ಹೊಸಿಲ ಒಳಗೆ-ಹೊರಗೆ | ಮದುವೆಯನ್ನು ಮರೆಯಬಲ್ಲೆವೇ?

Date:

Advertisements


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)  

ಲೈಂಗಿಕ ಬಯಕೆಗಳು, ಹೆಣ್ಣು-ಗಂಡಿನ ಸಾಂಗತ್ಯ ಬದುಕಿನ ಒಂದು ಅಗತ್ಯ ಹೌದು; ಆ ಹೊತ್ತು ಬಂದಾಗ, ಅಂತಹ ಒಂದು ವ್ಯವಸ್ಥೆ ಮಾಡಿದರಾಯಿತು, ಅಷ್ಟೇ. ಅದು ಬಿಟ್ಟು ಹೆಣ್ಣು ಹುಟ್ಟುತ್ತಿದ್ದಂತೆಯೇ, ಅವಳ ಮದುವೆಯ ಚಿಂತೆ ಆವರಿಸಿಬಿಟ್ಟರೆ ಬದುಕು ಹೇಗಿರಬಹುದು? ಮದುವೆಯ ಖರ್ಚಿನ ಭಯಕ್ಕೆ ‘ಹೆಣ್ಣುಮಗುವೇ ಬೇಡ’ ಅನ್ನುವ ಪರಿಸ್ಥಿತಿಯೂ ಇದೆಯಲ್ಲ? ಇದೆಂತಹ ದುರಂತ!

ದೆಹಲಿಯಿಂದ ಹಿಂದಿಯಲ್ಲಿ ಪ್ರಕಟವಾಗುತ್ತಿದ್ದ ‘ತಮಾಷಾ’ ಎಂಬ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಕತೆಯ ಸಾರಾಂಶ ಹೀಗಿದೆ… ಒಬ್ಬಳು ಗಿರಿಜಾ ಎಂಬ ಹದಿಹರೆಯದ ಹುಡುಗಿ ಇರುತ್ತಾಳೆ. ಹಾಡುವುದೆಂದರೆ ಇಷ್ಟ. ದೊಡ್ಡ ಗಾಯಕಿ ಆಗಬೇಕು ಎಂಬ ಕನಸು. ಆದರೆ, ಇನ್ನೇನು ಹೈಸ್ಕೂಲ್ ಮುಗಿಸಿದ್ದಾಳೆ, ಮನೆಯಲ್ಲಿ ಮದುವೆಯ ನಿರ್ಧಾರ ಮಾಡುತ್ತಾರೆ. ಹುಡುಗಿಗೆ ಬೇಸರ. ಅಳುತ್ತ ಕಾಡಿಗೆ ಹೋಗುತ್ತಾಳೆ. ಜೋರುಜೋರಾಗಿ ಅಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಕಾಡಿನ ಯಕ್ಷಿಣಿಯೊಬ್ಬಳು ಬರುತ್ತಾಳೆ. ಹುಡುಗಿಯನ್ನು ಮಾತಾಡಿಸುತ್ತಾಳೆ. ಪುಟ್ಟ ಹುಡುಗಿಯದ್ದು ಒಂದೇ ಹಠ. ತನ್ನ ಮದುವೆಯನ್ನು ಹೇಗಾದರೂ ನಿಲ್ಲಿಸುವಂತೆ ಬೇಡುತ್ತಾಳೆ, ಕಾಡುತ್ತಾಳೆ. ಕೊನೆಗೆ ಯಕ್ಷಿಣಿ ಒಂದು ಉಪಾಯ ಹುಡುಕುತ್ತಾಳೆ. ಆ ಹುಡುಗಿ ವಾಸವಾಗಿರುವ ಹಳ್ಳಿಯವರು ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಬೇಕೆಂಬ ವಿಷಯವನ್ನೇ ಮರೆತುಹೋಗುವಂತೆ ಶಾಪ ಕೊಡುತ್ತಾಳೆ. ಮುಂದೆ ಊರಿನ ಹೊರಗಿನವರು ಯಾರಾದರು ಬಂದು ವಿಚಾರಿಸಿದಾಗ ಈ ಶಾಪ ಅಳಿಸಿಹೋಗುತ್ತದೆ ಎಂದು ಹುಡುಗಿಗೆ ತಿಳಿಸುತ್ತಾಳೆ. ಮುಂದೇನಾಯಿತು ಎಂಬ ಕುತೂಹಲ ಆಗಿಯೇ ಆಗುತ್ತದೆ ಅಲ್ಲವೇ?

