ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ದಲ್ಲಾಳಿಗಳ ಮುಖಾಂತರ ಅಕ್ರಮ ವ್ಯವಹಾರ ನಡೆಸಿ ಮೂಲ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆರೋಪಿಸಿದೆ.
ಈ ಸಂಬಂಧ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಬೀದರ್ ಭೇಟಿ ನೀಡಿದ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಬೀದರ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯ ಕೂಲಿ ಕಾರ್ಮಿಕರಿದ್ದಾರೆ. ಅದರಲ್ಲಿ ಅನೇಕ ಜನರು ಅನಕ್ಷರಸ್ಥರಾಗಿದ್ದಾರೆ. ಹೀಗಾಗಿ ಯಾವುದೇ ಇಲಾಖೆಯ ವಿವಿಧ ಸೌಲಭ್ಯಗಳು ಪಡೆಯಬೇಕಾದರೆ ಇಲಾಖೆಗೆ ನೇರ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಬಹುಶಃ ನೇರ ಅರ್ಜಿ ಸಲ್ಲಿಸಿದರೆ ಅವರ ಅರ್ಜಿಯನ್ನು ರದ್ದುಗೋಳಿಸಿ ಪ್ರೀಜ್ ಮಾಡುತ್ತಾರೆ” ಎಂದು ದೂರಿದರು.
“ಅನಕ್ಷರಸ್ಥರನ್ನೇ ಟಾರ್ಗೆಟ್ ಮಾಡಿ ದಲ್ಲಾಳಿಗಳ ಮೂಲಕ ಅರ್ಜಿ ಸ್ವೀಕರಿಸಿ ಕಾರ್ಮಿಕ ಇಲಾಖೆಯ ಯೋಜನೆಗೆ ಪರಿಗಣಿಸುತ್ತಾರೆ. ಯೋಜನೆಯ ಲಾಭ ಪಡೆಯಬೇಕಾದರೆ ದಲ್ಲಾಳಿಗಳಿಗೆ ಯೋಜನೆಯ 30% ಕಮೀಷನ್ ಹಣ ನೀಡಬೇಕಾಗುತ್ತದೆ. ಇಲ್ಲದಿದರೆ ಇವರ ಅರ್ಜಿ ಪರಿಗಣಿಸದೆ ತಿರಸ್ಕರಿಸಿ ಬಡ ಕಾರ್ಮಿಕರಿಗೆ ಕಛೇರಿಗೆ ದಿನನಿತ್ಯ ಅಲೆದಾಡುವಂತೆ ಮಾಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬೀದರ್ ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ಕೆಲ ಅಧಿಕಾರಿಗಳು ಅನೇಕ ವರ್ಷಗಳಿದ ವರ್ಗಾವಣೆಯಾಗದೆ ಬೀಡು ಬಿಟ್ಟಿದ್ದಾರೆ. ಕೂಡಲೇ ಅವರನ್ನು ವರ್ಗಾವಣೆಗೊಳಿಸಿ ತಪ್ಪಿಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರೈತರಿಗೆ ನೆರವಾಗದ ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ : ಬಿ.ವೈ.ವಿಜಯೇಂದ್ರ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಲ್ಸನ್ ದೊಡ್ಡಮನಿ , ಉಪಾಧ್ಯಕ್ಷ ಪ್ರಶಾಂತ ಹೀರೆಮನಿ, ಯುವ ಘಟಕದ ಜಿಲ್ಲಾಧ್ಯಕ್ಷ ಗುರುದಾಸ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಸಚಿನ್ ಕಲಾಲ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವಾರು ಇದ್ದರು.