ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಬಸವಣ್ಣರ ಅನುಯಾಯಿಗಳಿಗೆ ಅವಮಾನ ಮಾಡಿದ ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಿಶ್ವೇಶ್ವರ ಭಟ್ ಅವರು ಸ್ವಾಮೀಜಿ ಮತ್ತು ಬಸವ ತತ್ವ ಅನುಯಾಯಿಗಳ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ದಾವಣಗೆರೆಯಲ್ಲಿ ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
“ಮೌಡ್ಯತೆ ಹೋಗಲಾಡಿಸಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಶೋಷಿತರ, ದಲಿತರ, ಹಿಂದುಳಿದವರ ಪರವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ, ಬಸವ ತತ್ವದೊಂದಿಗೆ ಮೌಢ್ಯತೆಗಳ ವಿರುದ್ಧ ಹೋರಾಟ ಮಾಡುತ್ತಿರುವ ಸಾಣೇಹಳ್ಳಿ ಸ್ವಾಮಿಯವರನ್ನು ವಿಶ್ವೇಶ್ವರ ಭಟ್ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಲೇಖನ ಬರೆದಿದ್ದಾರೆ. ಇದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸುಮಾರು ವರ್ಷಗಳಿಂದ ಬಸವಣ್ಣನವರ ವಚನಗಳ ಮೂಲಕ ನಾಡಿನಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ಅವರ ವಿರುದ್ಧ ಲೇಖನ ಬರೆದಿರುವುದು ವಿಶ್ವೇಶ್ವರ ಭಟ್ ಅವರ ಕಿಡಿಗೇಡಿ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಕಿಡಿಕಾರಿದ್ದಾರೆ.
“ಸ್ವಾಮೀಜಿಗಳ ಸಮಾಜಮುಖಿ ಕಾರ್ಯವನ್ನು ಸಹಿಸದ ವಿಶ್ವೇಶ್ವರ ಭಟ್ ಅವರು ಸ್ವಾಮಿಗಳ ಬಗ್ಗೆ ಹಗುರವಾಗಿ ಪತ್ರಿಕೆಯಲ್ಲಿ ಬರೆದಿರುವುದು ಸರಿಯಲ್ಲ. ಅವರು ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಎಂ.ಶಿವಕುಮಾರ, ಶಶಿಧರ್ ಬಸಾಪುರ, ಕೆ.ಎಸ್.ಈಶ್ವರಪ್ಪ, ಹುಚ್ಚಪ್ಪ ಮಾಸ್ತರ, ಪರಮೇಶ್ವರಪ್ಪ, ಹನುಮಂತಪ್ಪ, ಷಡಾಕ್ಷರಿ, ರುದ್ರೇಗೌಡ, ವಿನೋದ ಅಜಗಣ್ಣನವರ್, ವೀಣಾ ಮಂಜುನಾಥ್ ಇತರರು ಇದ್ದರು.