ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪೆಪಡೆಯಬೇಕೆಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗೆ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂರ ಮನವಿ ಸಲ್ಲಿಸಿದರು.
“ಪ್ರತಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಾರ್ಷಿಕ ₹5000 ದಿಂದ ₹60,000ದವರೆಗೆ ವಿಸ್ತರಿಸಲ್ಪಡುತ್ತಿದ್ದ ವಿದ್ಯಾರ್ಥಿವೇತನದ ಮೊತ್ತವನ್ನು ₹1,100 ರಿಂದ ₹11,000ಕ್ಕೆ ಇಳಿಸಿದ್ದಾರೆ” ಎಂದು ಆರೋಪಿಸಿದರು.
“ಈಗಾಗಲೇ ಎಲ್ಲ ಹಂತದ ಶಿಕ್ಷಣವು ವ್ಯಾಪಾರೀಕರಣಗೊಂಡು ಶುಲ್ಕಗಳು ಗಗನಕ್ಕೇರಿವೆ. ಬಡ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಪಡೆಯುವುದು ಅತ್ಯಂತ ದುಃಸ್ತರವಾಗಿರುವ ಇಂದಿನ ಪರಿಸ್ಥಿತಿಯಲ್ಲಿ, ಸರ್ಕಾರದ ಶಿಷ್ಯವೇತನವು ಸಾಕಷ್ಟು ಸಹಕಾರಿಯಾಗಿತ್ತು. ಈ ಶಿಷ್ಯವೇತನದಿಂದಾಗಿ ಬಡ ಕಾರ್ಮಿಕರ ಮಕ್ಕಳು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೇರಿದಂತೆ ಉನ್ನತ ವ್ಯಾಸಂಗ ಪಡೆಯಬಹುದಾಗಿದೆ. ಆದರೆ, ಈಗ ಶಿಷ್ಯವೇತನದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿರುವುದು ಕಾರ್ಮಿಕರ ಮಕ್ಕಳ ಶಿಕ್ಷಣದ ಕನಸುಗಳನ್ನು ಚಿವುಟಿ ಹಾಕಿದಂತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ವಸತಿ ಶಾಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ಮೂವರ ಬಂಧನ
“ಸೆಸ್ ಹೆಸರಲ್ಲಿ ಸಂಗ್ರಹವಾಗುತ್ತಿರುವ ಹಣವು ಕಾರ್ಮಿಕ ನಿಧಿಯಲ್ಲಿ ಹೇರಳವಾಗಿ ಶೇಖರಣೆಯಾಗುತ್ತಿದೆ. ಇದನ್ನು ಸಂಪೂರ್ಣವಾಗಿ ಕಾರ್ಮಿಕರ ಏಳಿಗೆಗೆ ಬಳಸಬೇಕು. ಕಡಿತಗೊಳಿಸಿರುವ ಶಿಷ್ಯವೇತನದ ಮೊತ್ತವನ್ನು ಹೆಚ್ಚಿಸಬೇಕು” ಎಂದು ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಾಜಪೂರ ಆಗ್ರಹಿಸಿದ್ದಾರೆ.