ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೊಂದು ಸೈಬರ್ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ನಾನಾ ರೀತಿಯಲ್ಲಿ ವಂಚಕರು ಜನರನ್ನು ಯಾಮಾರಿಸಿ ಅವರಿಂದ ಹಣವನ್ನು ಲಪಟಾಯಿಸುತ್ತಿದ್ದಾರೆ. ಇದೀಗ, ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ನೋಂದಾಯಿಸಲಾದ ಸಿಮ್ ಕಾರ್ಡ್ ಅನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಕಥೆ ಹೇಳಿ ನಂಬಿಸಿ ವಂಚಕರು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹76 ಸಾವಿರ ವಂಚಿಸಿರುವ ಘಟನೆ ನಡೆದಿದೆ.
ರಮೇಶ್ ದ್ರುವರಾವ್ ದೇಶಪಾಂಡೆ (55) ಮೋಸ ಹೋದವರು. ಇವರು ನಗರದ ಕೆಂಪಾಪುರದ ಭುವನೇಶ್ವರಿನಗರದ ನಿವಾಸಿ. ಈ ಘಟನೆಗೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ವಂಚನೆ?
ನ.6ರಂದು ಬೆಳಗ್ಗೆ 11.30ರ ಸುಮಾರಿಗೆ ರಮೇಶ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ.
ಬಳಿಕ ಅಪರಿಚಿತ ವ್ಯಕ್ತಿ ಆಧಾರ್ ಕಾರ್ಡ್ ಬಳಸಿಕೊಂಡು ನೋಂದಾಯಿಸಲಾದ ಸಿಮ್ ಕಾರ್ಡ್ ಅನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿ ಕರೆಯನ್ನು ಕಟ್ ಮಾಡಿದ್ದಾನೆ. ಬಳಿಕ, ರಮೇಶ್ ಅವರು ಇಂಟರನೆಟ್‌ನಲ್ಲಿ ಟಿಆರ್‌ಎಐ ಕಸ್ಟಮರ್ ಕೇರ್ ನಂಬರ್ ಅನ್ನು ಹುಡುಕಾಡಿ ವೆಬ್‌ಸೈಟ್‌ನಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದ್ದಾರೆ. ರಮೇಶ್ ಕರೆ ಮಾಡಿದ ವ್ಯಕ್ತಿಯೂ ಕೂಡ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿ ಭರವಸೆ ನೀಡಿದ್ದಾರೆ.
ರಮೇಶ್ ಅವರಿಗೆ ಕರೆಯನ್ನು ಕಟ್ ಮಾಡದಂತೆ ತಿಳಿಸಿದ್ದಾರೆ. ಜತೆಗೆ ವಾಟ್ಸ್‌ಆಪ್‌ನಲ್ಲಿ ಕಳಿಸುವ ಫೈಲ್ ಅನ್ನು ಭರ್ತಿ ಮಾಡಲು ತಿಳಿಸಿದ್ದಾರೆ. ಅದರಂತೆ, ರಮೇಶ್ ಕೂಡ ವಿವರಗಳನ್ನು ಭರ್ತಿ ಮಾಡಿದ್ದಾರೆ.
ರಮೇಶ್ ಅವರು ಅಪರಿಚತ ವ್ಯಕ್ತಿ ಕಳಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಹಂತಹಂತವಾಗಿ ರಮೇಶ್ ಅವರ ಬ್ಯಾಂಕ್ ಖಾತೆಯಿಂದ 76 ಸಾವಿರ ಕಟ್ ಆಗಿದೆ.
ಈ ಸುದ್ದಿ ಓದಿದ್ದೀರಾ? ದೀಪಾವಳಿ | ಮಂಗಳವಾರವೂ ಪ್ರವಾಸಿಗರಿಗಾಗಿ ತೆರೆಯಲಿದೆ ಬನ್ನೇರುಘಟ್ಟ ಉದ್ಯಾನವನ
ಈ ವಂಚನೆಯ ಬಗ್ಗೆ ಎಚ್ಚೆತ್ತ ಅವರು ಕೂಡಲೇ ಬ್ಯಾಂಕ್‌ಗೆ ಕರೆ ಮಾಡಿ ಅಕೌಂಟ್ ಅನ್ನು ಬ್ಲಾಕ್ ಮಾಡುವಂತೆ ತಿಳಿಸಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿ ಅಕೌಂಟ್ ಬ್ಲಾಕ್ ಮಾಡಲು ತಡಮಾಡಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾಂಕ್ ಖಾತೆಯಲ್ಲಿನ ಮೊತ್ತವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ, ಬೆಂಗಳೂರು ನಗರ ಪೊಲೀಸರು ಸೈಬರ್ ವಂಚನೆಯ ಜಾಲವನ್ನು ಪತ್ತೆ ಮಾಡಿದ್ದರು. ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ 18 ಮಾದರಿಯ ಸೈಬರ್ ಕ್ರೈಮ್‌ಗಳು ವರದಿಯಾಗಿದ್ದವು. 12,615 ಪ್ರಕರಣಗಳು ದಾಖಲಾಗಿದ್ದವು. ಈ ಸೈಬರ್ ವಂಚನೆಯ ಜಾಲದಲ್ಲಿ ಸಿಕ್ಕಿಬಿದ್ದ ಆರೋಪಿಗಳು ಹೂಡಿಕೆ ಹೆಸರಿನಲ್ಲಿ ಜನರಿಗೆ ಬರೋಬ್ಬರಿ ₹854 ಕೋಟಿ ವಂಚಿಸಿದ್ದರು.