ಕುಟುಂಬ ರಾಜಕಾರಣಕ್ಕೆ ಬಿಜೆಪಿ ವಿರೋಧವಾಗಿಯೇ ಇದೆ. ಬಿಜೆಪಿ ವ್ಯಕ್ತಿ ಮೇಲೆ ನಿಂತಿಲ್ಲ. ಬಿಜೆಪಿಯಲ್ಲಿ ಸ್ಥಾನಮಾನದ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಎಲ್ಲರೂ ಕಾರ್ಯಕರ್ತರೇ ಆಗಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರೂ ಕೂಡ ಕಾರ್ಯಕರ್ತರೇ ಆಗಿದ್ದಾರೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, “ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುತ್ತೇವೆ. ರಾಜ್ಯದಲ್ಲಿ ಎಲ್ಲ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುವಲ್ಲಿ ವಿಜಯೇಂದ್ರ ಯಶಸ್ವಿಯಾಗಲೆಂದು ಹಾರೈಸುತ್ತೇನೆ” ಎಂದು ಅವರು ಹೇಳಿದ್ದಾರೆ.
“ಇಡೀ ಜಗತ್ತು ಭಾರತದ ಲೋಕಸಭಾ ಚುನಾವಣೆಯತ್ತ ನೋಡುತ್ತಿದೆ. ದೇಶದ ಪ್ರತಿ ಹಳ್ಳಿಗಳಲ್ಲಿ ಜನ ಮೋದಿ-ಮೋದಿ ಎನ್ನುತ್ತಿದ್ದಾರೆ. ನಾವು ಯಾವ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲ್ಲ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ನವರು ಕುಟುಂಬ ರಾಜಕಾರಣದ ಬಗ್ಗೆ ಮಾತಾಡುತ್ತಿದ್ದಾರೆ. ಅವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಅಧಿಕಾರ ಇದೆಯೇ? ಅವರು ಟೀಕಿಸುವುದಕ್ಕಾಗಿಯೇ ಯಡಿಯೂರಪ್ಪ ಅಥವಾ ಅವರ ಮಕ್ಕಳು ರಾಜ್ಯಾಧ್ಯಕ್ಷರಾಗಲಿ ಎಂದು ಕಾಯುತ್ತಿದ್ದರು. ಆದರೆ, ಕಾಂಗ್ರೆಸ್ಅನ್ನು ನೆಹರು, ಇಂದಿರಾಗಾಂಧಿ ಕುಟುಂಬದವರೇ ಆಳಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
“ನನಗೆ ಪಕ್ಷ ಯಾವ ಜವಾಬ್ದಾರಿ ಕೊಡುತ್ತದೆಯೋ ಅದನ್ನು ನಿರ್ವಹಿಸುತ್ತೇನೆ. ನಮ್ಮದು ಸಾಮೂಹಿಕ ನೇತೃತ್ವದ ಪಕ್ಷವಾಗಿದೆ” ಎಂದು ಹೇಳಿದ್ದಾರೆ.