ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು, ‘ತಮ್ಮ ಮನೆ ಮುಂದೆ ಚರಂಡಿ ನಿರ್ಮಾಣ ಮಾಡಿಸಿಕೊಡಿ’ ಎಂದು ಪ್ರಧಾನಿಗೆ ಪತ್ರ ಬರೆದಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಆತ ಪತ್ರ ಬರೆದ ನಂತರ ಎಚ್ಚೆತ್ತ ಪಂಚಾಯತ್ ಅಧಿಕಾರಿಗಳು ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.
ಮಂಡ್ಯ ಬಳಿಯ ಹಳೇಬೂದನೂರು ನಿವಾಸಿ ಬಿ.ಎಸ್ ಚಂದ್ರಶೇಖರ್ ಎಂಬವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಕಳೆದ ಐದು ವರ್ಷಗಳಿಂದ ಅವರ ಮನೆಯ ಮುಂದೆ ಚರಂಡಿ ನಿರ್ಮಾಣ ಮಾಡಲಾಗಿಲ್ಲ. ಚರಂಡಿ ನಿರ್ಮಾಣಕ್ಕಾಗಿ ಅವರು ಹಲವು ಬಾರಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರು. ಆದರೂ, ಸೂಕ್ತ ಸ್ಪಂದನೆ ದೊರೆತಿರಲಿಲ್ಲ. ಪಂಚಾಯತಿಯ ನಿರ್ಲಕ್ಷ್ಯದಿಂದ ಅಸಮಾಧಾನಗೊಂಡು ಚಂದ್ರರಶೇಖರ್ ಅವರು ಜುಲೈ 5ರಂದು ಸಿಪಿಜಿಆರ್ ಎಂಎನ್ ಪೋರ್ಟಲ್ ಪ್ರಧಾನಿಗೆ ಪತ್ರ ರವಾಸಿದ್ದಾರೆ.
ಪ್ರಧಾನಿ ಕಚೇರಿಯಿಂದ ಸಂಬಂಧಪಟ್ಟ ಇಲಾಖೆಗೆ ಸೂಚನೆ ಬಂದಿದೆ ಎಂದು ಹೇಳಲಾಗಿದೆ. ಇದೀಗ, ಅಧಿಕಾರಿಗಳು ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.