ಮಹಿಳೆಯರ ಜೊತೆಗಿನ ಒಂದು ತರಬೇತಿಯಲ್ಲಿ ಈ ಕತೆಯನ್ನು ಹೇಳಿ, ಸಣ್ಣ ಗುಂಪುಗಳನ್ನು ಮಾಡಿ, ಈ ಕತೆಯನ್ನು ವಿಸ್ತರಿಸುವಂತೆ ಚಟುವಟಿಕೆ ಕೊಟ್ಟಿದ್ದೆ. ಐದು ಗುಂಪಿನವರೂ ಅತ್ಯಂತ ವೇಗದಲ್ಲಿ ಕತೆ ಮುಂದುವರಿಸಿ ಅಂತ್ಯ ಕಾಣಿಸಿದ್ದರು. ‘ಗಿರಿಜಾ ಓದು ಮುಂದುವರಿಸಿದಳು, ಹಾಡುಗಾತಿಯಾದಳು; ಊರಿಗೆ ಹೊರಗಿನಿಂದ ಯಾರೋ ಬಂದರು, ಮನೆಯವರಿಗೆ ಮದುವೆ ನೆನಪಾಯಿತು, ಮದುವೆ ಮಾಡಿಸಿದರು…’ – ಹೆಚ್ಚೂಕಡಿಮೆ ಎಲ್ಲರ ಕತೆ ಈ ಧಾಟಿಯಲ್ಲಿಯೇ ಇತ್ತು. ಕತೆಯಲ್ಲಿ ಸ್ಪಷ್ಟವಾಗಿ ಮದುವೆ ಮರೆತ ವಿಚಾರ ಇದ್ದರೂ ಈ ಮಹಿಳೆಯರಿಗೆ ಮದುವೆಯನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಚಕಚಕನೆ ಏನೋ ಮಾಡಿ, ಮದುವೆಯಂತೂ ಮಾಡಿಸಿಯೇಬಿಟ್ಟಿದ್ದರು. ಒಂದು ಕತೆಯ ಸಂದರ್ಭ – ಅಂದರೆ, ಕಾಲ್ಪನಿಕ ನೆಲೆಯಲ್ಲೂ ಮದುವೆ ಎಂಬ ವಿಚಾರವನ್ನು ಮರೆತು ಆಲೋಚಿಸುವುದು ಎಷ್ಟು ಕಷ್ಟ ಎಂಬುದು ಇಲ್ಲಿ ಕಂಡುಬಂದಿತ್ತು.

Advertisements

ಇರಲಿ, ಮೂಲ ಕತೆ ಹೀಗೆ ಮುಂದುವರಿಯುತ್ತದೆ… ಮದುವೆ ಎಂಬ ವಿಚಾರ ಮರೆತ ತಕ್ಷಣ ಗಿರಿಜಾ ಮಾತ್ರವಲ್ಲ, ಆ ಊರಿನ ಹುಡುಗಿಯರಿಗೆಲ್ಲ ಒಂದು ತರಹ ರೆಕ್ಕೆ-ಪುಕ್ಕ ಬಂದ ಹಾಗೆ ಆಗುತ್ತದೆ. ಯಾವುದಕ್ಕೂ ಯಾರಿಂದಲೂ ತಡೆ ಇರುವುದಿಲ್ಲ. ಎಲ್ಲರೂ ಚೆನ್ನಾಗಿ ಓದತೊಡಗುತ್ತಾರೆ. ಊರಿನಲ್ಲಿ ಅಡ್ಡಾಡತೊಡಗುತ್ತಾರೆ. ದಷ್ಟಪುಷ್ಟವಾಗಿ ಬೆಳೆಯುತ್ತಾರೆ. ಗಿರಿಜಾ ಚೆನ್ನಾಗಿ ಹಾಡಲು ಕಲಿಯುತ್ತಾಳೆ. ಮದುವೆಯ, ಗಂಡನ ಮನೆಯ ಹಂಗೇ ಇಲ್ಲವಲ್ಲ… ಅಷ್ಟರಲ್ಲಿ ಗಿರಿಜಾಳ ದೂರದ ಸಂಬಂಧಿಯೊಬ್ಬ ಊರಿಗೆ ಬರುತ್ತಾನೆ. ಗಿರಿಜಾ ಬೆಳೆದು ನಿಂತಿರುವ ಪರಿ ನೋಡಿ ಬೆರಗಾಗುತ್ತಾನೆ, ಊರಿನ ಹೆಣ್ಣುಮಕ್ಕಳೆಲ್ಲ ನಿರಾಳವಾಗಿ ಅಡ್ಡಾಡುವುದು ಕಂಡು ಕಣ್ಣು-ಬಾಯಿ ಬಿಡುತ್ತಾನೆ. ಗಿರಿಜಾಳ ಅಮ್ಮನ ಹತ್ತಿರ ಕೇಳುತ್ತಾನೆ, “ಏನಕ್ಕಾ ಇದು, ಈ ಹುಡುಗಿಯರಿಗೆ ಮದುವೆ ಮಾಡುವ ಯೋಚನೇ ಇಲ್ಲವೇ?” ತಕ್ಷಣ ಶಾಪ ಕಳಚಿ ಬೀಳುತ್ತದೆ. ಗಿರಿಜಾಳ ಅಮ್ಮನಿಗೆ, ಊರಿನ ಇತರ ಅಮ್ಮ-ಅಪ್ಪಂದಿರಿಗೆ ಒಂದು ಕ್ಷಣ ಗಾಬರಿಯಾಗುತ್ತದೆ.

