲೂ ವಂಚಿಸುವವರು, ವಂಚನೆಗೆ ಒಳಗಾಗುವವರು ಇರುವುದನ್ನು ಅಲ್ಲಗಳೆಯಲಾಗದು. ಆದರೆ, ಪ್ರಕಾಶಕರು ಲೇಖಕರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದಕ್ಕೆ ಅವಾಸ್ತವಿಕ ನೆಲೆಗಟ್ಟಿನಲ್ಲಿ ನೈತಿಕ ಮಾದರಿ ತಯಾರಿಸಿ, ಅದರ ಆಧಾರದಲ್ಲೇ ಎಲ್ಲವನ್ನೂ ನಿರ್ಣಯಿಸಲು ಹೊರಡುವುದು ಸೂಕ್ತವೇ ಎಂದು ವಿವೇಚಿಸಬೇಕಿದೆ.
ಪ್ರಕಾಶಕರ ಧೋರಣೆ ಕುರಿತು ಅಸಮಾಧಾನ ಹೊಂದಿರುವ ಬರಹಗಾರರು, ತಮ್ಮ ಪುಸ್ತಕ ತಾವೇ ಪ್ರಕಟಿಸುವ ಆಯ್ಕೆಯನ್ನೂ ಗಂಭೀರವಾಗಿ ಪರಿಗಣಿಸಬಹುದು. ಹೀಗೆ ಮಾಡುವ ಮೂಲಕ ಪುಸ್ತಕ ಪ್ರಕಟಣೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಇರುವ ಸವಾಲುಗಳ ಕುರಿತು ಸೂಕ್ತ ಅರಿವು ಹೊಂದಬಹುದು.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