ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹಾಕಬೇಕೆಂದು ಎಐಎಂಎಸ್ಎಸ್ ಒತ್ತಾಯಿಸಿದೆ. ಬೆಂಗಳೂರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ಬೆಂಗಳೂರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಸಂಘಟನೆಯ ನಿಯೋಗವು ಹಕ್ಕೊತ್ತಾಯ ಪತ್ರ ಸಲ್ಲಿಸಿದೆ. “ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಬಾಂಬ್ ದಾಳಿಗಳನ್ನು ನಡಸಿ ಇಸ್ರೇಲ್ ಸಾವಿರಾರು ಮಂದಿಯನ್ನು ಹತ್ಯೆಗೈದಿದೆ. ಸುಮಾರು 2500 ಮಹಿಳೆಯರು, 4000 ಪುಟ್ಟ ಮಕ್ಕಳು ಈಗಾಗಲೇ ಬಲಿಯಾಗಿದ್ದಾರೆ. ಅಲ್ಲಿನ ಯುದ್ಧವನ್ನು ಕೊನೆಗಾಣಿಸಲು ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕು” ಎಂದು ಒತ್ತಾಯಿಸಿದೆ.
“ಕಳೆದ 75 ವರ್ಷಗಳಿಂದ ಗಾಜಾ ಪಟ್ಟಿಯನ್ನು ಇಸ್ರೇಲ್ ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದೆ. ಅಲ್ಲಿರುವ ಪ್ಯಾಲೆಸ್ತೀನಿ ಜನರು ನಿರಾಶ್ರಿತರ ಶಿಬಿರದಲ್ಲಿದ್ದಾರೆ. ಕುಡಿಯುವ ನೀರಿಲ್ಲದೆ, ಔಷಧಿಯ ಸರಬರಾಜಿಲ್ಲದೆ, ವಿದ್ಯುತ್ ಕಡಿತದಿಂದ ಪ್ರಪಂಚದೊಡನೆ ಯಾವುದೇ ರೀತಿಯ ಸಂಪರ್ಕವನ್ನು ಮಾಡಲಾಗದೇ ನಿರ್ಬಂಧದಲ್ಲಿದ್ದಾರೆ. ಅವರನ್ನು ರಕ್ತಿಸುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.