ಆದರೆ, ಬೆಳೆದುನಿಂತಿರುವ ಹೆಣ್ಣುಮಕ್ಕಳ ಸಾಧನೆಗಳನ್ನು ನೋಡಿದಾಗ, ಹೊರ ಊರಿನಿಂದ ಬಂದ ಸಂಬಂಧಿಗೆ ವಿಶೇಷ ಅಚ್ಚರಿಯಾಗುತ್ತದೆ. ಊರಿನ ಎಲ್ಲ ವ್ಯವಹಾರಗಳಲ್ಲಿ ಹೆಣ್ಣುಮಕ್ಕಳು ಬಹಳ ದೃಢತೆಯಿಂದ ಭಾಗವಹಿಸುತ್ತಿದ್ದಾರೆ. ಪಂಚಾಯತ್ ಆಗುಹೋಗುಗಳಲ್ಲಿ ಸಕ್ರಿಯರಾಗಿದ್ದು ನೀರಿನ, ಉರುವಲಿನ, ಶೌಚಾಲಯದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿಸಿಕೊಂಡಿದ್ದಾರೆ. ಹೆಣ್ಣುಮಕ್ಕಳು ಮಾತ್ರವಲ್ಲ, ಊರು ಕೂಡ ಬಹಳ ಸುಧಾರಿಸಿದೆ. ಬೇರೆ-ಬೇರೆ ಊರಿನವರು ಈ ಊರು ನೋಡಲು ಬರುತ್ತಾರೆ. ಆಮೇಲೆ ಸಹಜವಾಗಿ ಅವರ ಮದುವೆಯೂ ಆಗುತ್ತದೆ. ಅವರು ಮದುವೆ ಆಗಿ ಹೋದ ಊರಿನಲ್ಲೂ ಈ ಗಟ್ಟಿಮುಟ್ಟಾದ ಹುಡುಗಿಯರು ಬಹಳ ಸುಧಾರಣೆಗಳನ್ನು ತರುತ್ತಾರೆ… ಇರಲಿ, ಕತೆಯ ಈ ಭಾಗ ನನಗೆ ಮುಖ್ಯವೇ ಅಲ್ಲ. ಈ ಒಟ್ಟು ಕತೆಯಲ್ಲಿ ನನಗೆ ಬಹಳ ಆಕರ್ಷಣೆ ಅನಿಸಿದ್ದು, ಒಂದಷ್ಟು ಕಾಲ ‘ಮದುವೆ ಮರೆಯುವುದು’ ಎಂಬ ಒಂದು ಕಲ್ಪನೆ. ಇದರೊಳಗೆ ಬಿಡುಗಡೆಯ ಒಂದು ಮಹಾಸೂತ್ರ ಇದೆ ಅನಿಸಿತ್ತು. ಮದುವೆ ಎಂಬ ಸಂಸ್ಥೆ ಹೇಗೆ ಹೆಣ್ಣುಮಕ್ಕಳ ಬೆಳವಣಿಗೆಯ ದಾರಿಯಲ್ಲಿ ಅಡಚಣೆಯಾಗಿ ನಿಲ್ಲುತ್ತದೆ ಎಂಬುದನ್ನು ದಿನನಿತ್ಯವೂ ನೋಡುತ್ತೇವಲ್ಲ!

