ಲಿಂಗಸೂಗೂರ ತಾಲೂಕಿನ ಹಟ್ಟಿ ಸರಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಂಜುಳಾ ಅವರಿಗೆ ದುಷ್ಕರ್ಮಿ ಗಳು ಭೀಕರವಾಗಿ ಕೊಲೆಗೈದು ಬೆಂಕಿ ಹಚ್ಚಿದ ಪೈಶಾಚಿಕ ಘಟನೆ ನಡೆದು 15 ದಿನ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹಟ್ಟಿ ಪ್ರಗತಿಪರ ಸಂಘಟನೆಗಳ ಜಂಟಿ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದ ಮಂಜುಳಾ ಜೇಮ್ಸ್ ಪಾಲ್ ಕೊಲೆ ಖಂಡಿಸಿ ಹಟ್ಟಿ ಪಟ್ಟಣದ ಪಾಮನ ಕಲ್ಲುರ್ ಕ್ರಾಸ್ ನಿಂದ, ವಿಲೇಜ್ ಬಸ್ ಸ್ಟ್ಯಾಂಡ್, ಕೋಠಾ ಕ್ರಾಸ್, ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟಕರು ತಾಲೂಕಾಡಳಿತ ಹಾಗೂ ಪೊಲೀಸ್ ಠಾಣೆಯ ಸಿಪಿಐ ಅವರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು .
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ ಮಾತನಾಡಿ, “ಹಟ್ಟಿ ಪಟ್ಟಣದ ಅಂಗಡಿ ಮುಂಗಟ್ಟುಗಳ ಸಿಸಿ ಕ್ಯಾಮೆರಾ ಅಳವಡಿಸಿದರೂ ಅವುಗಳನ್ನು ಸರಿಯಾಗಿ ನಿರ್ವಹಿಸದಿರುವ ಕಾರಣ ಅಪರಾಧಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಂಜುಳಾ ವರ ಮೃತದೇಹವನ್ನು ನೋಡಿದರೆ ಕೊಲೆ ಎನ್ನುವ ಪೊಲೀಸರು ಅನುಮಾನಾಸ್ಪದ ಸಾವು ಎಂದು ದಾಖಲಿಸದೆ ಪೊಲೀಸರ ಕೈವಾಡದಿಂದ ಹಾದಿ ತಪ್ಪಿಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಾವಿರಾರು ಕಾರ್ಮಿಕರು ವಾಸಿಸುವ ಪಟ್ಟಣದಲ್ಲಿ ಜೂಜು, ಮಟ್ಕಾ ಸೇರಿದಂತೆ ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ಹಣದಾಸೆಗೆ ಇಂತಹ ಕೊಲೆ-ಸುಲಿಗೆಗಳು ಸಾಮಾನ್ಯ ಎನ್ನುವಂತಾಗಿವೆ. ಕೂಡಲೇ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಮುಖಂಡ ಅಮೀರ ಅಲಿ ಮಾತನಾಡಿ, “ರಾತ್ರಿ 12ರ ನಂತರ ಏಕಾಂಗಿಯಾಗಿ ಮಹಿಳೆ ಓಡಾಡಿದರೆ ನಮಗೆ ನಿಜವಾದ ಸ್ವಾತಂತ್ರ್ಯ ದೊರೆದಂತೆ ಎಂದು ಮಹಾತ್ಮ ಗಾಂಧಿ ಹೇಳಿದ ಮಾತು ಎಲ್ಲರೂ ನೆನೆಸಕೊಳ್ಳುತ್ತೇವೆ. ಆದರೆ ಮಂಜುಳ ಎಂಬ ಮಹಿಳೆಯ ಮನೆಗೆ ಹೋಗಿ ನಿಮ್ಮ ತಾಯಿಯ ಮೊಬೈಲ್ ಪಾಸ್‌ವರ್ಡ್ ಕೊಡುವಂತೆ ಕೇಳಿದ ವ್ಯಕ್ತಿಯೇ ಕೊಲೆ ನಡೆಸಿರುವ ಬಗ್ಗೆ ಶಂಕೆ ಮೂಡಿದರೂ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಕರಣ ಇತ್ಯರ್ಥಗೊಳಿಸುವ ಪ್ರಯತ್ನದಲ್ಲಿದ್ದಾರೆ” ಎಂದು ಕಿಡಿಕಾರಿದರು.
ಕೊಲೆ ಪ್ರಕರಣವನ್ನು ಇಲಾಖೆಯ ಮೇಲಾಧಿಕಾರಿಗಳು ತನಿಖೆ ನಡೆಸಿ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಅಮಾನತು ಮಾಡಬೇಕು. ಸಾವನಪ್ಪಿದ ಮಂಜುಳ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಂತಹ ಅಹಿತಕರ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಈ ಸಂದರ್ಭದಲ್ಲಿ ರೈತ ಹೋರಾಟಗಾರ್ತಿ ಅನಿತಾ ಬಸವರಾಜ್ ಸೇರಿದಂತೆ ಪ್ರಮುಖರಾದ ಶೇಖರ್ , ವಿಜಯಕುಮಾರ್, ಲಾಲು ಸೇರಿದಂತೆ ಅನೇಕರಿದ್ದರು