ಕಲಿಕಾ ಭಾಗ್ಯ ಯೋಜನೆಯಡಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನವನ್ನು ಕಡಿತ ಮಾಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಕಡಿತದ ನಿರ್ಧಾರವನ್ನು ಹಿಂಪಡೆದು, ಸಹಾಯಧನವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಟಿಯುಸಿಐ ಒತ್ತಾಯಿಸಿದೆ.
ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ ಟಿಯುಸಿಐ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವವನ್ನು ಅಯಾ ತರಗತಿಗಳಿಗೆ ಅನುಗುಣವಾಗಿ 5,000 ರೂ.ನಿಂದ 60 ಸಾವಿರದವರೆಗೆ ನೀಡಲಾಗುತ್ತಿತ್ತು. ಪಿಹೆಚ್ ಡಿ, ಎಂಫಿಲ್‌ಗೂ ಕೂಡ ಸಹಾಯಧನ ದೊರೆಯುತ್ತಿತ್ತು. ಆದರೆ, ಕಾರ್ಮಿಕ ಇಲಾಖೆಯು ಅಕ್ಟೋಬರ್ 30ರಂದು ಹೊಸ ಆದೇಶ ಹೊರಡಿಸಿದ್ದು, ಆದೇಶದಂತೆ 1,100 ರೂ.ನಿಂದ 11 ಸಾವಿರ ರೂ.ಗೆ ಕಡಿತ ಮಾಡಲಾಗಿದೆ. ಇದು ಕಾರ್ಮಿಕ ವಿರೋಧಿ ನಡೆಯಲಾಗಿದೆ. ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ” ಎಂದು ಆರೋಪಿಸಿದ್ದಾರೆ.
“ಕಟ್ಟಡ, ಕಾರ್ಮಿಕ ಇಲಾಖೆಗೆ ಸಂಗ್ರಹವಾಗುವ ಸೆಸ್ ಹಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಪ್ರಸ್ತುತ ಮೂಲಗಳ ಪ್ರಕಾರ 10,263 ಕೋಟಿ ರೂ.ಗೂ ಹೆಚ್ಚು ಮೊತ್ತ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿದೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಇದರಿಂದ ಅನೇಕ ಸೌಲಭ್ಯ ನೀಡುತ್ತಿದ್ದು, ಪ್ರತಿ ವರ್ಷ 6,700 ಕೋಟಿ ರೂ.ಗೂ ಹೆಚ್ಚು ಮೊತ್ತ ಉಳಿಯಲಿದೆ. ಇಷ್ಟಾದರೂ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನದ ಮೊತ್ತ ಕಡಿಮೆ ಮಾಡಿರುವುದು ಖಂಡನೀಯ” ಎಂದು ಕಿಡಿಕಾರಿದ್ದಾರೆ.
“ಸಾಮಾಜಿಕ ನ್ಯಾಯ ಕಲ್ಪಿಸಲು ಕಾಂಗ್ರೆಸ್ ಸರ್ಕಾರ ಬದ್ಧ ಎಂದು ತಮ್ಮ ಭಾಷಣಗಳಲ್ಲಿ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಕಡಿತಗೊಳಿಸಿರುವುದು ಕಳವಳಕಾರಿ ಸಂಗತಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘಟನೆಯ ಹಕ್ಕೊತ್ತಾಯಗಳು
1) ಕಲಿಕಾ ಭಾಗ್ಯ ಯೋಜನೆಯಡಿ ಸಹಾಯಧನ ಕಡಿತಗೊಳಿಸುವ ಆದೇಶ ಹಿಂಪಡೆದು ಈ ಹಿಂದಿ ನಂತೆಯೇ ಹಣ ನೀಡಬೇಕು.
2) ಹಿಂದೆ ನೀಡುತ್ತಿದ್ದಂತೆ 1ರಿಂದ 4ನೇ ತರಗತಿಗೆ 5,000 ರೂ. ಹಾಗೂ 5ರಿಂದ 8ನೇ ತರಗತಿಗೆ 8,000 ರೂ. ನೀಡಬೇಕು.
3) ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ 15,000 ರೂ ನೀಡಬೇಕು. ಪದವಿಗೆ 25,000 ರೂ., ಬಿ.ಟೆಕ್‌ಗೆ 50,000 ರೂ., ನರ್ಸಿಂಗ್ ಪ್ಯಾರಾ ಮೆಡಿಕಲ್‌ಗೆ 40,000 ರೂ., ಬಿ.ಎಡ್‌ಗೆ 35,000 ರೂ., ಎಲ್‌ಎಲ್‌ಬಿಗೆ 30,000 ರೂ., ಪಿಎಚ್‌ಡಿಗೆ 25,000 ರೂ. ನೀಡಬೇಕು.
4) ಕಟ್ಟಡ ಕಾರ್ಮಿಕರಲ್ಲದವರು ಕಾರ್ಮಿಕರ ಗುರುತಿನ ಚೀಟಿ ಪಡೆದಿದ್ದನ್ನು ಪತ್ತೆ ಹಚ್ಚಿ ನಕಲಿ ಕಾರ್ಡು ಪಡೆದವರ ಮೇಲೆ ಕ್ರಮ ಕೈಗೊಳ್ಳಬೇಕು.
5) ಕಟ್ಟಡ ಕಾರ್ಮಿಕರು ನೋಂದಣಿ ಮಾಡುವಾಗ ವೇತನ ಚೀಟಿ, ಹಾಜರಾತಿ ಪಟ್ಟಿ ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ನಿಯಮ ರದ್ದುಪಡಿಸಬೇಕು.
ಪ್ರತಿಭಟನೆಯಲ್ಲಿ ಜಿ. ಅಮರೇಶ್, ಆರ್ ಹುಚ್ ರೆಡ್ಡಿ , ಅಜೀಜ್ ಜಾಗೀರ್ದಾರ್, ಸೈಯದ್ ಅಬ್ಬಾಸ್ ಅಲಿ, ನಿರಂಜನ್, ಶಿವಯ್ಯ ,ಲಕ್ಷ್ಮಣ, ಆನಂದ, ನಬೀಸಾಬ್ ಇದ್ದರು.