ರಮಾ ಜಾಣ ಹುಡುಗಿ. ಪಿಯುಸಿ ಓದು ಮುಗಿಸಿದ್ದಳು. ಮುಂದೆ ಓದುವ ಯೋಚನೆ ಕೂಡ ಮಾಡುವ ಅವಕಾಶವಿರಲಿಲ್ಲ. ಆಕಸ್ಮಿಕವಾಗಿ ಶಿಕ್ಷಣಕ್ಕಾಗಿ ಕೆಲಸ ಮಾಡುವ ಸಂಸ್ಥೆಯೊಂದರಲ್ಲಿ ಒಂದು ವಿಶೇಷ ಅವಕಾಶ ಸಿಕ್ಕಿತು. ತನ್ನದೇ ಗ್ರಾಮದ ಹದಿಹರೆಯದ ಹೆಣ್ಣುಮಕ್ಕಳ ಓದಿಗೆ ಸಹಕಾರ ನೀಡುತ್ತ, ತನ್ನ ಓದನ್ನೂ ಮುಂದುವರಿಸುವ ಅವಕಾಶ. ಅವಳು ಕನಸಲ್ಲೂ ಊಹಿಸಿರದ ಅವಕಾಶ. ಕೆಲಸವನ್ನೂ ಚೆನ್ನಾಗಿ ಮಾಡಿದಳು. ತನ್ನ ಓದನ್ನೂ ಸಮರ್ಥವಾಗಿ ಮುಂದುವರಿಸಿ ಪದವಿ ಪಡೆದುಕೊಂಡಳು. ಅದೇ ಸಂಸ್ಥೆಯ ಬೆಂಬಲದಿಂದ ಅವಳಿಗೂ, ಅವಳ ಜೊತೆಗಾತಿಯರಾದ ಇನ್ನೈದು ಜನಕ್ಕೂ ಪ್ರತಿಷ್ಠಿತ ಕಾಲೇಜೊಂದರ ಸಮಾಜಸೇವಾ ವಿಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಕ್ಕಿತು. ರೆಕ್ಕೆ ಬಿಚ್ಚಿ ಹಾರುವಷ್ಟು ಸಂಭ್ರಮವಾಯಿತು. ಅಷ್ಟರಲ್ಲೇ, “ಹೋಗಬೇಕಾದರೆ ಎಂಗೇಜ್‍ಮೆಂಟ್ ಆಗಿಯೇ ಹೋಗಬೇಕು,” ಎಂದು ಮನೆಯಿಂದ ಅಪ್ಪಣೆ ಬಂತು. “ಎಂಗೇಜ್‍ಮೆಂಟ್ ಅಷ್ಟೇ ತಾನೇ’?” ಎಂದು ಒಪ್ಪಿಕೊಂಡಳು ರಮಾ. ಎಂಗೇಜ್‍ಮೆಂಟ್ ಆಯಿತು. ಆದ ತಕ್ಷಣ, “ನಿನ್ನ ಗಂಡನ ಮನೆಯವರು ಒಪ್ಪಿದರೆ ಮುಂದಿನ ಓದಿಗೆ ಹೋಗು,” ಎಂದರು ಮನೆಯವರು. ಗಂಡನ ಮನೆಯವರು ಒಪ್ಪಲಿಲ್ಲ. ಮನೆಯವರು ಬಹಳ ಜಾಣತನದಿಂದ ರಮಾಳನ್ನು ಸಿಕ್ಕಿಸಿಹಾಕಿದ್ದರು. ಮಗಳು ಹೆಚ್ಚು ಓದಿದರೆ, ಆಮೇಲೆ ಗಂಡು ಸಿಗದೆಹೋದರೆ ಎಂಬ ಆತಂಕ ಆ ಹೆತ್ತವರದ್ದು.

