ಜಿಲ್ಲೆಯಲ್ಲಿ ಬರಗಾಲ ಸೃಷ್ಟಿಯಾಗಿದೆ, ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಂಬಲ ಇಲ್ಲ. ಮಳೆ ಕೈಕೊಟ್ಟ ಪರಿಣಾಮ ಹಿಂಗಾರು ಬಿತ್ತನೆಗೆ ಹಿನ್ನಡೆಯಾಗಿ ರೈತರು ಹೈರಾಣಾಗಿದ್ದಾರೆ. ಬರದ ಛಾಯೆ ಆವರಿಸಿದರೂ ಜನರು ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಭರ್ಜರಿಯಾಗಿ ಆಚರಣೆಗೆ ಸಜ್ಜಾಗಿದ್ದಾರೆ.
ದೀಪಾವಳಿ ಹಬ್ಬದ ವಿಶೇಷವೆಂದರೆ ಬೆಳಕು, ದೀಪಾವಳಿಗೆ ಹಣತೆ ಹಾಗೂ ಆಕಾಶ ಬುಟ್ಟಿಗಳದ್ದೆ ಬಲು ಜೋರು. ಒಂಬತ್ತು ದಿನಗಳ ಕಾಲ ಸಂಜೆ ಬಾಗಿಲ ಎರಡೂ ಬದಿ ಸಾಲು ಸಾಲು ಹಣತೆಯಲ್ಲಿ ದೀಪ ಇಡಲಾಗುತ್ತದೆ, ಮನೆ ಮುಂದೆ ವಿವಿಧ ಆಕಾರ, ಬಣ್ಣದ ಬುಟ್ಟಿಗಳು ಮಿನುಗುತ್ತವೆ. ಇನ್ನೇನು ಬೆಳಕಿನ ಹಬ್ಬ ಶುರುವಾಗಿದ್ದು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣತೆ, ಆಕಾಶ ಬುಟ್ಟಿಗಳ ಮಾರಾಟ ಜೋರಾಗಿ ನಡೆಯುತ್ತಿದೆ.
ಬೇಡಿಕೆ ಕುಸಿದ ಮಣ್ಣಿನ ಹಣತೆ:
ದಶಕದ ಹಿಂದೆ ದೀಪಾವಳಿ ಹಬ್ಬ ಬಂತೆಂದರೆ ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕರಕುಶಲಕರ್ಮಿಗಳಿಗೆ ಎಲ್ಲಿಲ್ಲದ ಖುಷಿ, ಸಂಭ್ರಮ ಮನೆ ಮಾಡಿ ಬದುಕಿನ ಬೆಳಕಿನ ಹಬ್ಬವಾಗಿ ಕಾಣುತ್ತಿತ್ತು. ಆದರೆ ಆಧುನಿಕತೆಯ ಬಿರುಗಾಳಿಗೆ ಸಿಲುಕಿದ ಕುಂಬಾರಿಕೆ ಕಲಾವಿದರು ತಾವು ಸಿದ್ದಪಡಿಸಿದ ಮಣ್ಣಿನ ಹಣತೆಗಳ ಬೇಡಿಕೆ ಕುಸಿತದಿಂದ ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ ಕುಂಬಾರರ ಬದುಕು.

ಜೇಡಿ ಮಣ್ಣಿನ ಹಣತೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಕುಂಬಾರರು, ಇದೀಗ ಪಿಂಗಾಣಿ ಹಣತೆ ಆಮದು ಮಾಡಿಕೊಂಡು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಣ್ಣಿನ ಹಣತೆ ಅಗತ್ಯವಿದ್ದಷ್ಟು ಪೂರೈಕೆಯಿಲ್ಲದ ಕಾರಣ ಒಂದಾದರೆ, ಅಗತ್ಯವಿದ್ದರೂ ಬೇಡಿಕೆ ಇಲ್ಲದ ಕಾರಣದಿಂದ ಕುಂಬಾರರಿಗೆ ಆರ್ಥಿಕ ಸಂಕಷ್ಟ ಎದುರಿಸುವ ಭೀತಿ ಎದುರಾಗಿದೆ.
