ರಾಜ್ಯದಲ್ಲಿಯೇ ಪ್ರಥಮ ಬಾರಿ ಝೀಕಾ ವೈರಸ್ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿನ ಸೊಳ್ಳೆಯೊಂದರಲ್ಲಿ ಕಂಡು ಬಂದಿದ್ದ ಹಿನ್ನೆಲೆ, ತಲಕಾಯಲಬೆಟ್ಟ ಗ್ರಾಮದ ಐದು ಕಿ.ಮೀ ವ್ಯಾಪ್ತಿಯಲ್ಲಿರುವ 5 ಗ್ರಾಮಗಳ 37 ಗರ್ಭಿಣಿಯರು ಹಾಗೂ 11 ಜ್ವರ ಪೀಡಿತರ ಒಟ್ಟು 48 ಮಂದಿಯ ರಕ್ತ ಮಾದರಿಯನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಝೀಕಾ ವೈರಸ್ ಪತ್ತೆಗಾಗಿ ಕಳುಹಿಸಿದ್ದ 27 ಮಾದರಿಯ ಫಲಿತಾಂಶ ಬಂದಿದ್ದು, ಅದರಲ್ಲಿ ವೈರಸ್ ಇಲ್ಲದಿರುವುದು ಪತ್ತೆಯಾಗಿದೆ.
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಎಕ್ಸ್‌ನಲ್ಲಿ, “ಸೊಳ್ಳೆಗಳಲ್ಲಿ ಝೀಕಾ ವೈರಾಣು ಪತ್ತೆಯಾಗಿದ್ದ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದ ಸ್ಥಳೀಯರ ರಕ್ತ ಪರೀಕ್ಷೆಯ ವರದಿಯಲ್ಲಿ ಝೀಕಾ ವೈರಸ್ ಪತ್ತೆಯಾಗಿಲ್ಲ. 23 ಗರ್ಭಿಣಿಯರು ಸೇರಿದಂತೆ 27 ಮಂದಿಯ ರಕ್ತ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲಾಗಿತ್ತು” ಎಂದು ಹೇಳಿದ್ದಾರೆ.
ಸೊಳ್ಳೆಗಳಲ್ಲಿ ಝಿಕಾ ವೈರಾಣು ಪತ್ತೆಯಾಗಿದ್ದ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ತಲಕಾಯಲ ಬೆಟ್ಟದ ಸ್ಥಳೀಯರ ರಕ್ತ ಪರೀಕ್ಷೆಯ ವರದಿಯಲ್ಲಿ ಝೀಕಾ ವೈರಸ್ ಪತ್ತೆಯಾಗಿಲ್ಲ.
23 ಗರ್ಭಿಣಿಯರು ಸೇರಿದಂತೆ 27 ಮಂದಿಯ ರಕ್ತ ಮಾದರಿಯನ್ಪು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲಾಗಿತ್ತು. ಇದೀಗ ರಕ್ತ ತಪಾಸಣೆಯ ವರದಿಯು ಇಲಾಖೆಯ ಕೈ… pic.twitter.com/i2B6ZLgEsV
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 10, 2023
“ಇದೀಗ, ರಕ್ತ ತಪಾಸಣೆಯ ವರದಿಯು ಇಲಾಖೆಯ ಕೈ ಸೇರಿದ್ದು, ಝೀಕಾ ವೈರಾಣು ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಟಾಕಿ ಅವಘಡಗಳ ಚಿಕಿತ್ಸೆಗೆ 24 ಗಂಟೆ ತುರ್ತು ಸೇವೆ ನೀಡಲು ಸಜ್ಜಾದ ಆಸ್ಪತ್ರೆಗಳು
“ನಮ್ಮ ಆರೋಗ್ಯ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗರ್ಭಿಣಿಯರ ಆರೋಗ್ಯದ ಮೇಲೆ ವಿಶೇಷ ನಿಗಾ ಇಡಲಾಗಿದೆ. ಝೀಕಾ ವೈರಸ್ ಕುರಿತು ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ, ಎಲ್ಲರೂ ಎಚ್ಚರ ವಹಿಸಬೇಕಿದೆ” ಎಂದು ಹೇಳಿದ್ದಾರೆ.