ಇತ್ತೀಚೆಗೆ, ‘ಪ್ರಜ್ಞಾ ಜಾಗೃತಿ ಶಿಬಿರ’ವೊಂದರಲ್ಲಿ ಯುವತಿಯರು ಹೇಳುತ್ತಿದ್ದರು; ಅವರ ಮನೆಯಲ್ಲಿ, “ಮದುವೆ ಆದ ಮೇಲೆ ಏನ್ ಬೇಕಾದ್ರೂ ಮಾಡ್ಕೋ, ಯಾವ ಬಟ್ಟೆ ಬೇಕಾದ್ರೂ ಹಾಕ್ಕೋ…” ಅಂತ ಪ್ರತಿಯೊಂದಕ್ಕೂ ಹೇಳುವುದು ವಾಡಿಕೆಯಂತೆ. “ಹೇರ್ ಕಟ್ ಮಾಡಲಿಕ್ಕೂ ಇನ್ನೂ ಮದುವೆ ಆಗಲಿರುವ ‘ಗಂಡ’ನ ಅನುಮತಿ ತಗೋಬೇಕಂತೆ, ಎಂತ ಹುಚ್ಚು…!” ಅಂತ ಗೊಣಗುತ್ತಿದ್ದರು. ಇವೆಲ್ಲ ಬಹಳ ಸಣ್ಣ ವಿಷಯವಾಗಿ ಕಂಡರೂ, ಹೇಗೆ ‘ಮದುವೆ’ ಅನ್ನುವುದು ಹುಡುಗಿಯರನ್ನು ನಿಯಂತ್ರಿಸುವ ಸಾಧನವಾಗಿದೆ ಎಂಬುದನ್ನು ಇಲ್ಲಿ ಕಾಣಬಹುದು. ಹೆಣ್ಣುಮಕ್ಕಳು ಸಮೃದ್ಧವಾಗಿ ಬೆಳೆಯಬೇಕಾದರೆ ‘ಮದುವೆ’ ಎಂಬ ವಿಚಾರವನ್ನು ಮರೆತು ಬೆಳೆಯುವುದು ಸಾಧ್ಯವಾಗಬೇಕು. ಲೈಂಗಿಕ ಬಯಕೆಗಳು, ಹೆಣ್ಣು-ಗಂಡಿನ ಸಾಂಗತ್ಯ ಬದುಕಿನ ಒಂದು ಅಗತ್ಯ ಹೌದು; ಆ ಹೊತ್ತು ಬಂದಾಗ, ಅಂತಹ ಒಂದು ವ್ಯವಸ್ಥೆ ಮಾಡಿದರಾಯಿತು, ಅಷ್ಟೇ. ಅದು ಬಿಟ್ಟು ಹೆಣ್ಣು ಹುಟ್ಟುತ್ತಿದ್ದಂತೆಯೇ, ಅವಳ ಮದುವೆಯ ಚಿಂತೆ ಆವರಿಸಿಬಿಟ್ಟರೆ ಬದುಕು ಹೇಗಿರಬಹುದು? ಮದುವೆಯ ಖರ್ಚಿನ ಭಯಕ್ಕೆ ‘ಹೆಣ್ಣುಮಗುವೇ ಬೇಡ’ ಅನ್ನುವ ಪರಿಸ್ಥಿತಿಯೂ ಇದೆಯಲ್ಲ? ಇದೆಂತಹ ದುರಂತ!

ಒಬ್ಬ ಹೆಣ್ಣುಮಗಳು ಅದೆಷ್ಟು ಓದಿದರೂ, ಎಂತೆಂತಹ ಸಾಧನೆ ಮಾಡಿದರೂ ಎದುರಾಗುವ ಪ್ರಶ್ನೆ, “ಇನ್ನೂ ಸೆಟಲ್ ಆಗಿಲ್ಲವೇ?” ಈ ‘ಸೆಟಲ್’ ಅನ್ನುವ ಪದದ ಅರ್ಥವನ್ನೇ ಬದಲಾಯಿಸಬೇಕು. ಹಾಗಾದರೆ, ಇದರ ಅರ್ಥ ‘ಮದುವೆಯೇ ಬೇಡ’ ಎಂಬುದೇ? ಮದುವೆ ಬೇಕೇ, ಬೇಡವೇ ಅನ್ನುವುದು ಎರಡನೇ ಪ್ರಶ್ನೆ; ಇಲ್ಲಿ ಕೇಳುತ್ತಿರುವುದು ಇಡೀ ಬದುಕು ಮದುವೆಗಾಗಿಯೇ ಮುಡಿಪಿಡುವುದು ಎಷ್ಟು ಸೂಕ್ತ ಎಂದು. ಮದುವೆಯ ಹಂಗಿಲ್ಲದೆ ಹೆಣ್ಣುಮಕ್ಕಳನ್ನು ಬೆಳೆಸುವ ಅವಕಾಶ ಇದ್ದರೆ ಹೇಗಿರಬಹುದು? ಒಂದು ಕ್ಷಣ… ಒಂದೇ ಒಂದು ಕ್ಷಣ ಕಲ್ಪಿಸಿಕೊಂಡು ನೋಡಿ. ಮದುವೆಯನ್ನು ಮರೆಯಬಲ್ಲೆವಾ? ಕಲ್ಪನೆಯಲ್ಲಾದರೂ ಮದುವೆಯನ್ನು ಮರೆಯಬಲ್ಲೆವಾ?

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X