ಪಿಂಗಾಣಿ ಹಣತೆ ಖರೀದಿ ಜೋರು:
ಈ ಹಿಂದೆ ಕುಂಬಾರರು ಸಿದ್ದಪಡಿಸಿದ ಮಣ್ಣಿನ ಹಣತೆಗಳಿಗೆ ಭಾರೀ ಬೇಡಿಕೆಯಿತ್ತು, ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿತ್ತು, ಒಬ್ಬೊಬ್ಬರು ಕನಿಷ್ಠ 40-50 ಹಣತೆ ಖರೀದಿಸುತ್ತಿದ್ದರು. ಆದರೆ ಇದೀಗ ಆ ಕಾಲವಿಲ್ಲ. ಆಧುನಿಕತೆಯ ಭರಾಟೆಯಿಂದಾಗಿ ಮಣ್ಣಿನ ಹಣತೆ ಖರೀದಿಸುವವರ ಸಂಖ್ಯೆ ಬೆರಳೆಣಿಕೆಗೆ ಕುಸಿದಿದೆ. ಮಣ್ಣಿನ ಹಣತೆ ಬದಲು ಪಿಂಗಾಣಿ ದೀಪ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಇತ್ತೀಚೆಗೆ ಪಿಂಗಾಣಿ ದೀಪಗಳೂ ಮರೆಯಾಗುತ್ತಿದ್ದು ಗ್ರಾಹಕರು ಎಲ್ಇಡಿ ದೀಪಗಳಿಗೆ ಮೋರೆ ಹೋಗುತ್ತಿರುವ ಕಾರಣ ಕುಂಬಾರರಿಗೆ ಬೆಳಕಿನ ಹಬ್ಬ ಸಂಭ್ರಮವಾಗಿ ಉಳಿದಿಲ್ಲ.
ಅನ್ಯ ರಾಜ್ಯಗಳಿಂದ ಹಣತೆ ಆಮದು:
ಆಧುನಿಕತೆಗೆ ತಕ್ಕಂತೆ ಕುಂಬಾರರು ತಮ್ಮ ವೃತ್ತಿ ಬದುಕಿನಲ್ಲಿ ಬದಲಾವಣೆ ಕಂಡುಕೊಂಡಿದ್ದಾರೆ. ತಾವು ತಯಾರಿಸಿದ ಮಣ್ಣಿನ ಹಣತೆಗೆ ಬೇಡಿಕೆ ಇಲ್ಲದ ಕಾರಣ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಚೀನಿ ಮಣ್ಣಿನ ಹಣತೆಗಳು, ಹೊಳಪಿನ ಮೈಮಾಟವುಳ್ಳ ವೈವಿಧ್ಯಮಯ ಕಲಾಕೃತಿಯ ಪಿಂಗಾಣಿ ಹಣತೆ ಆಮದು ಮಾಡಿಕೊಳ್ಳಲು ಶುರುಮಾಡಿದ್ದಾರೆ.
“ನಾವು ತಯಾರಿಸುವ ಮಣ್ಣಿನ ಹಣತೆಗೆ ಹೆಚ್ಚಿನ ಗ್ರಾಹಕರ ಬೇಡಿಕೆಯಿಲ್ಲ. ಕಾಲಕ್ಕೆ ತಕ್ಕಂತೆ ನಾವು ಗ್ರಾಹಕರಿಗೆ ಆಕರ್ಷಣೆಯಾಗಿ ಕಾಣುವ ವೈವಿಧ್ಯಮಯ ಕಲಾಕೃತಿಯ ಪಿಂಗಾಣಿ ಹಣತೆಗಳು ಆಮದು ಮಾಡಿಕೊಳ್ಳುತ್ತಿದ್ದೇವೆ. ಮಹಾರಾಷ್ಟ್ರದ ಲಾತೂರ್, ಪುಣೆ ಹಾಗೂ ಗುಜರಾತ್ ರಾಜ್ಯಗಳಿಂದ ವಿವಿಧ ಪ್ರಕಾರದ ಹಣತೆಗಳು ಖರೀದಿಸಿ ಬೀದರ್ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಮಾರಾಟ ಮಾಡಲಾಗುತ್ತಿದೆ. ದೀಪಾವಳಿ ಹಬ್ಬದ ನಾಲ್ಕು ದಿನ ಮುಂಚೆಯಿಂದ ಹಬ್ಬದವರೆಗೆ ಉತ್ತಮ ವ್ಯಾಪಾರ ನಡೆಯುತ್ತದೆ. ಈ ಸಲ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದ್ದಕ್ಕೆ ಬರಗಾಲ ಆವರಿಸಿದ ಕಾರಣ ಹಣತೆ ಖರೀದಿಗೂ ಒಂದಿಷ್ಟು ಹೊಡೆತ ಕಂಡಿದೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹಣತೆ ಮಾರಾಟಗಾರ ನಾಗರಾಜ ಕುಂಬಾರ ರಾಜೇಶ್ವರ.
ಮಣ್ಣಿನ ಹಣತೆಯಿಂದ ಪರಿಸರಸ್ನೇಹಿ ದೀಪಾವಳಿ ಆಚರಿಸಿ:
ಮನೆ, ಅಂಗಡಿಗಳ ಮುಂದೆ ದೀಪಾವಳಿ ಹಬ್ಬದ ದಿನ, ಹಬ್ಬದ ನಂತರದ ಒಂಬತ್ತು ದಿನಗಳವರೆಗೆ ಹಣತೆಯಲ್ಲಿ ದೀಪ ಹಚ್ಚಿ ಇಡುತ್ತಾರೆ. ಇದಕ್ಕಾಗಿ ಗ್ರಾಹಕರು ಹಣತೆಗಳು ಡಜನ್ ಲೆಕ್ಕದಲ್ಲಿ ಖರೀದಿಸುತ್ತಾರೆ. 1 ಡಜನ್ ಮಣ್ಣಿನ ಹಣತೆಗಳಿಗೆ 30 ರಿಂದ 40 ರೂ. ಬೆಲೆಯಿದೆ ಹಾಗೂ 1 ಡಜನ್ ಪಿಂಗಾಣಿ ಹಣತೆಗಳ ಬೆಲೆ 120-140 ರೂ. ಇದೆ. ಇನ್ನು ವಿವಿಧ ಕಲಾಕೃತಿಯ ಬಣ್ಣದ ಹಣತೆಯ ಆಕಾರ, ಬಣ್ಣಕ್ಕೆ ಅನುಗುಣವಾಗಿ ಬೆಲೆಯಿದೆ. ಪ್ರತಿದಿನ 3 ರಿಂದ 4 ಸಾವಿರ ವ್ಯಾಪಾರ ಆಗುತ್ತದೆ. ನಾವೇ ಸಿದ್ದಪಡಿಸಿದ ಹಣತೆ ಹೆಚ್ಚು ಮಾರಾಟವಾದರೆ ನಮಗೆ ಹೆಚ್ಚಿನ ಆದಾಯವಾಗುತ್ತಿತ್ತು, ಆದರೆ ಬೇರೆಡೆಯಿಂದ ಖರೀದಿಸಿ ಮಾರಾಟ ಮಾಡುವ ನಮಗೆ ಎಲ್ಲಾ ಖರ್ಚು ವೆಚ್ಚ ತೆಗೆದರೆ ತಕ್ಕಮಟ್ಟಿಗೆ ಆದಾಯ ಗಳಿಸಲು ಸಾಧ್ಯವಿಲ್ಲ ಎಂಬುದು ಕುಂಬಾರಿಕೆ ಕರಕುಶಲಕರ್ಮಿಗಳ ಅಭಿಮತ.

“ದೀಪಾವಳಿ ಎಂದರೆ ದೀಪದ ಹಬ್ಬ. ದೀಪದ ಅಲಂಕಾರಕ್ಕೆ ಬದಲಾಗಿ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್, ಪಿಂಗಾಣಿ, ಬಲ್ಬ್ ಗಳ ಬಳಕೆ ಹೆಚ್ಚಾಗುತ್ತಿದೆ. ಇದು ಸರಿಯಲ್ಲ. ಅನಾವಶ್ಯಕ ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯದಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಮಣ್ಣಿನ ಹಣತೆಯಲ್ಲಿ ಎಣ್ಣೆಯನ್ನು ಹಾಕಿ, ಹತ್ತಿಯಿಂದ ತಯಾರಿಸಲ್ಪಟ್ಟ ಬತ್ತಿಯಿಂದ ದೀಪ ಬೆಳಗಿಸಿದರೆ, ಅದು ಪರಿಸರಕ್ಕೆ ಪೂರಕವಾಗಿದ್ದು ಮಾಲಿನ್ಯವನ್ನು ಶುದ್ಧಗೊಳಿಸಲು ಸಹಕಾರಿಯಾಗುತ್ತದೆ. ವಿದ್ಯುತ್ ದೀಪಾಲಂಕಾರದಿಂದ ಅದೆಷ್ಟೋ ಮನೆಗಳಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅನಾಹುತಗಳು ಜರುಗಿವೆ” ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಹೇಳಿದರು.
ಹಣತೆ ವ್ಯಾಪಾರಕ್ಕೆ ಫುಟ್ ಪಾತ್ ಗತಿ :
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಣತೆ ಮಾರಾಟಗಾರರಿಗೆ ನಿಗದಿತ ಸ್ಥಳವಿಲ್ಲದ ಕಾರಣ ನಗರದ ನೆಹರು ಕ್ರೀಡಾಂಗಣ ಮುಂಭಾಗ, ಸಾಯಿ ಸ್ಕೂಲ್ ಮುಂಭಾಗದ ರಸ್ತೆ ಬದಿ ಸೇರಿದಂತೆ ನಗರದ ವಿವಿಧ ರಸ್ತೆ ಬದಿಯಲ್ಲಿ ಹಣತೆ ಅಂಗಡಿಗಳು ತಲೆ ಎತ್ತಿವೆ.
“ಪ್ರತಿವರ್ಷ ಪಟಾಕಿ ಮಾರಾಟಗಾರರಿಗೆ ಸಾಯಿ ಸ್ಕೂಲ್ ಮುಂಭಾಗದಲ್ಲಿ ಸ್ಥಳ ಗುರುತಿಸಿ ಮಳಿಗೆ ಸ್ಥಾಪಿಸಲು ಅನುಮತಿ ನೀಡುವ ಜಿಲ್ಲಾಡಳಿತ ಹಣತೆ ಮಾರಾಟಕ್ಕೆ ತಾತ್ಕಾಲಿಕ ಮಳಿಗೆ ಸ್ಥಾಪಿಸಿಕೊಳ್ಳಲು ಸೂಕ್ತ ಜಾಗ ಗುರುತಿಸುತ್ತಿಲ್ಲ. ಎರಡು ದಿನಗಳಿಂದ ರಸ್ತೆ ಬದಿಯೇ ಅಂಗಡಿ ಹಾಕಿಕೊಂಡು ಹಣತೆ ವ್ಯಾಪಾರ ಮಾಡುತ್ತಿದ್ದೇವೆ. ಶುಕ್ರವಾರ ದಿಢೀರನೆ ಬಂದು ರಸ್ತೆ ಬದಿ ವ್ಯಾಪಾರಕ್ಕೆ ಅನುಮತಿಯಿಲ್ಲವೆಂದು ಹೇಳಿದ್ದಾರೆ. ಇದರಿಂದ ದಿಕ್ಕುತೋಚದಂತಾಗಿದೆ. ಕುಂಬಾರಿಕೆ ವ್ಯಾಪಾರಸ್ಥರಿಗೂ ಜಿಲ್ಲಾಡಳಿತ ಸೂಕ್ತ ಜಾಗ ಗುರುತಿಸಿ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಹಣತೆ ಮಾರಾಟಗಾರ ರಘುನಾಥ ಗಾದಗಿ ಒತ್ತಾಯಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.